ಕೊರೋನಾಗಿಂತಲೂ ಇದು ಅಪಾಯಕಾರಿ : ಸ್ವಾಮೀಜಿ ಎಚ್ಚರಿಕೆ

By Kannadaprabha News  |  First Published Jun 13, 2021, 9:22 AM IST
  • ಕೊರೋನಾಗಿಂತಲೂ ಇದೆ ಹೆಚ್ಚು ಅಪಾಯಕಾರಿ
  • ಶಿವಮೊಗ್ಗದ ಬೆಕ್ಕಿನ ಕಲ್ಮಠ ಸ್ವಾಮೀಜಿ ಎಚ್ಚರಿಕೆ 
  • ರಾಜ್ಯದ ಬೆಳವಣಿಗೆಗಳ ಬಗ್ಗೆ ಸ್ವಾಮೀಜಿಯಿಂದ ಸಂದೇಶ

ಶಿವಮೊಗ್ಗ (ಜೂ.13):  ನಾಯಕತ್ವ ಬದಲಾವಣೆ ವಿಚಾರ ಕೊರೋನಾಗಿಂತ ಅಪಾಯಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬೆಕ್ಕಿನ ಕಲ್ಮಠದ ಮುರುಘಾ ರಾಜೇಂದ್ರ ಸ್ವಾಮೀಜಿ, ನಾಯಕತ್ವಕ್ಕೆ ಅಡೆತಡೆ ತರುವ ಕೆಲಸವನ್ನು ಯಾರೂ ಮಾಡಬಾರದು. ಒಂದು ವೇಳೆ ಅಂತಹ ಕೆಲಸಕ್ಕೆ ಯಾರಾದರೂ ಪ್ರಯತ್ನಿಸಿದರೆ ತಮ್ಮ ತಲೆಯ ಮೇಲೆ ತಾವೇ ಕಲ್ಲು ಎತ್ತಿ ಹಾಕಿಕೊಂಡ ಹಾಗೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೇಳಿ ಬರುತ್ತಿದೆ. ರಾಜ್ಯಕ್ಕೆ ಎಂತಹ ನಾಯಕತ್ವ ಬೇಕು ಎಂಬುದನ್ನು ಜನತೆ ನಿರ್ಧರಿಸಬೇಕು ಎಂದರು.

Tap to resize

Latest Videos

ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರವಾಹ ಎದುರಾಯಿತು. ಆಗ ಪ್ರವಾಹ ಪರಿಸ್ಥಿಯನ್ನು ಒಬ್ಬರೇ ಎದುರಿಸಿದರು. ಪ್ರವಾಹ ಮುಗಿಯಿತು ಎನ್ನುವಷ್ಟರಲ್ಲಿ ಕೊರೋನಾ ಎದುರಾಗಿದೆ. ಕೊರೋನಾ ಮಹಾಮಾರಿಯನ್ನು ತಡೆಗಟ್ಟಲು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.

ಬೇರೆ ಯಾರಾದರೂ ಆಗಿದ್ದರೆ ಧೃತಿಗೆಡುತ್ತಿದ್ದರು. ಬೇರೆ ಯಾರಿಂದಲೂ ಇಂತಹ ಸಂಕಷ್ಟಎದುರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಹೀಗಾಗಿಯೇ ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದರು.

ರಾಜ್ಯದ ರೈತರಿಗೆ ಪರವಾಗಿರುವ, ಮಠ ಮಾನ್ಯಗಳಿಗೆ ದೇಣಿಗೆ ನೀಡಿದ ಮುಖ್ಯಮಂತ್ರಿ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಕೆಲಸ ಮಾಡದಿದ್ದರೆ ಯಾರು ನೆನಪಿಸಿಕೊಳ್ಳುತ್ತಾರೆ? ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಮಾತನ್ನು ಯಾರು ಕೂಡ ಹೇಳಬಾರದು. ಅದರಿಂದ ಈ ನಾಡಿಗೆ ದೊಡ್ಡ ಅನಾಹುತವಾಗುತ್ತದೆ. ಕೋವಿಡ್‌ಗಿಂತಲೂ ದೊಡ್ಡ ಆಘಾತವುಂಟಾಗಲಿದೆ.

ನಾಯಕತ್ವದ ಸ್ಥಿತ್ಯಂತರಕ್ಕೆ ಅವಕಾಶ ಕೊಡಬಾರದು. ಯಡಿಯೂರಪ್ಪ ನವರೇ ನಾಯಕತ್ವದಲ್ಲಿ ಮುಂದುವರೆಯಬೇಕು. ನಾಡು, ನುಡಿಗೆ ಅವರ ಸೇವೆ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

click me!