ಆಸ್ಪತ್ರೆಯಲ್ಲಿದ್ದ 76 ಬೆಡ್‌ಗಳು ಭರ್ತಿ| ಕಳೆದ ರಾತ್ರಿಯಿಂದ ಬಂದ ರೋಗಿಗಳು ಆಸ್ಪತ್ರೆಯ ಆಚೆಯೇ| ಎಲ್ಲ ವೆಂಟಿಲೇಟ್‌ರ್‌ಗಳ ಬೆಡ್‌ಗಳು ಫುಲ್| ಬೆಡ್ ಫುಲ್ ಇರುವುದರಿಂದ ರೋಗಿಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಸೆ.09): ದುರಂತ-1: ಲಿಂಗದಳ್ಳಿ ಗ್ರಾಮದಿಂದ ಸೋಂಕಿತನನ್ನು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆಗೆ ಕಾರಿನಲ್ಲಿ ತರಲಾಗುತ್ತದೆ. ಆತನಿಗೆ ಈಗಾಗಲೇ ಉಸಿರಾಟದ ಸಮಸ್ಯೆಯೂ ಆಗಿರುತ್ತದೆ. ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸುತ್ತಾರೆ ಕುಟುಂಬಸ್ಥರು. ಆದರೆ, ಆಸ್ಪತ್ರೆಯಲ್ಲಿ ಬೆಡ್ ಇರದೆ ಇರುವುದರಿಂದ ಕಾರಿನಲ್ಲಿಯೇ ಕಾಯಿಸಲಾಗುತ್ತದೆ. ಆತ ಅದರಲ್ಲಿಯೇ ಅಸು ನೀಗುತ್ತಾನೆ.
ದುರಂತ -2
ಹೀಗೆ ಮತ್ತೋರ್ವ ರೋಗಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆತರಲಾಗಿರುತ್ತದೆ. ಅವರಿಗೂ ಬೆಡ್ ಸಿಗುವುದೇ ಇಲ್ಲ. ಹೀಗಾಗಿ, ಅವರು ಪರಿತಪಿಸುವ ಬಗೆ ದೇವರಿಗೂ ಪ್ರೀತಿ ಎನ್ನುವಂತೆ ಇರುತ್ತದೆ. ಆದರೆ, ವೈದ್ಯರಿಗೂ ಏನು ಮಾಡಲಾರದಂತಹ ಸ್ಥಿತಿ. ಬೆಡ್ ಭರ್ತಿಯಾಗಿರುವುದರಿಂದ ಇವರನ್ನು ಎಲ್ಲಿ ಅಡ್ಮಿಟ್ ಮಾಡುವುದು ಎಂದು ಕೈ ಚೆಲ್ಲುತ್ತಾರೆ. ರೋಗಿಗಳ ಸಂಬಂಧಿಕರು ದಿಢೀರ್ ಪ್ರತಿಭಟನೆ ಮಾಡುತ್ತಾರೆ. ರೋಗಿ ಸಾವನ್ನಪ್ಪುತ್ತಾರೆ.
ದುರಂತ-3
ಯಲಬುರ್ಗಾ ತಾಲೂಕಿನ ಹಳ್ಳಿಯೊಂದರ ಕೋವಿಡ್ ಸೋಂಕಿತು ರಾಜಕೀಯ ನಾಯಕರು ಹೌದು. ಅವರಿಗೆ ವೆಂಟಿಲೇಟರ್ ಅನಿವಾರ್ಯವಾಗಿರುತ್ತದೆ. ಆದರೆ, ಇರುವ ವೆಂಟಿಲೇಟರ್‌ಗಳು ಫುಲ್ ಆಗಿವೆ. ತಕ್ಷಣ ಶಾಸಕರೊಬ್ಬರು ಕರೆ ಮಾಡಿ, ಒತ್ತಡ ಹಾಕುತ್ತಾರೆ. ಅನಿವಾರ್ಯವಾಗಿ ಉಸಿರಾಟ ಸಹಜ ಸ್ಥಿತಿಗೆ ಬಂದಿರುವ ರೋಗಿಯನ್ನು ವೆಂಟಿಲೇಟರ್‌ನಿಂದ ತೆರವು ಮಾಡಿ, ದಾಖಲು ಮಾಡುತ್ತಾರೆ. ಅವರೀಗ ಕೋವಿಡ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂಥ ಮನಕಲಕುವ ಘಟನೆ ನಡೆದಿದ್ದು ಮಂಗಳವಾರ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಇರುವ ಸರ್ಕಾರಿ ಕೋವಿಡ್ ಆಸ್ಪತ್ರೆಯ ಆವರಣದಲ್ಲಿ.
ಕೊಪ್ಪಳದಲ್ಲೀಗ ಆಡಿಯೋ ಬಾಂಬ್: ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ..!
ಕಳೆದೆರಡು ದಿನಗಳಂತೂ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಬರುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಆದರೆ, ಇಲ್ಲಿ ಬೆಡ್ ಸಿಗದೆ ಅನೇಕರು ಪ್ರಾಣ ತೆತ್ತುತ್ತಿದ್ದಾರೆ. ಇದರಿಂದ ಸ್ವತಃ ಜಿಲ್ಲಾಡಳಿತವೇ ಅದುರಿ ಹೋಗಿದೆ. ಇರುವ ಬೆಡ್ ಫುಲ್ ಆಗಿರುವುದರಿಂದ ಖಾಸಗಿಯಾಗಿ ಶಿಫಾರಸು ಮಾಡಬೇಕು. ಅಲ್ಲಿಯೂ ಬೆಡ್ ಫುಲ್ ಇರುವುದರಿಂದ ರೋಗಿಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲು ಆಗುತ್ತಿದೆ.
ಜಿಲ್ಲಾ ಕೇಂದ್ರದ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ 76 ಬೆಡ್‌ಗಳು ಇವೆ. ಇದರಲ್ಲಿ 20 ಆಕ್ಸಿಜನ್ ಬೆಡ್‌ಗಳು. ಉಳಿದ ಸಾಮಾನ್ಯ ಬೆಡ್‌ಗಳು. ಈ ಎಲ್ಲ ಬೆಡ್‌ಗಳು ಭರ್ತಿಯಾಗಿದೆ. ಇರುವ ವೆಂಟಿಲೇಟ್‌ರ್‌ಗಳ ಬೆಡ್‌ಗಳು ಫುಲ್ ಆಗಿವೆ.
ಈಗ ಬರುವ ರೋಗಿಗಳನ್ನು ಎಲ್ಲಿ ದಾಖಲು ಮಾಡಿಕೊಳ್ಳಬೇಕು ಎನ್ನುವುದು ಕೋವಿಡ್ ಆಸ್ಪತ್ರೆಯ ವೈದ್ಯರಿಗೆ ಸವಾಲು ಆಗಿದೆ. ಸಾಮಾನ್ಯ ಆಸ್ಪತ್ರೆಯಾಗಿದ್ದರೆ ಎಲ್ಲೆಂದರಲ್ಲಿ ಹಾಕಿ, ಚಿಕಿತ್ಸೆಯನ್ನು ನೀಡಬಹುದಿತ್ತು. ಆದರೆ, ಪ್ರತ್ಯೇಕ ಬೆಡ್‌ನಲ್ಲಿಯೇ ದಾಖಲು ಮಾಡಿ ಚಿಕಿತ್ಸೆ ನೀಡಬೇಕಾಗಿರುವುದರಿಂದ ಕೊಪ್ಪಳ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಆಸ್ಪತ್ರೆಯ ಆವರಣದಲ್ಲಿ ಇಲ್ಲವೇ ಆ್ಯಂಬುಲೆನ್ಸ್‌ನಲ್ಲಿ ಪ್ರಾಣಬಿಡುತ್ತಿದ್ದಾರೆ.
186 ಸಾವು
ಜಿಲ್ಲೆಯಲ್ಲಿ ಇದುವರೆಗೂ 8 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಈಗಾಗಲೇ 186 ಜನರು ಪ್ರಾಣತೆತ್ತಿದ್ದಾರೆ. ಇದರಲ್ಲಿ ಬೆಡ್ ಸಿಗದೆ ಸತ್ತವರು ಇದ್ದಾರೆ. ಗ್ರಾಮೀಣ ಪ್ರದೇಶದಿಂದ ಬಂದವರು ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಲು ಯತ್ನಿಸುತ್ತಾರೆ. ಬೆಡ್ ಸಿಗದೆ ಇದ್ದಾಗೆ ಜೀವವನ್ನೇ ಬಲಿಕೊಡುವಂತೆ ಆಗಿದೆ.
ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಇರುವ 76 ಬೆಡ್‌ಗಳು ಫುಲ್ ಆಗಿವೆ. ಹೀಗಾಗಿ, ಹೊಸದಾಗಿ ಬರುವ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದು ತೀವ್ರ ಸಮಸ್ಯೆಯಾಗುತ್ತಿದೆ. ತಕ್ಷಣ ಚಿಕಿತ್ಸೆ ದೊರೆಯುವಂತೆ ಆಗಲು ಶಿಫಾರಸು ಮಾಡಿ, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಡಿ.ಎಸ್. ಡಾ. ಪ್ರಕಾಶ ಕಬ್ಬರಗಿ ಅವರು ತಿಳಿಸಿದ್ದಾರೆ.
ಸ್ವಂತ ನಮ್ಮ ಮಾವನವರನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದರೂ ಬೆಡ್ ಇಲ್ಲದೆ ಆ್ಯಂಬುಲೆನ್ಸ್‌ನಲ್ಲಿಯೇ ಇರಿಸಲಾಯಿತು. ಅಲ್ಲಿಯೇ ಅವರು ಮರಣ ಹೊಂದಿದರು ಎಂದು ಗ್ರಾಮಸ್ಥ ಕಲೀಲ್‌ಸಾಬ್ ಲಿಂಗದಳ್ಳಿ ಅವರು ಹೇಳಿದ್ದಾರೆ.