ಪೌರ ಕಾರ್ಮಿಕರಿಗೆ ಸಂತಸದ ಸುದ್ದಿ..!

By Kannadaprabha News  |  First Published Mar 28, 2021, 7:55 AM IST

ಪೌರ ಕಾರ್ಮಿಕರಿಗೆ ತಲಾ 5 ಸಾವಿರ| ಬ್ಲಾಕ್‌ಸ್ಪಾಟ್‌ ಮುಕ್ತ ವಾರ್ಡ್‌ಗೆ 50 ಲಕ್ಷ ಪ್ರೋತ್ಸಾಹಧನ| ಹೊಸದಾಗಿ 67 ಶೌಚಾಲಯ ನಿರ್ಮಾಣ| ತ್ಯಾಜ್ಯ ನಿರ್ವಹಣೆಗೆ ಕಂಪನಿ ಸ್ಥಾಪನೆಗೆ ಚಿಂತನೆ| ತ್ಯಾಜ್ಯ ನಿರ್ವಹಣೆಗೆ 1622 ಕೋಟಿ ಅನುದಾನ| 


ಬೆಂಗಳೂರು(ಮಾ.28): ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ‘ಬ್ಲಾಕ್‌ ಸ್ಪಾಟ್‌’ ಮುಕ್ತವಾಗಿ ನಿರ್ವಹಿಸುವ ವಾರ್ಡ್‌ಗೆ 50 ಲಕ್ಷ ಪ್ರೋತ್ಸಾಹ ಧನ, ಹೊಸದಾಗಿ 67 ಸಾರ್ವಜನಿಕ ಶೌಚಾಲಯ ನಿರ್ಮಾಣ, ಬಿ.ಆರ್‌. ಅಂಬೇಡ್ಕರ್‌ ಜನ್ಮದಿನ ಆಚರಣೆಗೆ ಪ್ರತಿ ಪೌರ ಕಾರ್ಮಿಕರಿಗೆ ತಲಾ 5 ಸಾವಿರ ನೀಡುವುದು ಸೇರಿದಂತೆ ನಗರದ ತ್ಯಾಜ್ಯದ ನಿರ್ವಹಣೆ ಹಾಗೂ ಮತ್ತಿತರ ಯೋಜನೆಗಳಿಗೆ ಒಟ್ಟಾರೆ 1,622.33 ಕೋಟಿ ಅನುದಾನ ಒದಗಿಸಲಾಗಿದೆ.

ನಗರದ ಸ್ವಚ್ಛತೆಗೆ ಶ್ರಮಿಸುವ ಪ್ರತಿ ಪೌರಕಾರ್ಮಿಕರಿಗೆ ಅಗತ್ಯ ಸಲಕರಣೆ ಖರೀದಿಗೆ ಮಾಸಿಕ 200 ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗಿದೆ. ಪ್ರತಿ ವರ್ಷ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮ ದಿನವನ್ನು ಪೌರಕಾರ್ಮಿಕರು ಸಂಭ್ರಮದಿಂದ ಆಚರಿಸಲು ನೇರವಾಗಿ ತಲಾ 5 ಸಾವಿರ ನೀಡಲು ತೀರ್ಮಾನಿಸಿದ್ದು, ಇದಕ್ಕೆ ಬಜೆಟ್‌ನಲ್ಲಿ 7.50 ಕೋಟಿ ಒದಗಿಸಲಾಗಿದೆ.

Tap to resize

Latest Videos

ನಗರದಲ್ಲಿ ಅಸ್ತಿತ್ವದಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಓಪನ್‌ ಡಿಫೆಕೇಶನ್‌ ಫ್ರೀ (ಓಡಿಎಫ್‌ ಪ್ಲಸ್‌ ಪ್ಲಸ್‌) ಮಾನದಂಡಗಳೊಂದಿಗೆ ನಿರ್ವಹಿಸಲಾಗುವುದು. ಅಂತೆಯೆ ನಗರದಲ್ಲಿ ಹೊಸದಾಗಿ 67 ಸಾರ್ವಜನಿಕ ಶೌಚಾಲಯ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಶುಭ್ರ ಬೆಂಗಳೂರು ಯೋಜನೆಯಡಿ ಅನುದಾನ ಒದಗಿಸಲಾಗಿದೆ. ಅಂತೆಯೆ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಸ್ವತಂತ್ರವಾಗಿ ನಿರ್ವಹಿಸಲು ಒಂದು ಕಂಪನಿಯನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಬಿಬಿಎಂಪಿ ಬಜೆಟ್‌: ತೆರಿಗೆ ಬರೆ, ಹೊಸ ಯೋಜನೆ ಇಲ್ಲ..!

ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗಾಗಿ ಟೆಂಡರ್‌ ಅಂತಿಮಗೊಳಿಸಿ ಕಾರ್ಯಾದೇಶ ನೀಡಲಾಗಿದೆ. ಈ ಟೆಂಡರ್‌ಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುವ ವಾಹನಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್‌ಐಡಿ) ಹಾಜರಾತಿ ಮತ್ತು ಜಿಪಿಎಸ್‌ ಟ್ರ್ಯಾಕಿಂಗ್‌ ಅಳವಡಿಸಲಾಗಿದೆ. ವಾರ್ಡ್‌ಗಳ ಕಾರ್ಯ ನಿರ್ವಹಣೆ ಆಧರಿಸಿ ದೈನಂದಿನ ಶ್ರೇಯಾಂಕ ವ್ಯವಸ್ಥೆ ಇರುವುದರಿಂದ ಸೇವಾ ಪೂರೈಕೆದಾರರಲ್ಲಿ ಆರೋಗ್ಯಕರ ಸ್ಪರ್ಧೆ ಸೃಷ್ಟಿಯಾಗಿದೆ.
ನಿಮ್ಮ ಬೀದಿಯ ಸ್ವಚ್ಛತೆ ಬಗ್ಗೆ ಮೌಲ್ಯಮಾಪನ ಮಾಡಿ

ನಗರದ ಬೀದಿಗಳ ಕಸ ಗುಡಿಸುವ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸಲು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಗುವುದು. ಪ್ರತಿ ಪೌರಕಾರ್ಮಿಕರಿಗೆ ನಿರ್ದಿಷ್ಟರಸ್ತೆ ಅಥವಾ ಬೀದಿಯ ಒಂದು ಭಾಗ ಸ್ವಚ್ಛತೆಗೆ ಹಂಚಲಾಗಿದೆ. ನಾಗರಿಕರು ಇವರ ಕಾರ್ಯ ನಿರ್ವಹಣೆ ಬಗ್ಗೆ ಆನ್‌ಲೈನ್‌ನಲ್ಲಿ ಮೌಲ್ಯಮಾಪನ ಮಾಡಿ ತಿಳಿಸಬಹುದು. ಅಂತೆಯೆ ಪಾಲಿಕೆ ಪ್ರಸ್ತುತ ಯಾಂತ್ರಿಕ ಕಸಗುಡಿಸುವ ಯಂತ್ರಗಳನ್ನು ಬಳಸುತ್ತಿದೆ. ಈ ಯಂತ್ರಗಳ ಕಸ ಗುಡಿಸುವ ವೇಳಾಪಟ್ಟಿಯನ್ನು ಸಾರ್ವಜನಿಕರಿಗೆ ಒದಗಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಒಟ್ಟಾರೆ ಈ ಬಜೆಟ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೆ 522 ಕೋಟಿ ಬಂಡವಾಳ ಕಾಮಗಾರಿ ಒಳಗೊಂಡಂತೆ ಒಟ್ಟು 1,622.33 ಕೋಟಿ ಅನುದಾನ ಒದಗಿಸಲಾಗಿದೆ.
 

click me!