ಬಿಬಿಎಂಪಿ ಬಜೆಟ್‌: ತೆರಿಗೆ ಬರೆ, ಹೊಸ ಯೋಜನೆ ಇಲ್ಲ..!

By Kannadaprabha NewsFirst Published Mar 28, 2021, 7:38 AM IST
Highlights

9,291 ಕೋಟಿ ಗಾತ್ರದ ಆಯವ್ಯಯ ಮಂಡನೆ| ಬಿಬಿಎಂಪಿಗೆ 5 ಸಾವಿರ ಕೋಟಿ ಮಾತ್ರ ಆದಾಯ| ಉಳಿದದ್ದು ಸರ್ಕಾರದ ಅನುದಾನ| ಸ್ಮಾರ್ಟ್‌ ಸಿಟಿ ರಸ್ತೆ, 12 ಹೈ-ಡೆನ್ಸಿಟಿ ಕಾರಿಡಾರ್‌ ಉನ್ನತೀಕರಣ, ಮೆಟ್ರೋ ಮಾರ್ಗಗಳ ವಿಸ್ತರಣೆಗೆ ಪ್ರಾಮುಖ್ಯತೆ| ಕೆರೆ ಸಂರಕ್ಷಣೆಗೆ ಬೇಲಿ| 

ಬೆಂಗಳೂರು(ಮಾ.28): ಬಿಬಿಎಂಪಿ ಅಧಿಕಾರ ವ್ಯಾಪ್ತಿಗೆ ಬರುವ ಯಾವುದೇ ತೆರಿಗೆಯನ್ನೂ ಹೆಚ್ಚಳ ಮಾಡದೆ, ಹೊಸ ತೆರಿಗೆ ಪ್ರಸ್ತಾಪಿಸದೆ, ಯಾವುದೇ ಪ್ರಮುಖ ಕಾರ್ಯಕ್ರಮ ಹಾಗೂ ಯೋಜನೆಗಳನ್ನೂ ಘೋಷಿಸದೆ ಮುಂಬರುವ ಚುನಾವಣಾ ದೃಷ್ಟಿಯಿಂದ ಆದಾಯವನ್ನು ಕೇವಲ ನಿರ್ವಹಣಾ ವೆಚ್ಚಗಳಿಗೆ ವ್ಯಯಿಸುವುದೇ ಧ್ಯೇಯವನ್ನಾಗಿಸಿಕೊಂಡ 9,291.33 ಕೋಟಿ ಗಾತ್ರದ ಬಿಬಿಎಂಪಿಯ ‘ಬೃಹತ್‌ ನಿರ್ವಹಣಾ’ ಬಜೆಟ್‌ ಶನಿವಾರ ಮಂಡನೆಯಾಗಿದೆ.

ಈಗಾಗಲೇ ಬಿಬಿಎಂಪಿಯು ಗುತ್ತಿಗೆದಾರರಿಗೆ 3,000 ಕೋಟಿ ಹಣ ಪಾವತಿ ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ಸುಮಾರು .7 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ಈಗಾಗಲೇ ಚಾಲ್ತಿಯಲ್ಲಿವೆ. ಬಿಬಿಎಂಪಿ ಸಂಪನ್ಮೂಲಗಳಿಂದ ಪ್ರಸಕ್ತ ಸಾಲಿನಲ್ಲಿ ತೆರಿಗೆ ಆದಾಯ .3,353.20 ಕೋಟಿ, .1,350.78 ಕೋಟಿ ತೆರಿಗೇಯತರ ಆದಾಯ ಸೇರಿದಂತೆ .5,021.23 ಕೋಟಿ ಮಾತ್ರ ನಿರೀಕ್ಷಿಸಲಾಗಿದೆ. .3,845.56 ಕೋಟಿ ರಾಜ್ಯ ಸರ್ಕಾರ ಹಾಗೂ .421.02 ಕೋಟಿ ಕೇಂದ್ರದ ಅನುದಾನ ಸೇರಿಸಿದರೂ .8,969 ಕೋಟಿ ಮಾತ್ರ ಆದಾಯ ನಿರೀಕ್ಷಿಸಬಹುದು.

ಪಾಲಿಕೆಯ ಆರ್ಥಿಕ ಪರಿಸ್ಥಿತಿ ಈ ರೀತಿ ಇರುವುದು ಹಾಗೂ ತೆರಿಗೆ ಹೆಚ್ಚಳ, ಹೊಸ ತೆರಿಗೆ ಪ್ರಸ್ತಾಪವಿಲ್ಲದೆ ಬಜೆಟ್‌ ಮಂಡಿಸಿರುವುದರಿಂದ ಯಾವುದೇ ಹೊಸ ಕಾರ್ಯಕ್ರಮ ಅಥವಾ ಬೃಹತ್‌ ಮೂಲಭೂತ ಸೌಕರ್ಯಗಳ ಯೋಜನೆ ಘೋಷಿಸಲು ಸಾಧ್ಯವಾಗಿಲ್ಲ. ಹೀಗಿದ್ದರೂ ಮುಂಬರುವ ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಸಾರ್ವಜನಿಕರಿಗೆ ಹೊರೆಯಾಗದೆ, ಪಾಲಿಕೆಯ ಆಡಳಿತ ಹಾಗೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲಷ್ಟೇ ಆದ್ಯತೆ ನೀಡಿ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಬಜೆಟ್‌ ಮಂಡಿಸಿದ್ದಾರೆ.

ಈ ಬಾರಿ ಬಿಬಿಎಂಪಿ ಬಜೆಟ್‌ ಗಾತ್ರ 6500 ಕೋಟಿ?

ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಸಭೆಯಲ್ಲಿ ಒಟ್ಟು 9,291.33 ಕೋಟಿ ಸ್ವೀಕೃತಿಗಳು ಹಾಗೂ 9,286.80 ಕೋಟಿ ವೆಚ್ಚಗಳ ಅಂದಾಜಿನೊಂದಿಗೆ 4.53 ಉಳಿತಾಯ ಬಜೆಟ್‌ ಮಂಡನೆಯಾಗಿದೆ.

ಚಾಲ್ತಿ ಕಾಮಗಾರಿ ವೇಗಕ್ಕಷ್ಟೇ ಆದ್ಯತೆ

ಬಜೆಟ್‌ನಲ್ಲಿ ಹೊಸದಾಗಿ ಪ್ರಮುಖ ಯೋಜನೆ ಘೋಷಣೆಯಾಗಿಲ್ಲ. ಹೀಗಾಗಿ ದೀರ್ಘ ಕಾಲದಿಂದ ಚಾಲ್ತಿಯಲ್ಲಿರುವ ಯೋಜನೆಗಳಾದ ಸ್ಮಾರ್ಟ್‌ ಸಿಟಿ ರಸ್ತೆಗಳು, 12 ಹೈ-ಡೆನ್ಸಿಟಿ ಕಾರಿಡಾರ್‌ ಉನ್ನತೀಕರಣ, ಮೆಟ್ರೋ ಮಾರ್ಗಗಳ ವಿಸ್ತರಣೆ, ಸಬ್‌-ಅರ್ಬನ್‌ ರೈಲು ಯೋಜನೆ, 25 ಕೆರೆಗಳ ಪುನಶ್ಚೇತನ, ಘನತ್ಯಾಜ್ಯ ವಿಲೇವಾರಿ ಯೋಜನೆಗೆ ವೇಗ ನೀಡಿ ಪೂರ್ಣಗೊಳಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ವಾರ್ಡ್‌ ಸಮಿತಿಗೆ ಶೇ.1 ರಷ್ಟು ಅನುದಾನ

ಅಧಿಕಾರ ವಿಕೇಂದ್ರೀಕರಣದ ಮೂಲ ಉದ್ದೇಶದಿಂದ ನಗರದಲ್ಲಿ ಬಿಬಿಎಂಪಿ ಕಾಯ್ದೆ-2020 ಜಾರಿಗೆ ಬಂದಿದ್ದು, ಮೊದಲ ಬಾರಿಗೆ ಪಾಲಿಕೆಯು ನಾಗರಿಕ ಸೇವೆಗಳ ನಿರ್ವಹಣೆಗಳ ತೀರ್ಮಾನವನ್ನು ವಲಯ ಮಟ್ಟದಲ್ಲೇ ನಿರ್ಧರಿಸಲಿದ್ದು 2 ಸಾವಿರ ಕೋಟಿ ರು.ಗಳ ಸಂಪನ್ಮೂಲಗಳ ಹಂಚಿಕೆಯ ಆಡಳಿತಾತ್ಮಕ ನಿರ್ಧಾರಗಳನ್ನು ವಲಯ ಮಟ್ಟದಲ್ಲೇ ಕೈಗೊಳ್ಳಲು ಅಧಿಕಾರ ನೀಡಿದೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ತೆರಿಗೆಯ ಶೇ.1ರಷ್ಟು ಅನುದಾನವನ್ನು ವಾರ್ಡ್‌ ಸಮಿತಿಗೆ ನೀಡಲು ತೀರ್ಮಾನಿಸಲಾಗಿದೆ.

ಜೊತೆಗೆ ಕಟ್ಟಡ ಪರವಾನಗಿಯಿಂದ ವಾಸ ದೃಢೀಕರಣ ಪ್ರಮಾಣ ಪತ್ರ ಪಡೆಯುವವರೆಗೂ ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ ರೂಪುರೇಷೆಗಳ ಅಡಿಯಲ್ಲಿ ಹೊಸದಾಗಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರ ಮೂಲಕ ಸರಳ ರೀತಿಯಲ್ಲಿ ಒಂದೇ ಅರ್ಜಿ ಸಲ್ಲಿಸಿ ಏಕೀಕೃತ ತಂತ್ರಾಂಶ ಬಳಸಲು ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ.

ಇನ್ನು ಕೆರೆಯ ಪ್ರದೇಶವನ್ನು ರಕ್ಷಿಸಲು ಕೆರೆಗಳ ಸುತ್ತಲು ಫೆನ್ಸಿಂಗ್‌ ಅಳವಡಿಸಲು .10 ಕೋಟಿ, ನಾಗರಿಕರಿಗಾಗಿ ಪಾದಚಾರಿ ಮಾರ್ಗ ಅಭಿಯಾನದ ಅಂಗವಾಗಿ ಪ್ರತಿ ವಾರ್ಡ್‌ ಸಮಿತಿಗೆ .20 ಲಕ್ಷಗಳನ್ನು ಪಾದಚಾರಿ ಮಾರ್ಗ ದುರಸ್ತಿಗಾಗಿ ನೀಡಲು ತೀರ್ಮಾನಿಸಲಾಗಿದೆ.

ಬೃಹತ್‌ ವೃಕ್ಷ್ಯೋದ್ಯಾನ

ಮಾಚೋಹಳ್ಳಿ, ಕಾಡುಗೋಡಿಯಲ್ಲಿ ಬೃಹತ್‌ ವೃಕ್ಷೋದ್ಯಾನಗಳ ನಿರ್ಮಾಣ ಮತ್ತು ಜೆ.ಪಿ.ಪಾರ್ಕ್ನ ಅಭಿವೃದ್ಧಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ನಗರದ ಇತಿಹಾಸ, ಸಂಸ್ಕೃತಿ, ಕಲೆ ಪ್ರತಿಬಿಂಬಿಸಲು ಹಾಗೂ ಯುವ ಜನತೆಗೆ ಪರಿಚಯ ಮಾಡುವ ಉದ್ದೇಶದಿಂದ ಎನ್‌ಜಿಇಎಫ್‌ ಮತ್ತು ಮೈಸೂರು ಲ್ಯಾಂಪ್‌ ಪ್ರದೇಶದಲ್ಲಿ ಎಕ್ಸ್‌ಪಿರೀಯನ್ಸ್‌ ಬೆಂಗಳೂರು ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
 

click me!