Bengaluru: ನಾಗರಿಕರ ಜಲ ಮಾರ್ಗಕ್ಕೆ ತ್ಯಾಜ್ಯ ಎಸೆದವರ ಮೇಲೆ ಬಿಬಿಎಂಪಿ ಕಾನೂನು ಕ್ರಮ

By Sathish Kumar KHFirst Published Dec 15, 2022, 6:14 PM IST
Highlights

ಬೆಂಗಳೂರು ನಾಗರೀಕರ ಜಲ ಮಾರ್ಗ ಯೋಜನೆ ( ಕೋರಮಂಗಲ ಕಣಿವೆ- ಕೆ.100)ಯ ಮಾರ್ಗಕ್ಕೆ ಹೊಂದಿಕೊಂಡಿರುವಂತಹ ಮಳಿಗೆಗಳು ಕಾಲುವೆ ಒತ್ತುವರಿ ಮಾಡಿರುವ ಹಾಗೂ ತ್ಯಾಜ್ಯ ವಸ್ತುಗಳನ್ನು ರಾಜಕಾಲುವೆ ಮತ್ತು ಪಾದಾಚಾರಿ ಮಾರ್ಗದಲ್ಲಿ ಹಾಕಿರುವ ಮಾಲೀಕರ ಮೇಲೆ ಬಿಬಿಎಂಪಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಬೆಂಗಳೂರು (ಡಿ.15): ಬೆಂಗಳೂರು ನಾಗರೀಕರ ಜಲ ಮಾರ್ಗ ಯೋಜನೆ (ಕೆ-100)ಯ ಮಾರ್ಗಕ್ಕೆ ಹೊಂದಿಕೊಂಡಿರುವಂತಹ ಮಳಿಗೆಗಳು ಕೆಲ ಸಾಮಗ್ರಿಗಳನ್ನು ಹಾಕಿ ಒತ್ತುವರಿಗೊಳಿಸಿರುವುದು, ತ್ಯಾಜ್ಯ ವಸ್ತುಗಳನ್ನು ರಾಜಕಾಲುವೆಯಲ್ಲಿ ಮತ್ತು ಪಾದಾಚಾರಿ ಮಾರ್ಗದಲ್ಲಿ ಹಾಕುತ್ತಿರುವುದು ಕಂಡುಬಂದಿದೆ. ಅದನ್ನು ಸಂಬಂಧಪಟ್ಟ ಮಳಿಗೆಗಳ ಮಾಲೀಕರು ಕೂಡಲೆ ತೆರವುಗೊಳಿಸಬೇಕು ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಸೂಚನೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎನ್‌.ಆರ್‌. ರಸ್ತೆ (ಕೆ.ಆರ್.ಮಾರುಕಟ್ಟೆ) ಯಿಂದ ಬೆಳ್ಳಂದೂರು ಕೆರೆಯವರೆಗೆ 'ಬೆಂಗಳೂರು ನಾಗರೀಕರ ಜಲ ಮಾರ್ಗ ಯೋಜನೆ (ಕೆ-100)' ಯ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಯೋಜನೆಯಡಿ ನಗರದ ಕೋರಮಂಗಲ ಕಣಿವೆಯ ಎನ್‌ಆರ್ ರಸ್ತೆಯಿಂದ ಬೆಳ್ಳಂದೂರು ಕೆರೆಯವರೆಗಿನ ಕಾಲುವೆ ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ, ಕಾಲುವೆಯನ್ನು ಸಂಪೂರ್ಣವಾಗಿ ತ್ಯಾಜ್ಯ ನೀರು ಹರವಿನಿಂದ ಮುಕ್ತಗೊಳಿಸಿ, ಕಾಲುವೆಯಲ್ಲಿ ಸದಾಕಾಲ, ಶುದ್ದೀಕರಿಸಿದ ನೀರು ಹರಿಯುವಂತೆ ಮಾಡುವುದು ಹಾಗೂ ಸೌಂದರ್ಯೀಕರಣ ಮಾಡುವುದು ಯೋಜನೆ ಉದ್ದೇಶವಾಗಿದೆ.

ಕೊರಿಯನ್ ಮಾದರಿಗೆ ಕೋರಮಂಗಲ ರಾಜ ಕಾಲುವೆ ಅಭಿವೃದ್ಧಿ! ಸ್ವಚ್ಛ ನೀರು, ಸುಂದರ ಉದ್ಯಾನ

ಅಭಿವೃದ್ಧಿ ಮಾಡಿದ ರಾಜಕಾಲುವೆಗೆ ಹಾನಿ: ಈ ಯೋಜನೆಯ ಎನ್.ಆರ್. ರಸ್ತೆಯಿಂದ ಬೆಳ್ಳಂದೂರು ಕೆರೆಯವರೆಗಿನ ಕಾಲುವೆಯಲ್ಲಿ ಪಾದಾಚಾರಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಪಾದಾಚಾರಿ ಮಾರ್ಗ ಮತ್ತು ಬಿಡ್‌ಗಳಲ್ಲಿ ಈ ಮಾರ್ಗಕ್ಕೆ ಹೊಂದಿಕೊಂಡಿರುವ ಕೆಲವು ಮಳಿಗೆಗಳು ಸಾಮಗ್ರಿಗಳನ್ನು ಹಾಕಿ ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ತ್ಯಾಜ್ಯ ವಸ್ತುಗಳನ್ನು ರಾಜಕಾಲುವೆಯಲ್ಲಿ ಮತ್ತು ಪಾದಾಚಾರಿ ಮಾರ್ಗದಲ್ಲಿ ಹಾಕುತ್ತಿರುವುದು ಕಂಡು ಬಂದಿರುತ್ತದೆ. ಇದರಿಂದಾಗಿ ಅಭಿವೃದ್ಧಿಪಡಿಸಲಾದ ಕೆಲ ಭಾಗಗಳಿಗೆ ಹಾನಿಯಾಗಿರುತ್ತದೆ.

ಇಕ್ಕೆಲಗಳ ಮಾಲೀಕರ ಮೇಲೆ ಕಾನೂನು ಕ್ರಮ: ಈ ರೀತಿ ಅಭಿವೃದ್ಧಿ ಮಾಡಲಾದ ಪಾದಾಚಾರಿಗಳ ಮಾರ್ಗಕ್ಕೆ (Walkway) ಆಡಚಣೆಯಾಗುವ ರೀತಿಯಲ್ಲಿ ಹಾಕಿರುವ ಸಾಮಗ್ರಿಗಳನ್ನು ಸಂಬಂಧಪಟ್ಟ ಮಳಿಗೆಗಳ ಮಾಲೀಕರು ಕೂಡಲೇ ತೆರವುಗೊಳಿಸಬೇಕು. ಇನ್ನು ಮುಂದೆ ಯಾವುದೇ ಸಾಮಗ್ರಿಗಳನ್ನು ಮತ್ತು ತ್ಯಾಜ್ಯ ವಸ್ತುಗಳನ್ನು ಪಾದಾಚಾರಿ ಮಾರ್ಗದಲ್ಲಿ ಹಾಕದಂತೆ ಮತ್ತು ಅಭಿವೃದ್ಧಿಪಡಿಸಲಾದ ಕಾಲುವೆಯ ಭಾಗಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಸಂಬಂಧಪಟ್ಟ ಮಳಿಗೆಯವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪ್ರಧಾನ ಅಭಿಯಂತರರಾದ ಶ್ರೀ ಪ್ರಹ್ಲಾದ್ ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

ಬೆಂಗಳೂರು: ಕೋರಮಂಗಲ ಕಣಿವೆ ಜಲಮಾರ್ಗಕ್ಕೆ ಶಂಕು

ಕೆ-100 ರಾಜಕಾಲುವೆ ವಿವರ: ಕೋರಮಂಗಲದ ಈ ರಾಜುಕಾಲುವೆ ಕೆ.ಆರ್‌.ಮಾರುಕಟ್ಟೆಯ ಧರ್ಮಾಂಬುದಿ ಕೆರೆಯಿಂದ ಆರಂಭಗೊಂಡು ಶಾಂತಿನಗರ, ಹೊಸೂರು ರಸ್ತೆ, ಕೋರಮಂಗಲ ಮೂಲಕ ಬೆಳ್ಳಂದೂರು ಕೆರೆಗೆ ಸೇರುತ್ತದೆ. ಒಟ್ಟು 12 ಕಿ.ಮೀ ಉದ್ದ ಕಾಲುವೆ ಹರಿಯುತ್ತದೆ. ಕಾಲುವೆಯ ಎರಡೂ ಕಡೆ ಒತ್ತುವರಿ ತೆರವುಗೊಳಿಸುವುದರೊಂದಿಗೆ ಕೈ ತೋಟ ನಿರ್ಮಾಣ, ಕಾಲುವೆಯಲ್ಲಿ ಮೆಟ್ಟಿಲುಗಳ ನಿರ್ಮಾಣ, ಕಾಲುವೆ ಹರಿದು ಹೋಗುವ ಮಾರ್ಗದಲ್ಲಿ ಬರುವ ಸೇತುವೆಗಳ ಕೆಳಭಾಗದಲ್ಲಿ ವಿದ್ಯುತ್‌ ದೀಪಗಳ ಅಳವಡಿಕೆ, ರಾಜಕಾಲುವೆ ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡುವುದು (ಚರ್ಚ್ ಸ್ಟ್ರೀಟ್‌ ಮಾದರಿ) ರಾಜಕಾಲುವೆ ಬಳಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಲು ಸೂಕ್ತ ಕಡೆಗಳಲ್ಲಿ ಸುರಕ್ಷಿತ ರೀತಿಯಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಬೇಕು. ರಾಜಕಾಲುವೆ ಇಕ್ಕೆಲಗಳಲ್ಲಿ ಅಡ್ಡಗೋಡೆ ನಿರ್ಮಾಣ. ರಾಜಕಾಲುವೆ ಇಕ್ಕೆಲಗಳಲ್ಲಿ ಹೂಳು ತೆಗೆಯಲು ಅನುವಾಗುವಂತೆ ರಸ್ತೆ ನಿರ್ಮಾಣ ಸೇರಿದಂತೆ ಮೊದಲಾದ ಅಭಿವೃದ್ಧಿಯನ್ನು ಈ ಯೋಜನೆ ಒಳಗೊಂಡಿದೆ. ಈ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2021ರ ಮಾರ್ಚ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. 

click me!