ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಸ್ವಾತಂತ್ರ್ಯೋತ್ಸವಕ್ಕೂ ಅನುದಾನ ಇಲ್ಲ

By Kannadaprabha NewsFirst Published Aug 15, 2019, 9:18 AM IST
Highlights

ಬಿಬಿಎಂಪಿ ಶಾಲಾ ಕಾಲೇಜುಗಳು ಅತ್ಯಂತ ದುಸ್ಥಿತಿಯಲ್ಲಿವೆ. ಇಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಕೂಡ ಇಲ್ಲಿ ಹಣದ ಕೊರತೆ ಇದೆ. 

ಬೆಂಗಳೂರು [ಆ.15]:  ರಾಜ್ಯ ಸರ್ಕಾರ ಬಿಬಿಎಂಪಿ ಬಜೆಟ್‌ಗೆ ತಡೆ ನೀಡಿದ ಪರಿಣಾಮ ಬಿಬಿಎಂಪಿಯ ಶಾಲೆ ಮತ್ತು ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗಾಗಿ ಹಣವಿಲ್ಲದಂತಾಗಿದೆ.

ಪ್ರತಿ ವರ್ಷ ಬಿಬಿಎಂಪಿ ಶಾಲೆ, ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಶಿಕ್ಷಣ ವಿಭಾಗದಿಂದ ಅನುದಾನ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿಲ್ಲ ಎಂಬ ಕಾರಣಕ್ಕಾಗಿ ಬಜೆಟ್‌ ತಡೆ ಹಿಡಿಯಲಾಗಿದೆ. ಇದರಿಂದ ಪಾಲಿಕೆ ಸ್ವಾತಂತ್ರ್ಯ ದಿನಚಾರಣೆಗೆ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಿಲ್ಲ. ಹೀಗಾಗಿ ಶಾಲೆ, ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ಹಣವನ್ನು ಖರ್ಚು ಮಾಡಿ ಸ್ವಾತಂತ್ರ್ಯೋತ್ಸವ ಆಚರಿಸುವಂತೆ ಶಿಕ್ಷಣ ಸ್ಥಾಯಿ ಸಮಿತಿ ಸೂಚನೆ ನೀಡಿದೆ.

ಸಿಎಂಗೆ ಪತ್ರ:  ಬಿಬಿಎಂಪಿ ಶಿಕ್ಷಣ ಯೋಜನೆಗಳಿಗೆ ಆರ್ಥಿಕ ಮುಗ್ಗಟ್ಟು ಉಂಟಾಗಿರುವ ಕುರಿತಂತೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್‌ ಪಾಷ ಮೇಯರ್‌ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಬಿಬಿಎಂಪಿಯ ನರ್ಸರಿ, ಪ್ರಾಥಮಿಕ, ಪ್ರೌಢ ಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಲ್ಲಿ 17,570 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ : ಬೆಂಗಳೂರಲ್ಲಿ ಹಲವು ಮಾರ್ಗ ಬದಲಾವಣೆ

ಅವರಿಗೆಲ್ಲ ಪುಸ್ತಕ, ಬ್ಯಾಗ್‌, ಸಾಕ್ಸ್‌ ಸೇರಿ ಇನ್ನಿತರ ವಸ್ತುಗಳನ್ನು ಒದಗಿಸಬೇಕು. ಜತೆಗೆ ಶಾಲೆ, ಕಾಲೇಜುಗಳಲ್ಲಿ ಕುಡಿಯುವ ನೀರಿನ ಘಟಕ, ಶೌಚಗೃಹ ನಿರ್ಮಾಣ ಮಾಡಬೇಕಿದೆ. ಬಜೆಟ್‌ಗೆ ತಡೆ ನೀಡಿದ್ದರಿಂದ ಆ ವ್ಯವಸ್ಥೆಗಳನ್ನು ಮಾಡಲು ಅನುದಾನವಿಲ್ಲದಂತಾಗಿದೆ. ಹೀಗಾಗಿ ಕೂಡಲೆ ಬಜೆಟ್‌ಗೆ ಅನುಮೋದನೆ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

click me!