ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ದಾಖಲೆ?

By Kannadaprabha NewsFirst Published Mar 10, 2021, 7:18 AM IST
Highlights

ಪಾಲಿಕೆ ವ್ಯಾಪ್ತಿಯಲ್ಲಿ 18 ಲಕ್ಷ ಆಸ್ತಿ| 3500 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ| ಈಗಾಗಲೇ ಶೇ.75ರಷ್ಟು ತೆರಿಗೆ ಸಂಗ್ರಹ| ಮುಂದಿನ 20 ದಿನಗಳಲ್ಲಿ ಮತ್ತಷ್ಟು ತೆರಿಗೆ ಸಂಗ್ರಹ ಸಾಧ್ಯತೆ| ಹೀಗಾದರೆ ಕಳೆದ ಸಾಲಿನ ದಾಖಲೆ ಮುರಿಯಲಿರುವ ಪಾಲಿಕೆ| 
 

ಬೆಂಗಳೂರು(ಮಾ.10): ಕೊರೋನಾ ಸೋಂಕಿನ ಆರ್ಥಿಕ ಸಂಕಷ್ಟದ ನಡುವೆಯೂ ಬಿಬಿಎಂಪಿ 2020-21ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹ ಸಾಧ್ಯತೆ ದಟ್ಟವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 18 ಲಕ್ಷ ಆಸ್ತಿಗಳಿದ್ದು, ಈ ಆಸ್ತಿಗಳಿಂದ 2020-21ನೇ ಸಾಲಿನಲ್ಲಿ 3,500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಮಾ.9ರ ವರೆಗೆ 2,627 ಕೋಟಿ ಸಂಗ್ರಹಿಸುವ ಮೂಲಕ ಶೇ.75ರಷ್ಟು ಗುರಿ ಸಾಧನೆ ಮಾಡಿದೆ. ಆರ್ಥಿಕ ವರ್ಷ ಮುಕ್ತಾಯಗೊಳ್ಳುವುದಕ್ಕೆ ಇನ್ನೂ 20 ದಿನ ಬಾಕಿ ಇದ್ದು, ಈ ಹಿಂದಿನ ವರ್ಷಗಳಿಗಿಂತ ಪ್ರಸಕ್ತ ಸಾಲಿನಲ್ಲಿ ಅಧಿಕ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಿಸುವ ಸಾಧ್ಯತೆ ಇದೆ.

ಕಳೆದ 2019-20ನೇ ಸಾಲಿನಲ್ಲಿ 3,500 ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆಗ 2,659 ಕೋಟಿ ಸಂಗ್ರಹಿಸುವ ಮೂಲಕ ಬಿಬಿಎಂಪಿ ದಾಖಲೆ ಸೃಷ್ಟಿಮಾಡಿತ್ತು. ಪ್ರಸಕ್ತ 2020-21ನೇ ಸಾಲಿನಲ್ಲಿ ಮಾ.9ರ ವರೆಗೆ 2,627 ಕೋಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ತೆರಿಗೆ ಸಂಗ್ರಹ ಸರಿಗಟ್ಟುವುದಕ್ಕೆ ಇನ್ನು ಕೇವಲ 32 ಕೋಟಿ ಸಂಗ್ರಹವಾಗಬೇಕಿದೆ. ಆರ್ಥಿಕ ವರ್ಷ ಮುಕ್ತಾಯಗೊಳ್ಳುವುದಕ್ಕೆ ಇನ್ನೂ 20 ದಿನ ಬಾಕಿ ಇರುವುದರಿಂದ ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಿಸುವ ಸಾಧ್ಯತೆ ಇದೆ.

ಬಿಬಿಎಂಪಿಗೆ ಸಿಗ್ತಿಲ್ಲ ಪೂರ್ತಿ ಬಜೆಟ್‌ ದುಡ್ಡು..!

ಆಫ್‌ ಲೈನ್‌ ಪಾವತಿ ಹೆಚ್ಚು:

ಲಾಕ್‌ಡೌನ್‌ ಅವಧಿಯಲ್ಲಿ ಮೇ ತಿಂಗಳಾಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5 ರಿಯಾಯಿತಿ ನೀಡಲಾಗಿದ್ದು, ಈ ವೇಳೆ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಿತ್ತು. ಕೋವಿಡ್‌ ಇಳಿಮುಖವಾದ ನಂತರ ಆಸ್ತಿ ತೆರಿಗೆ ವಸೂಲಿ ಅಭಿಯಾನ ಆರಂಭಿಸಿದ ನಂತರ ಚಲನ್‌ ಮೂಲಕ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗಿದೆ. ಆನ್‌ಲೈನ್‌ ಮೂಲಕ 1,289 ಕೋಟಿ ಹಾಗೂ ಬ್ಯಾಂಕ್‌ನಲ್ಲಿ ಚಲನ್‌ ಮೂಲಕ 1,338 ಕೋಟಿ ಆಸ್ತಿ ತೆರಿಗೆ ಪಾವತಿಯಾಗಿದೆ.

4 ತಿಂಗಳಲ್ಲಿ ತೆರಿಗೆ ವಸೂಲಿ ನೀರಸ:

ಕಳೆದ ನ.8ರ ಅಂತ್ಯಕ್ಕೆ 2,148 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಶೇ.61.37 ಸಾಧನೆ ಮಾಡಲಾಗಿತ್ತು. ಈ ವೇಳೆ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡ ವಲಯವಾರು ಹಾಗೂ ವಾರ್ಡ್‌ವಾರು 100 ಸುಸ್ತಿದಾರರನ್ನು ಗುರುತಿಸಿ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಆದರೂ ನಾಲ್ಕು ತಿಂಗಳ ಅವಧಿಯಲ್ಲಿ (ನ.7ರಿಂದ ಮಾ.7) 458 ಕೋಟಿ (ಶೇ.13) ಮಾತ್ರ ಆಸ್ತಿ ತೆರಿಗೆ ಸಂಗ್ರಹವಾಗಿದೆ.

ಕೊರೋನಾ ಸೋಂಕಿನ ನಡುವೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಸುಸ್ತಿದಾರರಿಗೆ ನೋಟಿಸ್‌ ನೀಡಿ ಹೆಚ್ಚಿನ ತೆರಿಗೆ ಸಂಗ್ರಹಿಸಿದ್ದಾರೆ. ದಾಖಲೆ ಪ್ರಮಾಣದ ತೆರಿಗೆ ಸಂಗ್ರಹ ಸಂಪೂರ್ಣ ಕೀರ್ತಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಮತ್ತು ಅಧಿಕಾರಿ ಸಿಬ್ಬಂದಿಗೆ ಸಲ್ಲಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

2020-21 ಸಾಲಿನ ವಲಯವಾರು ತೆರಿಗೆ ಸಂಗ್ರಹ ವಿವರ

ವಲಯ ತೆರಿಗೆ ಸಂಗ್ರಹ(ಕೋಟಿ)

ಮಹಾದೇವಪುರ 718.25
ಪೂರ್ವ 506.23
ದಕ್ಷಿಣ 384.16
ಪಶ್ಚಿಮ 269.08
ಬೊಮ್ಮನಹಳ್ಳಿ 266.54
ಯಲಹಂಕ 218.69
ರಾಜರಾಜೇಶ್ವರಿನಗರ 176.77
ದಾಸರಹಳ್ಳಿ 72.45
ಒಟ್ಟು 2,627.18

ಕಳೆದ ಐದು ವರ್ಷ ತೆರಿಗೆ ಸಂಗ್ರಹ ವಿವರ
ವರ್ಷ ಗುರಿ ಸಂಗ್ರಹ ಶೇಕಡ

2016-17 2,300 1,997 94.85
2017-18 2,600 2,132 83.76
2018-19 3,100 2,529 69.29
2019-20 3,500 2,659 76
2020-21 3,500 2,627(ಮಾ.9ಕ್ಕೆ) 75
 

click me!