
ಬೆಂಗಳೂರು(ಡಿ.18): ಖಾಸಗಿ ಸಂಘ ಸಂಸ್ಥೆಗಳು ಮನೆ-ಮನೆ ಸಮೀಕ್ಷೆ ನಡೆಸಿ ಮತದಾರರ ದತ್ತಾಂಶ ಸಂಗ್ರಹಣೆಗೆ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಖಾಸಗಿ ಸಂಸ್ಥೆಯು ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿ ಅಥವಾ ಚುನಾವಣಾಧಿಕಾರಿ ಖಾಸಗಿ ಸಂಸ್ಥೆ ಮನೆ ಮನೆ ಸಮೀಕ್ಷೆ, ಗುರುತಿನ ಚೀಟಿ, ಮತದಾರರ ದತ್ತಾಂಶ ಸಂಗ್ರಹಣೆ ಮಾಡುವುದಕ್ಕೆ ನಿರಾಕ್ಷೇಪಣಾ ಅಥವಾ ಅನುಮತಿ ನೀಡುವಂತಿಲ್ಲ. ಗುರುತಿನ ಚೀಟಿ ದುರ್ಬಳಕೆ ಮತ್ತು ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಣೆ ಮಾಡದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮತದಾರರ ಹೆಸರು ಎಲ್ಲಿ ಡಿಲೀಟ್ ಆಗಿದೆ, ಎಲ್ಲಿ ಸೇರ್ಪಡೆ ಆಗಿದೆ ತೋರಿಸಿ: ಮುನಿರತ್ನ
ಈ ರೀತಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬಂದರೆ ಸಹಾಯವಾಣಿ 1950ಗೆ ಕರೆ ಮಾಡಿ ಸಾರ್ವಜನಿಕರು ದೂರು ನೀಡಬಹುದಾಗಿದೆ. ಸ್ವಯಂ ಸೇವಾ ಸಂಘ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮತದಾರ ದತ್ತಾಂಶ ಸಂಗ್ರಹಿಸುತ್ತಿರುವುದು ಕಂಡು ಬಂದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೊಂದಣಾಧಿಕಾರಿಗಳು ಕಡ್ಡಾಯವಾಗಿ ಸದರಿ ಆದೇಶವನ್ನು ಪಾಲಿಸಲು ನಿರ್ದೇಶಿಸಿದ್ದಾರೆ.