1,000 ಕೋಟಿ ಜಿಎಸ್‌ಟಿ ಪಾವತಿಸದ ಬಿಬಿಎಂಪಿ..!

Published : Jul 07, 2022, 05:15 AM IST
1,000 ಕೋಟಿ ಜಿಎಸ್‌ಟಿ ಪಾವತಿಸದ ಬಿಬಿಎಂಪಿ..!

ಸಾರಾಂಶ

*   ಪಾಲಿಕೆಯಿಂದ 1 ಸಾವಿರ ಕೋಟಿ ಜಿಎಸ್‌ಟಿ ಧೋಖಾ  *   ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಬೇಕಿರುವ ಜಿಎಸ್‌ಟಿ *  ಮಾಹಿತಿ ಹಕ್ಕು ಅಧ್ಯಯನ ಕೇಂದ್ರದಿಂದ ಪ್ರಧಾನಿ, ಸಿಎಂಗೆ ದೂರು  

ಬೆಂಗಳೂರು(ಜು.07):  ಕಳೆದ ಐದು ವರ್ಷಗಳಿಂದ ಸರಕು ಸೇವಾ ತೆರಿಗೆ(ಜಿಎಸ್‌ಟಿ) ಪಾವತಿಸದೇ ಬಿಬಿಎಂಪಿ ಸರ್ಕಾರಕ್ಕೆ .1 ಸಾವಿರ ಕೋಟಿಗೂ ಅಧಿಕ ಆರ್ಥಿಕ ನಷ್ಟಮಾಡಿದೆ ಎಂದು ಆರೋಪಿಸಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ.

2017ರ ಜಿಎಸ್‌ಟಿ ಕಾಯ್ದೆ ಅನ್ವಯ ಸರ್ಕಾರ, ಬಿಬಿಎಂಪಿ ಮತ್ತು ಯಾವುದೇ ಪ್ರಾಧಿಕಾರದ ಕಾಮಗಾರಿ, ನಿರ್ವಹಣೆ ಅಥವಾ ಸರಕು ಸೇವೆಗಳ ಸರಬರಾಜು ಮಾಡಿದ್ದಕ್ಕೆ ಜಿಎಸ್‌ಟಿ ಅನ್ವಯವಾಗುತ್ತದೆ. ಕಳೆದ ಐದು ವರ್ಷದಲ್ಲಿ ಬಿಬಿಎಂಪಿ ನಡೆಸಿರುವ ಕಾಮಗಾರಿಗೆ ನಿಯಮದಂತೆ ಜಿಎಸ್‌ಟಿ ಪಾವತಿಸಿಲ್ಲ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಆರೋಪಿಸಿದೆ.

ಬಾಯ್ತಪ್ಪಿ ಕುದುರೆ ವ್ಯಾಪಾರಕ್ಕೂ ಜಿಎಸ್‌ಟಿ ಎಂದ ಸಚಿವೆ ನಿರ್ಮಲಾ

ಪಾಲಿಕೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರ ಹಣ ಪಡೆಯಲು ಸಲ್ಲಿಸುವ ಪ್ರಮಾಣ ಪತ್ರದೊಂದಿಗೆ ಜಿಎಸ್‌ಟಿ ಬಿಲ್ಲನ್ನು ಕೂಡ ಸಲ್ಲಿಸಬೇಕು. ಅದನ್ನು ಬಿಬಿಎಂಪಿಯು ಐಎಫ್‌ಎಂಎಸ್‌ನಲ್ಲಿ (ಇಂಟಿಗ್ರೇಟೆಡ್‌ ಫೈನಾನ್ಸ್‌ ಮ್ಯಾನೇಜ್‌ಮೆಂಸ್‌ ಸಿಸ್ಟಂ) ಜಿಎಸ್‌ಟಿ ಬಿಲ್ಲನ್ನು (ಇನ್‌ವಾಯ್‌್ಸ) ಅಪ್ಲೋಡ್‌ ಮಾಡಬೇಕು ಎಂಬ ನಿಯಮವಿದೆ. ಆದರೆ, ಗುತ್ತಿಗೆದಾರು ಜಿಎಸ್‌ಟಿ ಬಿಲ್‌ ನೀಡದ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಶೇ.12 (ಜ.1ರಿಂದ ಕೇಂದ್ರ ಮತ್ತು ರಾಜ್ಯ ಸೇರಿ ಶೇ.18) ಜಿಎಸ್‌ಟಿ ಪಾವತಿಯಾಗುತ್ತಿಲ್ಲ. ಬದಲಿಗೆ ಕೇವಲ ಶೇ.2 ಜಿಎಸ್‌ಟಿ ಬಿಲ್‌ ಪಾವತಿಸುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವನ್ನು ಉಂಟು ಮಾಡುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಅಕ್ರಮ ಬಿಲ್‌ ಪಾವತಿ

ಪಾಲಿಕೆಯ ಎಲ್ಲ ಗುತ್ತಿಗೆದಾರರು ಕಾಮಗಾರಿ ಮಾಡಲು ಬಳಸಿರುವ ಕಬ್ಬಿಣ, ಸಿಮೆಂಟ್‌, ಜಲ್ಲಿ, ಮರಳು ಸೇರಿದಂತೆ ಎಲ್ಲ ಬಗೆಯ ವಸ್ತುಗಳ ಖರೀದಿಗೆ ಜಿಎಸ್‌ಟಿ ಬಿಲ್‌ ಪಡೆಯಬೇಕು. ಜೊತೆಗೆ ಎಷ್ಟುಪ್ರಮಾಣದ ವಸ್ತುಗಳನ್ನು ಬಳಸಿದ್ದಾರೆ ಎನ್ನುವುದೂ ಜಿಎಸ್‌ಟಿ ಇನ್‌ವಾಯ್‌್ಸ ಪಡೆದುಕೊಳ್ಳಬೇಕು. ಆದರೆ, ಗುತ್ತಿಗೆದಾರರು ಕೆಲವು ಬಾರಿ ಯಾವುದೇ ಕಾಮಗಾರಿ ಮಾಡದೆಯೇ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣಪತ್ರ ಮತ್ತು ಫೋಟೋ ಸಲ್ಲಿಸಿ ಬೋಗಸ್‌ ಬಿಲ್‌ ಸಲ್ಲಿಸುತ್ತಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಪಾಲಿಕೆ ಅಧಿಕಾರಿಗಳು ಕೂಡ ಭಾಗಿ ಆಗಿದ್ದು, ಯಾವುದನ್ನೂ ಪರಿಶೀಲಿಸದೇ ಗುತ್ತಿಗೆದಾರನಿಗೆ ಹಣ ಪಾವತಿಸಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಶೇ.18 ಜಿಎಸ್‌ಟಿ ಅನ್ವಯ

ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಮೊದಲ ಹಂತದಲ್ಲಿ ಶೇ.5 ಜಿಎಸ್‌ಟಿ ಪಾವತಿಸಬೇಕಿತ್ತು. ನಂತರ ಕೇಂದ್ರ ಮತ್ತು ರಾಜ್ಯದ ತಲಾ ಶೇ.6 ಸರಕು ಸೇವಾ ತೆರಿಗೆ ಸೇರಿ ಶೇ.12ಕ್ಕೆ ಹೆಚ್ಚಳ ಮಾಡಿತ್ತು. ಪ್ರಸ್ತುತ ಜ.1ರಿಂದ ಶೇ.18 ಜಿಎಸ್‌ಟಿ ಅನ್ವಯವಾಗಿದೆ. ಆದರೆ, ಬಿಬಿಎಂಪಿಯು ಕಳೆದ 4 ವರ್ಷಗಳ ಹಿಂದಿನಿಂದ ಈವರೆಗೆ ಪೂರ್ಣಗೊಂಡ ಕಾಮಗಾರಿಗಳು ಸೇರಿ ಗುತ್ತಿಗೆದಾರರಿಗೆ .2 ಸಾವಿರ ಕೋಟಿ ಪಾವತಿಸಬೇಕು. ಈ ವೇಳೆ ಗುತ್ತಿಗೆದಾರರು 2022ಕ್ಕಿಂತ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸಿದ್ದರೂ, ಹೊಸದಾಗಿ ಜಾರಿಗೊಂಡ ಶೇ.18 ಜಿಎಸ್‌ಟಿ ಪಾವತಿಸುವುದು ಅನಿವಾರ್ಯ ಆಗಿದೆ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಸಂಸ್ಥೆಯ ಟ್ರಸ್ಟಿಬಿ.ಎಚ್‌.ವೀರೇಶ್‌ ಅವರು ತಿಳಿಸಿದ್ದಾರೆ.
 

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ