'ಈ ಸೇವೆ ಇಷ್ಟ ಇಲ್ಲದಿದ್ದರೆ ಖಾಲಿ ಹುದ್ದೆಗಷ್ಟೇ ಮಾತ್ರ ಅರ್ಜಿ ಹಾಕಿ’

By Kannadaprabha NewsFirst Published Feb 16, 2020, 9:53 AM IST
Highlights

ಬಿಬಿಎಂಪಿಯಿಂದ ಹೊಸ ವರ್ಗಾವಣೆ ನೀತಿಗೆ ನಿಯಮ ಸೇರ್ಪಡೆ| ಎರವಲು ಸೇವೆಯ ಮೇಲೆ ಪಾಲಿಕೆಯ ಕೆಲಸ ಮಾಡಲು ಇಚ್ಛಿಸುವ ನೌಕರರು ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳಿಗಷ್ಟೇ ಅರ್ಜಿ ಸಲ್ಲಿಸಬೇಕು|ವರ್ಗಾವಣೆ ವೇಳೆ ಪಾಲಿಕೆಯ ಕಾಯಂ ಅಧಿಕಾರಿ ಅಥವಾ ನೌಕರರಿಗೆ ಸೇವಾ ಹಿರಿತನಕ್ಕೆ ಆದ್ಯತೆ|

ಬೆಂಗಳೂರು(ಫೆ.16): ಎರವಲು ಸೇವೆಯಡಿ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ರಾಜ್ಯ ಸರ್ಕಾರದ ಬೇರೆ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ಬಿಬಿಎಂಪಿಯ ಹೊಸ ವರ್ಗಾವಣೆ ನೀತಿಯಲ್ಲಿ ಅಳವಡಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ಅನ್ಬುಕುಮಾರ್‌, ಎರವಲು ಸೇವೆಯ ಆಧಾರದ ಮೇಲೆ ಪಾಲಿಕೆಯ ಆಯ್ದ ಹುದ್ದೆಗಳಿಗೆ ಸರ್ಕಾರದ ವಿವಿಧ ಅಧಿಕಾರಿಗಳು ನೇಮಿಸಲಾಗುತ್ತದೆ. ಇದರಿಂದ ಪಾಲಿಕೆಯ ಮೂಲ ನೌಕರರ ಕರ್ತವ್ಯ ಹಾಗೂ ಬಡ್ತಿಗೆ ಅಡಚಣೆಯಾಗುತ್ತಿದೆ. ಅಷ್ಟೇ ಅಲ್ಲ, ಇದು ಕಾನೂನು ಸಂಘರ್ಷಕ್ಕೂ ಎಡೆಮಾಡಿಕೊಟ್ಟ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ನೌಕರರ ವರ್ಗಾವಣೆ ನೀತಿಯಲ್ಲಿ ಎರವಲು ಸೇವೆಯ ಮೇಲೆ ಪಾಲಿಕೆಯ ಕೆಲಸ ಮಾಡಲು ಇಚ್ಛಿಸುವ ನೌಕರರು ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳಿಗಷ್ಟೇ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಸೇರಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ ಆಡಳಿತಾತ್ಮಕ ಸುಧಾರಣೆ ಹಾಗೂ ಗೊಂದಲಗಳನ್ನು ತಪ್ಪಿಸಲು ವರ್ಗಾವಣೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವರ್ಗಾವಣೆ ಕರಡು ನೀತಿಯನ್ನು ಕೌನ್ಸಿಲ್‌ ಅನುಮೋದನೆಗೆ ಮಂಡಿಸಲಾಗಿದೆ. ಬಳಿಕ ಸರ್ಕಾರದ ಒಪ್ಪಿಗೆ ಪಡೆದು ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ವರ್ಗಾವಣೆ ನೀತಿಯ ಪ್ರಮುಖ ಅಂಶ:

ಪ್ರತಿ ವರ್ಷ ಮೇ ಹಾಗೂ ಜೂನ್‌ ಅವಧಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸುವುದು, ವರ್ಗಾವಣೆ ವೇಳೆ ಪಾಲಿಕೆಯ ಕಾಯಂ ಅಧಿಕಾರಿ ಅಥವಾ ನೌಕರರಿಗೆ ಸೇವಾ ಹಿರಿತನಕ್ಕೆ ಆದ್ಯತೆ. ಮಂಜೂರಾದ ಹುದ್ದೆಗಳಲ್ಲಿ ಶೇ.15ರಷ್ಟುಮೀರದಂತೆ ವರ್ಗಾವಣೆಗೆ ಕ್ರಮ ವಹಿಸುವುದು. ವರ್ಗಾವಣೆಗೆ ಸೇವಾ ಅವಧಿಯನ್ನು ನಿಗದಿ ಮಾಡಲಾಗಿದ್ದು, ಈ ಅವಧಿಯ ಒಳಗಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಅವಕಾಶ ಇರುವುದಿಲ್ಲ. ವರ್ಗಾವಣೆಗೆ ರಾಜಕೀಯ ಒತ್ತಡ ತರುವ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವಾರು ವಿಷಯ ಪ್ರಸ್ತಾಪಿಸಲಾಗಿದೆ.

click me!