ಬಿಬಿಎಂಪಿಗೆ ಹೊಸ ಮೀಸಲು ನಿಗದಿ ಸಾಧ್ಯವೇ: ಹೈಕೋರ್ಟ್‌

By Govindaraj S  |  First Published Sep 29, 2022, 7:52 AM IST

ಬಿಬಿಎಂಪಿ ವಾರ್ಡ್‌ಗಳಿಗೆ ಹೊಸದಾಗಿ ಮೀಸಲು ನಿಗದಿ ಮಾಡಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬುಧವಾರ ಸೂಚಿಸಿದೆ. 


ಬೆಂಗಳೂರು (ಸೆ.29): ಬಿಬಿಎಂಪಿ ವಾರ್ಡ್‌ಗಳಿಗೆ ಹೊಸದಾಗಿ ಮೀಸಲು ನಿಗದಿ ಮಾಡಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬುಧವಾರ ಸೂಚಿಸಿದೆ. ಬಿಬಿಎಂಪಿ ವಾರ್ಡ್‌ಗಳಿಗೆ ಮೀಸಲು ನಿಗದಿಪಡಿಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ಪೀಠ ಈ ಸೂಚನೆ ನೀಡಿತು.

ಒಬಿಸಿ ಅಂಕಿ ಅಂಶ ಒದಗಿಸಿ ಹೊಸದಾಗಿ ಮೀಸಲು ನಿಗದಿ ಸಾಧ್ಯವೇ? ಹೊಸದಾಗಿ ಮೀಸಲು ನಿಗದಿಪಡಿಸಲು ಎಷ್ಟು ಕಾಲಾವಕಾಶ ಬೇಕು? ಎಂಬ ಬಗ್ಗೆ ನಿಲುವು ತಿಳಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆ.30ಕ್ಕೆ (ಶುಕ್ರವಾರ) ಮುಂದೂಡಿತು. ಅಲ್ಲದೆ, ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಬಾರದು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು.

Tap to resize

Latest Videos

ರಮೇಶ್‌ ಜಾರಕಿಹೊಳಿ ಕೇಸ್‌ ಸಾರಾಂಶ ಸಲ್ಲಿಸದಕ್ಕೆ ಹೈಕೋರ್ಟ್‌ ಅತೃಪ್ತಿ

ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹಾಜರಾಗಿ, ಇತರೆ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೂಕ್ತವಾದ ಮೀಸಲು ಕಲ್ಪಿಸಲು ಸರ್ಕಾರ ಸಿದ್ಧವಿದೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಮೂರು ಹಂತದ ಪರಿಶೀಲನೆ ಪ್ರಕಾರವೇ ಎರಡು ತಿಂಗಳಲ್ಲಿ ಒಬಿಸಿಗೆ ವಾರ್ಡ್‌ವಾರು ಮೀಸಲು ಒದಗಿಸಲಾಗುವುದು ಎಂದು ತಿಳಿಸಿದರು.

ಈ ವರ್ಷದಲ್ಲೇ ಪಾಲಿಕೆ ಚುನಾವಣೆ: ಈ ವಾದವನ್ನು ಆಕ್ಷೇಪಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ಬಿಬಿಎಂಪಿ ಅಧಿಕಾರವಧಿ ಪೂರ್ಣಗೊಂಡು ಎರಡು ವರ್ಷಗಳಾಗಿವೆ. ಬಿಬಿಎಂಪಿ ಆಡಳಿತವನ್ನು ಆಡಳಿತಾಧಿಕಾರಿ ನಡೆಸುತ್ತಿದ್ದಾರೆ. ಹಾಗಾಗಿ, ಸಂವಿಧಾನದ ಆಶಯದಂತೆ ಶೀಘ್ರ ಚುನಾವಣೆ ನಡೆಯಬೇಕಿದ್ದು, ಒಬಿಸಿ ಮೀಸಲಾತಿ ಕಾರಣಕ್ಕೆ ಚುನಾವಣೆ ವಿಳಂಬ ಮಾಡುವಂತಿಲ್ಲ. ಶೀಘ್ರ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಸಹ ಸೂಚಿಸಿದೆ ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲರು, ಒಬಿಸಿಗೆ ಸೂಕ್ತ ರೀತಿಯಲ್ಲಿ ಮೀಸಲು ಕಲ್ಪಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚುನಾವಣೆ ವಿಳಂಬವಾಗಬಾರದು. ಸುಪ್ರೀಂಕೋರ್ಟ್‌ನ ಆದೇಶದಂತೆ ಶೀಘ್ರ ಚುನಾವಣೆ ನಡೆಯಬೇಕು. ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಬೇಕು ಎಂದು ಅಭಿಪ್ರಾಯಪಟ್ಟಿತು. ಜತೆಗೆ, ಹೊಸದಾಗಿ ಮೀಸಲು ನಿಗದಿ ಮಾಡಲು ಸಾಧ್ಯವೇ ಎಂಬ ಬಗ್ಗೆ ನಿಲುವು ತಿಳಿಸುವಂತೆ ಸರ್ಕಾರ ಸೂಚಿಸಿತು.

ಕಾರಂತ ಲೇಔಟ್‌ 44 ಕಟ್ಟಡ ಸಕ್ರಮಗೊಳಿಸಿ ಆದೇಶ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉದ್ದೇಶಿತ ಡಾ. ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಸಮಿತಿ ಸಲ್ಲಿಸಿದ್ದ 22ನೇ ವರದಿಯನ್ನು ಅಂಗೀಕರಿಸಿರುವ ಸುಪ್ರೀಂಕೋರ್ಟ್‌, ಮ​ತ್ತೆ 44 ಕಟ್ಟಡಗಳನ್ನು ಸಕ್ರಮಗೊಳಿಸಿ ಆದೇಶಿಸಿದೆ. ಆ ಮೂಲಕ ಈವರೆಗೆ 4,734 ಕಟ್ಟಡಗಳು ಸಕ್ರಮಗೊಂಡಂತಾಗಿದೆ.

ಪ್ರತಿಭಟನೆ ವೇಳೆ ಬಸ್‌ಗೆ ಹಾನಿ, PFI ನಿಂದ 5 ಕೋಟಿ ರೂ ನಷ್ಟ ಪರಿಹಾರಕ್ಕೆ ಹೈಕೋರ್ಟ್‌ಗೆ KSRTC ಅರ್ಜಿ!

ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲೀಕರಿಗೆ ನ್ಯಾ. ಎ.ವಿ. ಚಂದ್ರಶೇಖರ್‌ ಸಮಿತಿಯ ನೇತೃತ್ವದಲ್ಲಿ ಬಿಡಿಎ ಕಟ್ಟಡ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರ ವಿತರಿಸಿ ಕಾನೂನುರೀತ್ಯ ಅ​ಭಿವೃದ್ಧಿ ಶುಲ್ಕ ವಿ​ಧಿ​ಸುವಂತೆಯೂ ಸುಪ್ರೀಂಕೋರ್ಟ್‌ ಸೂ​ಚಿ​ಸಿ​ದೆ. ಸಕ್ರಮಗೊಂಡ ಕಟ್ಟಡಗಳ ಮಾಲೀಕರಿಗೆ ಬಿಡಿಎ ಸಕ್ರಮ ಪ್ರಮಾಣ ಪತ್ರವನ್ನು ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿಯೇ ನೀಡಲಿದೆ.

ಅದಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಸಕ್ರಮಗೊಂಡ ಕಟ್ಟಡ ಮಾಲೀಕರಿಗೆ ಮಾಹಿತಿ ನೀಡಲಾಗುತ್ತದೆ. ಫಲಾನುಭವಿಗಳು ಸಕ್ರಮ ಪ್ರಮಾಣ ಪತ್ರ ಪಡೆಯಲು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಆಧಾರ್‌ ಕಾರ್ಡ್‌, ಸಮಿತಿಯಿಂದ ಸ್ವೀಕರಿಸಿರುವ ಎಸ್‌ಎಂಎಸ್‌ನ ಸಾಫ್ಟ್‌ ಕಾಪಿ ಹಾಗೂ ಸಮಿತಿ ನೀಡಿರುವ ರಸೀದಿಯನ್ನು ಸಲ್ಲಿಸಬೇಕು.

click me!