ಕೊರೋನಾ ಲಸಿಕೆ ಪಡೆಯಲು ಕಾದು ನೋಡುವ ತಂತ್ರ..!

By Kannadaprabha NewsFirst Published Jan 18, 2021, 7:46 AM IST
Highlights

ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಂಡ ಕೆಲವರಲ್ಲಿ ಆತಂಕ| ಕೋವಿಡ್‌ ಲಸಿಕೆ ಪಡೆದವರಿಗೆ ಯಾವುದೇ ತೊಂದರೆ ಉಂಟಾಗದಿದ್ದರೆ, ಲಸಿಕೆ ಪಡೆದುಕೊಳ್ಳೋಣ ಎನ್ನುವ ಮನೋಭಾವನೆ| ಉತ್ತಮವಾಗಿ ನಡೆದ ಕೋವಿಡ್‌ ಲಸಿಕಾ ಅಭಿಯಾನ| 

ಬೆಂಗಳೂರು(ಜ.18): ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ಪಡೆಯಬೇಕಾದ ಕೆಲ ಆರೋಗ್ಯ ಸಿಬ್ಬಂದಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.
ಭಾನುವಾರ ನಗರದ ನಾಲ್ಕು ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಸಂಜೆ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಬಿಬಿಎಂಪಿ ಆಯುಕ್ತರು ಸಭೆ ನಡೆಸಿದರು.

ಈ ವೇಳೆ ಲಸಿಕೆ ಪಡೆಯಲು ಗೈರಾದವರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಲಸಿಕೆ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನೋಂದಣಿ ಮಾಡಿಕೊಂಡ ಆರೋಗ್ಯ ಸಿಬ್ಬಂದಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಈಗಾಗಲೇ ಕೋವಿಡ್‌ ಲಸಿಕೆ ಪಡೆದವರಿಗೆ ಯಾವುದೇ ತೊಂದರೆ ಉಂಟಾಗದಿದ್ದರೆ, ಲಸಿಕೆ ಪಡೆದುಕೊಳ್ಳೋಣ ಎನ್ನುವ ಮನೋಭಾವನೆ ಹೊಂದಿದ್ದಾರೆಂದು ಆಸ್ಪತ್ರೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ನಿನ್ನೆ ಎರಡೇ ಕಡೆ ಕೊರೋನಾ ಲಸಿಕೆ!

ಇನ್ನು ಕೆಲವರು ಬೆಂಗಳೂರಿನಲ್ಲಿ ಇಲ್ಲ. ಮತ್ತಷ್ಟು ಮಂದಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರೆಳಿದ್ದು, ವಾರಾಂತ್ಯವಾಗಿರುವುದರಿಂದ ವಾಪಾಸ್‌ ಬೆಂಗಳೂರಿಗೆ ಆಗಮಿಸಿಲ್ಲ. ಇನ್ನೂ ಕೆಲವರು ತಾವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೆ ನೀಡಿರುವ ಮೊಬೈಲ್‌ ಸಂಖ್ಯೆ ತಪ್ಪಾಗಿದೆ. ಹೀಗಾಗಿ, ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯನ್ನು ಆಸ್ಪತ್ರೆಯ ಮುಖ್ಯಸ್ಥರು ನೀಡಿದ್ದಾರೆ. ಉಳಿದಂತೆ ಕೋವಿಡ್‌ ಲಸಿಕಾ ಅಭಿಯಾನ ಉತ್ತಮವಾಗಿ ನಡೆದಿದ್ದು, ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.
 

click me!