ಬೆಂಗಳೂರು ಟೆಂಡರ್ ಶ್ಯೂರ್ ರಸ್ತೆಗಳ ಮೇಲಿನ ಕೇಬಲ್ ತೆರವುಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ!

By Sathish Kumar KH  |  First Published Oct 25, 2024, 6:24 PM IST

ಬಿಬಿಎಂಪಿ ವ್ಯಾಪ್ತಿಯ ಟೆಂಡರ್ ಶ್ಯೂರ್ ರಸ್ತೆಗಳ ಮೇಲಿನ ಮತ್ತು ಬೆಸ್ಕಾಂ ಕಂಬಗಳ ಮೇಲಿನ ಅನಧಿಕೃತ ಓವರ್ ಹೆಡ್ ಕೇಬಲ್‌ಗಳನ್ನು ತೆರವುಗೊಳಿಸಲು ಪಾಲಿಕೆ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ. ಹೊಸ ಕೇಬಲ್‌ಗಳನ್ನು ಡಕ್ಟ್ ಮೂಲಕವೇ ಅಳವಡಿಸಬೇಕು ಮತ್ತು ಅನುಮತಿಯಿಲ್ಲದ ಕೇಬಲ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


ಬೆಂಗಳೂರು (ಅ.25): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ಎಲ್ಲ ಟೆಂಡರ್ ಶ್ಯೂರ್ ರಸ್ತೆಗಳ ಮೇಲೆ ಮತ್ತು ಬೆಸ್ಕಾಂ ಕಂಬಗಳಲ್ಲಿ ಹಾಕಿರುವ ಅನಧಿಕೃತ ಓವರ್ ಹೆಡ್ ಕೇಬಲ್‌ಗಳ ತೆರವು ಮಾಡುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.

ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳೊಂದಿಗೆ ಓವರ್ ಹೆಡ್ ಕೇಬಲ್ ಮತ್ತು ವಿದ್ಯುತ್ ಕಂಬಗಳಿಗೆ ಹಾಕಲಾದ ಕೇಬಲ್‌ಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತಂತೆ ತುಷಾರ್ ಗಿರಿನಾಥ್ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾದ ಎಲ್ಲ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಹಾಕಿರುವ ಯಾವುದೇ ಓವರ್ ಹೆಡ್ ಕೇಬಲ್ ಗಳನ್ನು ಈ ಕೂಡಲೇ ತೆರವು ಗೊಳಿಸಬೇಕು. ಯಾವುದೇ ಸಂಸ್ಥೆಯು ಇನ್ನುಮುಂದೆ ಹೊಸ ಕೇಬಲ್ ಅಳವಡಿಸಬೇಕಾದರೆ ಡಕ್ಟ್ ಮೂಲಕವೇ ಅಳವಡಿಸಬೇಕು ಎಂದು ತಿಳಿಸಿದರು.

Tap to resize

Latest Videos

ಇನ್ನುಮುಂದೆ ಪಾಲಿಕೆಯ ಅನುಮತಿ ಇಲ್ಲದೇ ಯಾವುದೇ ಕೇಬಲ್ ಅಳವಡಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ಟೆಂಡರ್ ಶ್ಯೂರ್ ರಸ್ತೆಗಳ ಮೇಲ್ಭಾಗದಲ್ಲಿ ಎಲ್ಲಿಯೂ ಓವರ್ ಹೆಡ್ ಕೇಬಲ್‌ಗಳು ಕಾಣಿಸಲೇಬಾರದು. ಯಾವುದೇ ಸಂಸ್ಥೆಗಳಿದ್ದರೂ ಕೂಡ ಮುಲಾಜಿಲ್ಲದೇ ಕೇಬಲ್‌ಗಳನ್ನು ತೆರವುಗೊಳಿಸಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು.

ಇದನ್ನೂ ಓದಿ: ಮುಡಾ ಹಗರಣ: ಎಲ್ಲಿಯೂ ಕಾಣಿಸಿಕೊಳ್ಳದ ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ವಿಚಾರಣೆ ಮುಕ್ತಾಯ!

ಮುಂದುವರೆದು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಂಸ್ಥೆಯ ಅಧಿಕಾರಿಗಳ ಜೊತೆ ಮಾತನಾಡಿ, ನೀವು ಕೂಡ ಟೆಂಡರ್ ಶ್ಯೂರ್ ರಸ್ತೆಯಲ್ಲಿ ವಿದ್ಯುತ್ ಕಂಬವನ್ನು ಅಳವಡಿಕೆ ಮಾಡಿ ಕಂಬದ ಮೇಲೆ ವಿದ್ಯುತ್ ಕೇಬಲ್‌ಗಳನ್ನು ಅಳವಡಿಕೆ ಮಾಡಬಾರದು. ಪಾಲಿಕೆ ಅಧಿಗಾರಿಗಳು ಸೂಚಿಸಿದ ನಿಗಧಿತ ಅವಧಿಯಲ್ಲಿ ವಿದ್ಯುತ್ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಜೊತೆಗೆ, ಪಾಲಿಕೆಗೆ ನಿಗದಿತ ಹಣವನ್ನು ಪಾವತಿ ಮಾಡಿ ಡಕ್ಟ್ ನಲ್ಲಿ ನಿಮ್ಮ ಕೇಬಲ್‌ಗಳನ್ನು ಅಳವಡಿಕೆ ಮಾಡಬೇಕು ಎಂದು ಸೂಚಿಸಿದರು.

ದೀಪಾವಳಿ ಹಬ್ಬಕ್ಕೆ ಘನತ್ಯಾಜ್ಯ ನಿರ್ವಹಣೆ: ಇದೇ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮಾತನಾಡಿ ಮುಂಬರುತ್ತಿರುವ ದೀಪಾವಳಿ ಹಬ್ಬದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಘನತ್ಯಾಜ್ಯವನ್ನು ಆಗಿಂದಾಗ್ಗೆ ಹೆಚ್ಚು ಕಾಂಪ್ಯಾಕ್ಟರ್‌ಗಳನ್ನು ಉಪಯೊಗಿಸಿ ತೆರವುಗೊಳಿಸಬೇಕು ಎಂದು ಸೂಚಿಸಿದರು. ಈ ಸಭೆಯಲ್ಲಿ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ಡಾ.ಹರೀಶ್ ಕುಮಾರ್, ವಲಯ ಆಯುಕ್ತರಾದ ಕರಿಗೌಡ, ರಮ್ಯ, ಸತೀಶ್, ವಿನೋಥ್ ಪ್ರೀಯ, ಎಲ್ಲಾ ವಲಯ ಮುಖ್ಯ ಅಭಿಯಂತರರು, ಬೆಸ್ಕಾಂ ಅಭಿಯಂತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

click me!