ಗ್ಯಾರಂಟಿ ಜಾರಿಗೂ ಮುನ್ನವೇ ಬೆಂಗಳೂರು ಜನತೆಗೆ ಬಿಗ್‌ ಆಫರ್‌ ಕೊಟ್ಟ ಸರ್ಕಾರ

By Sathish Kumar KHFirst Published Jun 1, 2023, 7:54 PM IST
Highlights

ಕಾಂಗ್ರೆಸ್‌ ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5 ರಿಯಾಯಿತಿಯನ್ನು ಜೂ.30ರವರೆಗೆ ವಿಸ್ತರಣೆ ಮಾಡಿದೆ.

ಬೆಂಗಳೂರು (ಜೂ.1): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮನೆ ಅಥವಾ ಆಸ್ತಿಯನ್ನು ಹೊಂದುವುದು ದೊಡ್ಡ ವಿಚಾರವಾಗಿದೆ. ಅದರಲ್ಲಿಯೂ ನಗರದ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಮನೆ ಅಥವಾ ಆಸ್ತಿಗಳನ್ನು ಹೊಂದಿದ್ದರೆ ಅದಕ್ಕೆ ತೆರಿಗೆ ಪಾವತಿ ಮತ್ತುಷ್ಟು ಹೊರೆಯಾಗಿರುತ್ತದೆ. ಆದರೆ, ಕಾಂಗ್ರೆಸ್‌ ಸರ್ಕಾರವು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ಮಾಲೀಕರಿಗೆ ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿಯನ್ನು ಜೂ.30ರವರೆಗೆ ವಿಸ್ತರಣೆ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ. 5 ರಷ್ಟು ರಿಯಾಯಿತಿ ಅವಧಿ ವಿಸ್ತರಣೆ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಪಾವತಿದಾರರಿಗೆ ರಿಯಾಯಿತಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಮೇ 31ರವರೆಗೆ ಇದ್ದ ರಿಯಾಯಿತಿ ಅವಧಿಯನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಬಳಸಿಕೊಂಡು ತೆರಿಗೆಯನ್ನು ಪಾವತಿಸುವಂತೆ ಸರ್ಕಾರ ಮನವಿ ಮಾಡಿದೆ.

Bengaluru ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್‌! ಶೇ.5 ರಿಯಾಯಿತಿ ವಿಸ್ತರಣೆ ಸಾಧ್ಯತೆ

ಕೋವಿಡ್‌ ಅವಧಿಯಲ್ಲಿಯೂ ರಿಯಾಯಿತಿ ಅವಧಿ ವಿಸ್ತರಣೆ: ಸಾಮಾನ್ಯವಾಗಿ ಆರ್ಥಿಕ ವರ್ಷದ ಆರಂಭವಾದ ಮೊದಲ ತಿಂಗಳಾದ ಮೇ ತಿಂಗಳಲ್ಲಿ (ಮೇ 1ರಿಂದ ಮೇ 31ರವರೆಗೆ) ಮಾತ್ರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಸ್ತಿ ತೆರಿಗೆ ಮೇಲೆ ಶೇ.5 ರಿಯಾಯಿತಿ ನೀಡಲಾಗುತ್ತದೆ. ಇದಾದ ನಂತರ ಸರ್ಕಾರದಿಂದ ನಿಗದಿ ಮಾಡಲಾದ ತೆರಿಗೆ ಪಾವತಿ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ, ಕಳೆದ ಎರಡು ವರ್ಷಗಳು ಕೋವಿಡ್‌ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮೇಲೆ ಶೇ.5 ರಿಯಾಯಿತಿಯನ್ನು ಜೂ.30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈ ವರ್ಷವೂ ಕೂಡ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5 ರಿಯಾಯಿತಿಯನ್ನು ಜೂ.30ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಂದಾಯ ಅಧಿಕಾರಿಗಳಿಂದ ಚುನಾವಣಾ ಕಾರ್ಯ: ಬಿಬಿಎಂಪಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ, ಮೇ ತಿಂಗಳಿನಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿದ ತೆರಿಗೆದಾರರಿಗೆ ಮಾತ್ರ ಶೇ.5 ರಷ್ಟು ರಿಯಾಯಿತಿಯನ್ನು ನೀಡಲಾಗಿರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಕೆಲಸಗಳು ಚಾಲ್ತಿಯಲ್ಲಿದ್ದ ಕಾರಣ ಕಂದಾಯ ವಿಭಾಗದ ಎಲ್ಲಾ ಸಿಬ್ಬಂದಿಗಳು ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಿಗಿಸಿಕೊಂಡಿದ್ದಾರೆ. ಆದ್ದರಿಂದ ನಗರದ ಬಹುತೇಕ ಆಸ್ತಿಗಳ ಮಾಲೀಕರು ತಮ್ಮ ವಾರ್ಷಿಕ ಆಸ್ತಿ ತೆರಿಗೆ ಪಾವತಿಸುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೀಗಾಗಿ, ಈ ವರ್ಷವೂ ಕೂಡ ಆಸ್ತಿ ತೆರಿಗೆ ಪಾವತಿಗೆ ಶೇ.5 ರಿಯಾಯಿತಿ ವಿಸ್ತರಣೆ ಮಾಡಿ ಅವಕಾಶ ನೀಡಬೇಕು ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎಂ. ಶಿವರಾಜು ಹಾಗೂ ವಿಪಕ್ಷ ನಾಯಕ ಅಬ್ದುಲ್‌ ವಾಜಿದ್‌ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಮನವಿ ಸಲ್ಲಿಸಿದ್ದರು.

Bengaluru- ಬಿಬಿಎಂಪಿ ಚುನಾವಣೆಗೆ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ

ಕೌನ್ಸಿಲ್‌ ಅಧಿಕಾರ ಹೊಂದಿರುವ ಆಡಳಿತಾಧಿಕಾರಿ ನಿರ್ಣಯ ಕೈಗೊಳ್ಳಲಿ:  ಬಿಬಿಎಂಪಿಯಲ್ಲಿ ಪಾಲಿಕೆ ಸದಸ್ಯರು ಇಲ್ಲದೇ ಸರ್ಕಾರದಿಂದಲೇ (ಆಡಳಿತಾಧಿಕಾರಿ ಮತ್ತು ಮುಖ್ಯ ಆಯುಕ್ತರು) ಆಡಳಿತ ಮಾಡಲಾಗುತ್ತಿದೆ. ಪಾಲಿಕೆಯ ಕೌನ್ಸಿಲ್‌ ಅಧಿಕಾರ ಹೊಂದಿರುವ ಆಡಳಿತಾಧಿಕಾರಿ ಅವರಿಗೆ ಆಸ್ತಿ ತೆರಿಗೆ ಪಾವತಿಗೆ ರಿಯಾಯಿತಿ ನೀಡುವ ಅಧಿಕಾರವಿದೆ. ಕೂಡಲೇ ಸಾರ್ವಜನಿಕರಿಗೆ ಶೇ.5 ರಿಯಾಯಿತಿ ಘೋಷಣೆ ಮಾಡಬೇಕು. ಪ್ರಸುತ್ತ ಚುನಾವಣೆ ಕೆಲಸ ಕಾರ್ಯಗಳು ಮುಕ್ತಾಯಗೊಂಡಿರುವುದರಿಂದ ಹಾಗೂ ಸಾರ್ವಜನಿಕರ ಆರ್ಥಿಕ ಹಿತದೃಷ್ಟಿಯಿಂದ ಪ್ರತಿ ವರ್ಷದಂತೆ ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸುವ ತೆರಿಗೆದಾರರಿಗೆ ಶೇಕಡ 5 ರಷ್ಟು ರಿಯಾಯಿತಿಯನ್ನು 1 ತಿಂಗಳು ವಿಸ್ತರಿಸಬೇಕೆಂದು ಮನವಿ ಸಲ್ಲಿಕೆ ಮಾಡಿದರು.

click me!