Shivamogga News: ಕಲ್ಲು ಗಣಿಗಾರಿಕೆ ಅಬ್ಬರಕ್ಕೆ ಬಸ್ತಿಕೊಪ್ಪ ಗಢಗಢ!

By Kannadaprabha News  |  First Published Dec 21, 2022, 7:53 AM IST
  • ಕಲ್ಲು ಗಣಿಗಾರಿಕೆ ಅಬ್ಬರಕ್ಕೆ ಬಸ್ತಿಕೊಪ್ಪ ಗಢಗಢ!
  •  ಶಿಕ್ಷಣ, ಕೃಷಿಗೆ ಸಂಚಕಾರ, ಸ್ಥಳೀಯರ ಆರೋಗ್ಯಕ್ಕೂ ಆಪತ್ತು
  • ಎಚ್ಚೆತ್ತುಕೊಳ್ಳುವರೇ ಜನಪ್ರತಿನಿಧಿಗಳು-ಅಧಿಕಾರಿಗಳು?

ಎಚ್‌.ಕೆ.ಬಿ. ಸ್ವಾಮಿ

 ಸೊರಬ (ಡಿ.21) : ತಾಲೂಕಿನ ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಅಬ್ಬರದ ಸದ್ದಿಗೆ ಜನತೆ ಬೆಚ್ಚಿದ್ದಾರೆ. ಜಾನುವಾರುಗಳು ಆಕ್ರಂದಿಸುತ್ತಿವೆ, ಮನೆಗಳು ಕಂಪಿಸುತ್ತಿವೆ. ಸ್ಫೋಟಕ ಶಬ್ದದ ನಡುವೆಯೇ ಶಾಲಾ ಮಕ್ಕಳ ಪಾಠ-ಪ್ರವಚನ, ಬೆಳೆ ಇಳುವರಿ ಕುಂಠಿತಗೊಂಡಿದೆ. ಸ್ಥಳೀಯ ಗ್ರಾಮಸ್ಥರ ಆರೋಗ್ಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳು ಕಲ್ಲುಗಣಿಯಿಂದ ಆಗುತ್ತಿದ್ದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

Tap to resize

Latest Videos

ಚಂದ್ರಗುತ್ತಿ ಹೋಬಳಿಯಿಂದ ಅರ್ಧ ಕಿ.ಮೀ. ದೂರದಲ್ಲಿ ಬಸ್ತಿಕೊಪ್ಪ ಗ್ರಾಮವಿದ್ದು, 52 ಕುಟುಂಬಗಳು ವಾಸವಾಗಿವೆ. ಗ್ರಾಮವು ಅಮೂಲ್ಯ ಬೆಟ್ಟ-ಗುಡ್ಡಗಳಿಂದ ಆವಸಿದೆ. ಕಲ್ಲು ಗಣಿಗಾರಿಕೆ ಮಾಲೀಕರಿಗೆ ಆದಾಯ ಹೆಚ್ಚಿಸುವ ಮೂಲಸೌಕರ್ಯಗಳು ಇರುವುದರಿಂದ ಸರ್ವೆ ನಂ.24ರಲ್ಲಿ ಸುಮಾರು 25 ವರ್ಷಗಳಿಂದ 2 ಕಡೆ ಗಣಿಗಾರಿಕೆ ನಡೆಯುತ್ತಿದೆ. ಪ್ರತಿನಿತ್ಯ ಬಂಡೆ ಸಿಡಿಸಲು ಬಳಸುವ ಸ್ಫೋಟಕ ಮತ್ತು ರಾಸಾಯನಿಕ ಹೊಗೆಯಿಂದಾಗಿ ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಿದೆ. ಕಲ್ಲುಪುಡಿ ಧೂಳಿನಿಂದ ಗ್ರಾಮಸ್ಥರು ಕೆಮ್ಮು- ಅಸ್ತಮಾದಂತಹ ಕಾಯಿಲೆಗಳಿಂದ ನರಳುವುದು ಸಾಮಾನ್ಯವಾಗಿದೆ.

ಮಂತ್ರಿಗಿರಿ ಲಾಬಿ ಬಿಟ್ಟು ಈಶ್ವರಪ್ಪ ಸದನಕ್ಕೆ ಹೋಗಲಿ: ಕೆ.ಬಿ.ಪ್ರಸನ್ನಕುಮಾರ್‌

ಇತ್ತೀಚೆಗೆ ರಾಸಾಯನಿಕ ಹೊಗೆ ಮಿಶ್ರಿತ ವಿಷಾನಿಲದಿಂದ ಗರ್ಭಿಣಿಯರಿಗೆ ಗರ್ಭಪಾತವಾದ ಎರಡು ಪ್ರಕರಣಗಳು ಸಹ ನಡೆದಿವೆ. ಪ್ರಬಲ ಸ್ಫೋಟಕದ ಸದ್ದಿಗೆ ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಜೀವನ ಸಾಗಿಸುವಂತಾಗಿದೆ. ಜೊತೆಗೆ ಪರಿಸರ ಮಾಲಿನ್ಯ ಆಗುತ್ತಿದೆ. ಗಣಿಗಾರಿಕೆಗಾಗಿ ಔಷಧೀಯ ಗುಣಗಳುಳ್ಳ ಮರಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಪ್ರತಿನಿತ್ಯ ಸುಮಾರು 200 ಲಾರಿಗಳು ಗಣಿಗಾರಿಕೆಗಾಗಿ ಗ್ರಾಮದ ಮಧ್ಯೆ ಸಂಚರಿಸುತ್ತಿವೆ. ಪರಿಣಾಮ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗಳು ಹಾಳಾಗಿ ಗುಂಡಿ-ಗೊಡರುಗಳಿಂದ ಕೂಡಿ, ಮಳೆಗಾಲದಲ್ಲಿ ನಡೆದಾಡುವುದೇ ದುಸ್ತರವಾಗುತ್ತಿದೆ.

ಚಂದ್ರಗುತ್ತಿ ಗ್ರಾಮದಲ್ಲಿ ಕೋಟೆ ವನದುರ್ಗ ಎಂಬ ಹೆಸರಿನಿಂದ ಪ್ರಖ್ಯಾತಗೊಂಡಿದೆ. ಕೋಟೆಯಲ್ಲಿ ಸರ್ವಧರ್ಮ ದೇವಾಲಯಗಳ ಕುರುಹುಗಳೂ ಇವೆ. ಆದರೆ 20-25 ವರ್ಷಗಳಿಂದ ಕಲ್ಲು ಗಣಿಗಾರಿಕೆ ಹೊಡೆತಕ್ಕೆ ಸಿಲುಕಿ ನಲುಗುತ್ತಿವೆ. ಹೋಗಿರುವ ಏಳುಸುತ್ತಿನ ಕೋಟೆ ರಕ್ಷಿಸಲು ಪುರಾತತ್ವ ಇಲಾಖೆ ಯಾವುದೇ ರೀತಿಯ ಜವಾಬ್ದಾರಿ ಹೋರದಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ಕೋಟೆಯ ಆಜುಬಾಜಿನಲ್ಲಿರುವ ಬಸ್ತಿಕೊಪ್ಪದಲ್ಲಿ ಗಣಿಗಾರಿಕೆಯಿಂದ ಇತಿಹಾಸ ಸಾರುವ ಗುಡ್ಡಗಳು ನಲುಗುತ್ತಿವೆ.

ಕಲ್ಲು ಗಣಿಗಾರಿಕೆ ದುಷ್ಪರಿಣಾಮಗಳ ಕುರಿತು ವೃಕ್ಷಲಕ್ಷ ಆಂದೋಲನ ತಂಡ, ಪರಿಸರಾಸಕ್ತ ತಂಡ, ತಾಲೂಕು ಜೀವವೈವಿಧ್ಯ ಸಮಿತಿ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇಂಥವರಿಗೆ ಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ. ಸಧ್ಯದಲ್ಲಿಯೇ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಶಾಸಕರ ಕಚೇರಿ ಎದುರು ನಿರಶನ ಕೈಗೊಳ್ಳುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

4 ತಿಂಗಳ ಹಿಂದೆ ಜಿಲ್ಲಾಧಿಕಾರಿ ಗಣಿ ಇಲಾಖೆ ಅಧಿಕಾರಿಗಳ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದರು. 2026ರವರೆಗೆ ಕಲ್ಲು ಗಣಿಗಾರಿಕೆ ಪರವಾನಿಗೆ ಇದ್ದು, ಅವಧಿ ಮುಗಿಯುವವರೆಗೆ ಯಾವುದೇ ಜಾನುವಾರು ಮತ್ತು ಗ್ರಾಮಸ್ಥರು, ಜಮೀನುಗಳಿಗೆ ತೊಂದರೆ ಆಗದಂತೆ ಹಾಗೂ ನಿಯಮಾನುಸಾರ ಸ್ಫೋಟಕಗಳನ್ನು ಬಳಸುವಂತೆ ಸೂಚಿಸಿದ್ದರು. ಇದಕ್ಕೆ ಗ್ರಾಮಸ್ಥರು ಒಪ್ಪಿ, ನಿಬಂಧನೆಗಳ ಮೇಲೆ ಗಣಿ ಕೆಲಸಕ್ಕೆ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳ ಮಾತಿಗೂ ಬಗ್ಗದ ಗಣಿ ಕ್ವಾರೆ ಮಾಲೀಕರು ನಿರಂತರವಾಗಿ ಸ್ಫೋಟಗಳನ್ನು ಬಳಸುತ್ತಿದ್ದಾರೆ. ಜನ ಜೀವನ ಪರಿಸ್ಥಿತಿ ಇನ್ನಷ್ಟುಬಿಗಡಾಯಿಸುತ್ತಿದೆ.

ಶಿವಮೊಗ್ಗ: ವಿದ್ಯುತ್ ಅವಘಡದಲ್ಲಿ ಯುವಕ ಸಾವು, ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ

ಕಲ್ಲು ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗಿದ್ದು, ತುರ್ತು ಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ ವಾಹನ ಸಹ ಗ್ರಾಮಕ್ಕೆ ಬರದಂತಾಗಿದೆ. ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಮನವಿಗಳ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮದ ಕುಡಿಯುವ ನೀರಿನ ಬಾವಿ ನೀರು ಧೂಳಿನಿಂದಾಗಿ ಕಲುಷಿತವಾಗುತ್ತಿದೆ. ಸ್ಫೋಟದ ತೀವ್ರತೆಗೆ ಶಾಲಾ- ಕೊಠಡಿಗಳು ಬಿರುಕುಬಿಟ್ಟಿವೆ. ಮಕ್ಕಳು ಭಯದಲ್ಲಿಯೇ ಶಾಲೆಗೆ ತೆರಳುವಂತಾಗಿದೆ. ಕೂಡಲೇ ಕಲ್ಲು ಗಣಿಗಾರಿಕೆ ಸ್ಥಗಿತ ಮಾಡಬೇಕು

- ನಾಗರಾಜ, ಗ್ರಾಮಸ್ಥ, ಬಸ್ತಿಕೊಪ್ಪ

ಗಣಿಗಾರಿಕೆ ಸ್ಫೋಟದ ಕೆಮಿಕಲ್‌ ಧೂಳಿನಿಂದ ಸಣ್ಣ ಮಕ್ಕಳು, ಗ್ರಾಮದ ವಯೋವೃದ್ಧರು ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮಕ್ಕಳ ಬೆಳವಣಿಗೆ ಕುಂಠಿತವಾಗಿದ್ದು, ಸ್ತ್ರೀಯರಲ್ಲೂ ಗರ್ಭಪಾತ ಕಂಡುಬಂದಿದೆ. ಬಡವರ ಜೀವಕ್ಕಿಂತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಗಣಿಗಾರಿಕೆ ಮುಖ್ಯವಾದಂತಿದೆ

- ಮಂಜಪ್ಪ ಡಿ. ಬಡಿಗೇರ್‌, ಗ್ರಾಮಸ್ಥ, ಬಸ್ತಿಕೊಪ್ಪ

click me!