ಈಗಾಗಲೇ ಸಿಎಂ ಸಿದ್ದರಾಮಯ್ಯ ಎಸ್‌ಸಿ ಎಸ್‌ಟಿ, ಒಬಿಸಿ ಸ್ವಾಮೀಜಿಗಳನ್ನು ಆಹ್ವಾನಿಸಿ ಸಭೆ ನಡೆಸಿದ್ದಾರೆ. ನಮ್ಮನ್ನೂ ಆಹ್ವಾನಿಸಿ ಮೀಸಲಾತಿ ಸಂಬಂಧ ಮುಕ್ತ ಮಾತುಕತೆ ನಡೆಸಬೇಕು: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ(ಜೂ.15): ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಒಂದು ಹಂತಕ್ಕೆ ತಲುಪಿದೆ. ಮುಂದಿನ ಹೋರಾಟ ಸಂಬಂಧ ಲೀಗಲ್ ಸೆಲ್ ಹಾಗೂ ಕಾನೂನು ತಜ್ಞರ ಜೊತೆಗೆ ಸಭೆ ನಡೆಸಿದ್ದೇವೆ. 2ಎ ಮೀಸಲಾತಿ ವಿಚಾರ ಹೈಕೋರ್ಟ್ ಹಾಗೂ 2ಡಿ ಸುಪ್ರೀಂಕೋರ್ಟ್‌ನಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರ ಇದ್ದವರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಹಕ್ಕೊತ್ತಾಯವಿದೆ. ಮೀಸಲಾತಿ ವಿಚಾರದಲ್ಲಿ ಕಾನೂನು ತೊಡಕಿದ್ದು, ಸರ್ಕಾರ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಬೇಕು ಅಂತ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಸಮಸ್ಯೆ ಇತ್ಯರ್ಥಗೊಳಿಸಿ, ನಮಗೆ ಮೀಸಲಾತಿ ಕೊಡಿಸಬೇಕು. ಲಿಂಗಾಯತ ಪಂಚಮಸಾಲಿ ಸಮಾಜವನ್ನು ಕೇಂದ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕ್ರಮವಹಿಸಬೇಕು. ನಮ್ಮೆಲ್ಲ ಬೇಡಿಕೆ ಸಂಬಂಧ ಸರ್ಕಾರ ತಕ್ಷಣವೇ ಆಡಳಿತಾತ್ಮಕ ಸಭೆ ಕರೆಯಬೇಕು. ಈಗಾಗಲೇ ಸಿಎಂ ಸಿದ್ದರಾಮಯ್ಯ ಎಸ್‌ಸಿ ಎಸ್‌ಟಿ, ಒಬಿಸಿ ಸ್ವಾಮೀಜಿಗಳನ್ನು ಆಹ್ವಾನಿಸಿ ಸಭೆ ನಡೆಸಿದ್ದಾರೆ. ನಮ್ಮನ್ನೂ ಆಹ್ವಾನಿಸಿ ಮೀಸಲಾತಿ ಸಂಬಂಧ ಮುಕ್ತ ಮಾತುಕತೆ ನಡೆಸಬೇಕು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಕೋರಿದ್ವಿ, ಹಿಂದಿನ ಸರ್ಕಾರ 2 ಡಿ ಕೊಟ್ಟಿತು. ಈ ಎರಡೂ ಮೀಸಲಾತಿ ವಿಚಾರಗಳೀಗ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನಲ್ಲಿವೆ. ಹೀಗಾಗಿ ಪಂಚಮಸಾಲಿ ಸಮಾಜ ಈಗ ಮೊದಲಿದ್ದ 3ಬಿ ಮೀಸಲಾತಿಯಲ್ಲೇ ಇದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಬಳಿ ಭೇಟಿಗೆ ಸಮಯ ಕೇಳಿದ್ದಾರೆ. ಸಮಯ ನೀಡಿದ ಬಳಿಕ ನಮ್ಮ ಹೋರಾಟ ಸಮಿತಿಯ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದೆ. ಸಿಎಂ ಸಿದ್ದರಾಮಯ್ಯ ಆದಷ್ಟು ಬೇಗ ಸಮಯ ನೀಡಬೇಕು ಎಂದು ಸ್ವಾಮೀಜಿ ಕೋರಿದ್ದಾರೆ.
ಪಂಚಮಸಾಲಿ ಮೀಸಲು ವರದಿ ಪ್ರತಿ ನೀಡಿ: ಹೈಕೋರ್ಟ್
ಸಂಪುಟದಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಸಿಗದ ಹೆಚ್ಚಿನ ಪ್ರಾಧಾನ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕಾಂಗ್ರೆಸ್ ಸರ್ಕಾರ ಬರಲು ಪಂಚಮಸಾಲಿ ಸಮಾಜದ ಬೆಂಬಲ ಬಹಳಷ್ಟಿದೆ. ಪಂಚಮಸಾಲಿ ಸಮಾಜದ 13 ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಸಂಪುಟದಲ್ಲಿ ಪಂಚಮಸಾಲಿ ಸಮಾಜದ ಐವರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ಗೆ ಮನವಿ ಮಾಡಿದ್ವಿ, ಮೊದಲನೇ ಹಂತದಲ್ಲೇ ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಈಗಾಗಲೇ ನಮ್ಮ ಸಮಾಜದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ ಮಂತ್ರಿ ಆಗಿದ್ದಾರೆ. ಬರುವ ದಿನಗಳಲ್ಲಿ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಮಂತ್ರಿ ಆಗಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.