
ಸಿದ್ದಯ್ಯ ಹಿರೇಮಠ
ಕಾಗವಾಡ(ಏ.11): ಮಹಾಮಾರಿ ಕೊರೋನಾ ಹೊಡೆತ ಇದೀಗ ಬ್ಯಾಂಕ್‌ಗಳ ಹಣಕಾಸಿನ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಬ್ಯಾಂಕ್‌ಗಳಲ್ಲಿ ಹಣ ಕಟ್ಟುವವರ ಪ್ರಮಾಣವೇ ಗಣನೀಯ ಇಳಿಕೆ ಕಂಡಿದೆ. ಆದರೆ ತಮ್ಮ ಖಾತೆಯಲ್ಲಿಯ ಹಣ ಡ್ರಾ ಮಾಡುವವರ ಸಂಖ್ಯೆ ಶೇ.85ರಷ್ಟು ಏರಿಕೆ ಕಂಡಿರುವುದು ಗಮನಾರ್ಹ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಬುಧವಾರ ತಮ್ಮ ಖಾತೆಗೆ ಹಣ ಜಮಾ ಮಾಡಲು ಬಂದವರು ಶೇ.10 ರಷ್ಟು, ಆದರೆ ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯುವವರ ಸಂಖ್ಯೆ ಶೇ.90 ರಷ್ಟು ಆಗಿದ್ದಾರೆ. ಇದರಿಂದ ಬ್ಯಾಂಕ್‌ಗಳು ಸಹ ಬರಿದಾಗುತ್ತಿದ್ದು, ಹಣಕಾಸಿನ ವ್ಯವಹಾರವೇ ಕ್ಷೀಣಿಸುತ್ತಿದೆ. ಇನ್ನೊಂದೆಡೆ ಎಟಿಎಂ ಮಷಿನ್‌ಗೆ ಹಣ ಹಾಕಲು ಸಹ ಬ್ಯಾಂಕುಗಳ ಬಳಿ ನಗದು ಕೊರತೆ ಉಂಟಾಗಿದೆ ಎನ್ನಬಹುದಾಗಿದೆ.
ಈರುಳ್ಳಿ ಮಾರಾಟಗಾರರಿಗೆ ಕೊರೋನಾ ಸೋಂಕು ದೃಢ: ಗ್ರಾಮಸ್ಥರಲ್ಲಿ ಆತಂಕ
ನೂನಾರು ಜನ ಸರದಿಯಲ್ಲಿ:
ಪ್ರಧಾನಮಂತ್ರಿಗಳ ಗರಿಬ್ ಕಲ್ಯಾಣ್ ಯೋಜನೆಯಡಿ, ಮಹಿಳೆಯರ ಜನ್‌ಧನ್ ಖಾತೆಗೆ 500 ಜಮೆಯಾಗಿರುವುದರಿಂದ ಅವರೆಲ್ಲರೂ ಹಣ ಪಡೆಯಲು ಬ್ಯಾಂಕ್‌ಗೆ ಬಂದಿದ್ದಾರೆ. ಮೋಳೆ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನವರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದು ಒಬ್ಬರಿಂದ ಮತ್ತೊಬ್ಬರಿಗೆ 10 ಅಡಿಗಳಷ್ಟುಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ನಗದು ಪೂರೈಕೆ ಕೊರತೆ:
ಈ ಮೊದಲು ವ್ಯಾಪಾರಸ್ಥರು ಮತ್ತು ಇತರೆ ಗ್ರಾಹಕರು ಪ್ರತಿನಿತ್ಯ 15 ರಿಂದ 20 ಲಕ್ಷ ಸಂದಾಯ ಮಾಡುತ್ತಿದ್ದರು. ಕೊರೋನಾದಿಂದ ಲಾಕ್‌ಡೌನ್ ಆಗಿರುವುದರಿಂದ ಬ್ಯಾಂಕ್‌ಗೆ ಹಣ ಕಟ್ಟುವವರ ಸಂಖ್ಯೆ ತೀವ್ರ ಕಡಿಮೆಯಾಗಿದೆ. ಇದರಿಂದ ಪ್ರತಿ ದಿನ ಒಂದು ಲಕ್ಷಕ್ಕಿಂತಲೂ ಕಡಿಮೆ ಜಮಾ ಆಗುತ್ತಿವೆ. ಹಣ ವಿತ್‌ಡ್ರಾ ಮಾಡುವವರ ಸಂಖ್ಯೆ ಹೆಚ್ಚಿದೆ. ಒಟ್ಟಿನಲ್ಲಿ ಬ್ಯಾಂಕುಗಳ ವ್ಯವಹಾರಕ್ಕೆ ಅಡಚಣೆಯಾಗಿದೆ. ಈ ನಡುವೆ ಸಣ್ಣ ಮೊತ್ತ ಪಡೆಯುವುದಕ್ಕೆ ಬರುವ ಗ್ರಾಹಕರಿಗೆ ಹಣ ನೀಡಲು ಚಿಲ್ಲರೆ ಸಮಸ್ಯೆ ತೀವ್ರವಾಗಿದೆ. ಆನ್‌ಲೈನ್ ವ್ಯವಹಾರಗಳು ಕೂಡ ಗಣನೀಯವಾಗಿ ಕಡಿಮೆಯಾಗಿದೆ ಎನ್ನುತ್ತಾರೆ ಬ್ಯಾಂಕ್ ಮ್ಯಾನೇಜರ್ ಸುರೇಶ ಅಂಕಲಿ.
ಮಾಸ್ಕ್ ಧರಿಸಿದವರಿಗೆ ಹಣ:
ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕಿನಲ್ಲಿ ಮ್ಯಾನೇಜರ್ ಸುರೇಶ ಅಂಕಲಿಯವರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು ಸಾಮಾಜಿಕ ಅಂತರ ಕಾಯ್ಕುಕೊಳ್ಳಲು 10 ಅಡಿಗೊಂದು ವೃತ್ತಾಕಾರ ಗೆರೆ ಹೊಡೆದಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮುಖಕ್ಕೆ ಮಾಸ್ಕ್ ಧರಿಸಿದವರಿಗೆ ಸರದಿಯಲ್ಲಿ ನಿಲ್ಲಲು ಅನುಮತಿ ನೀಡಿದ್ದು ಕಂಡು ಬಂತು. ಮಾಸ್ಕ್ ಹಾಕಿದವರಿಗೆ ಮಾತ್ರ ಹಣ ನೀಡಲಾಗುತ್ತಿದೆ.