ತಾಯಿ ಕಣ್ಮರೆ: ಬಂಡೀಪುರದಲ್ಲಿ ಅನಾಥ ಹುಲಿ ಮರಿಗಳ ಅದ್ಭುತ ಬದುಕಿನ ರೋಚಕ ಕಥೆ ಇಲ್ಲಿದೆ!

Published : May 06, 2026, 07:05 PM IST
bandipur tiger cubs

ಸಾರಾಂಶ

ಅದು ನಾಲ್ಕು ಮರಿಗಳನ್ನು ಹೊಂದಿದ್ದ ತಾಯಿ ಹುಲಿ. ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮರಿಗಳನ್ನು ಬಿಟ್ಟು ಕಣ್ಮರೆ ಆಯ್ತು. ತಾಯಿ ಇಲ್ಲದೆ ಅನಾಥವಾದ ನಾಲ್ಕುಹುಲಿ ಮರಿಗಳನ್ನು ಅರಣ್ಯ ಇಲಾಖೆಯಿಂದ.. 

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ.06): ಅದು ನಾಲ್ಕು ಮರಿಗಳನ್ನು ಹೊಂದಿದ್ದ ತಾಯಿ ಹುಲಿ. ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮರಿಗಳನ್ನು ಬಿಟ್ಟು ಕಣ್ಮರೆ ಆಯ್ತು. ತಾಯಿ ಇಲ್ಲದೆ ಅನಾಥವಾದ ನಾಲ್ಕುಹುಲಿ ಮರಿಗಳನ್ನು ಅರಣ್ಯ ಇಲಾಖೆಯಿಂದ ಯಾವುದೇ ಹಸ್ತಕ್ಷೇಪ ಮಾಡದೆ ಸ್ವಾಭಾವಿಕವಾಗಿ ಸಂರಕ್ಷಿಸಿ, ಸ್ವತಂತ್ರವಾಗಿ ಬದುಕುವಂತೆ ಮಾಡಿರುವ ಯಶೋಗಾಥೆ ಇಲ್ಲಿದೆ.

ಬಂಡೀಪುರ... ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ತಾಣ. ಪ್ರಸ್ತುತ 200ಕ್ಕು ಹೆಚ್ಚು ಹುಲಿಗಳಿರುವ ಈ ಅರಣ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಇಲ್ಲಿನ ಸಫಾರಿ ವಲಯದಲ್ಲಿ ತಾಯಿ ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಸ್ವಚ್ಚಂದವಾಗಿ ವಿಹರಿಸುತ್ತಿರುವ ಚೇತೋಹಾರಿ ದೃಶ್ಯ ಕಂಡು ಬಂದಿತ್ತು. ಆದರೆ ಕೆಲ ದಿನಗಳ ನಂತರ ತಾಯಿ ಹುಲಿ ಕುಂಟುತ್ತಿರುವ ಸ್ಥಿತಿಯಲ್ಲಿ ಕಂಡು ಬಂದು ಆತಂಕ ಮೂಡಿಸಿತ್ತು.

ಅದಾದ ಕೆಲ ದಿನಗಳ ನಂತರ ತಾಯಿ ಹುಲಿ ಇದ್ದಕ್ಕಿದ್ದಂತೆ ಕಣ್ಮರೆ ಆಗಿ ಅದರ ನಾಲ್ಕು ಮರಿಗಳು ಅನಾಥವಾದವು. ಒಂದೆಡೆ ತಾಯಿಯ ಎದೆ ಹಾಲೂ ಇಲ್ಲ ಇನ್ನೊಂದೆಡೆ ಬೇಟೆ ಆಡುವ ಕಲೆಯನ್ನು ಸಂಪೂರ್ಣವಾಗಿ ಅರಿಯದ ಈ ಕಂದಮ್ಮಗಳು ಅಕ್ಷರಶಃ ತಬ್ಬಲಿಗಳಾಗಿದ್ದವು. ಈ ವೇಳೆ ಅರಣ್ಯ ಇಲಾಖೆ ‌‌ಮರಿಹುಲಿಗಳನ್ನು ಸೆರೆ ಹಿಡಿದು ಮೃಗಾಲಯಕ್ಕೋ ಅಥವಾ ಪುನರ್ವಸತಿ ಕೇಂದ್ರಕ್ಕೋ ಸ್ಥಳಾಂತರ ಮಾಡಿದ್ದರೆ ನಾಲ್ಕೂ ಮರಿ ಹುಲಿಗಳು ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ ಇತ್ತು.

ಈ ನಾಲ್ಕು ಮರಿ ಹುಲಿಗಳನ್ನು ಉಳಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಗಟ್ಟಿ ನಿರ್ಧಾರ ಮಾಡಿದ ಬಂಡೀಪುರ ಅರಣ್ಯಾಧಿಕಾರಿಗಳು ನಾಲ್ಕೂ ಮರಿಹುಲಿಗಳನ್ನು ಅವುಗಳು ಇರುವ ಸ್ಥಳದಲ್ಲಿಯೇ ಸಂರಕ್ಷಣೆ ಮಾಡಲು ತೀರ್ಮಾನಿಸಿದರು. ಈ ಮರಿಗಳು ಇರುವ ಪ್ರದೇಶದಲ್ಲಿ ಸಫಾರಿ ಸ್ಥಗಿತಗೊಳಿಸಿದರು. ನಿರಂತರ ಎಂಟು ತಿಂಗಳ ಕಾಲ ಪ್ರತಿದಿನ ಕ್ಯಾಮೆರಾ ಟ್ರ್ಯಾಪ್ ಹಾಗು ಥರ್ಮಲ್ ಡ್ರೋನ್ ಮೂಲಕ ಮರಿಹುಲಿಗಳ ಚಲನ ವಲನಗಳ ಬಗ್ಗೆ ಗಮನ ಕೇಂದ್ರೀಕರಿಸಿದರು.

ಬೇಟೆಯಾಡುವ ಕಲೆ ಕರಗತ

ಬೇರೆ ಹುಲಿಗಳು ಹಾಗು ಚಿರತೆಗಳಿಂದ ಮರಿ ಹುಲಿಗಳಿಗೆ ಅಪಾಯವಾಗದಂತೆ ಸೀಮಿತ ಸಂಖ್ಯೆಯ ಅರಣ್ಯ ಸಿಬ್ಬಂದಿಯಿಂದ ನಿಗಾ ವಹಿಸಲಾಯ್ತು. ಮರಿ ಹುಲಿಗಳು ನಿಧಾನವಾಗಿ ಬೇಟೆಯಾಡುವ ಕಲೆ ಕರಗತ ಮಾಡಿಕೊಂಡವು. ತಮ್ಮ ಆಹಾರವನ್ನು ತಾವೇ ಹುಡುಕಿಕೊಂಡು ಇದೀಗ ಸ್ವತಂತ್ರವಾಗಿ ಬದುಕುವ ಮಟ್ಟಕ್ಕೆ ಬೆಳೆದಿವೆ. ಒಂದು ಹುಲಿ ಈಗಾಗಲೇ ಬೇರ್ಪಟ್ಟಿದ್ದು ಉಳಿದ ಮೂರು ಹುಲಿಗಳು ತಮ್ಮದೆ ಆದ ಟೆರಿಟೆರಿ ಗುರ್ತಿಸಿಕೊಳುವ ಮಟ್ಟಕ್ಕೆ ಬೆಳೆದುನಿಂತಿವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಫ್ರಭಾಕರನ್ ಮಾಹಿತಿ ಹಂಚಿಕೊಂಡಿದ್ದಾರೆ.

ತಾಯಿ ಹುಲಿ ಅನಾರೋಗ್ಯದಿಂದ ಅಥವಾ ಬೇರೆ ಹುಲಿಯೊಂದಿಗೆ ಕಾದಾಟದಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದೇನೆ ಇರಲಿ ತಾಯಿ ಇಲ್ಲದೆ ಅನಾಥವಾಗಿದ್ದ ಮರಿಹುಲಿಗಳಿಗೆ ಹೊರಗಿನಿಂದ ಯಾವುದೇ ಆಹಾರ ನೀಡದೆ, ಹೆಚ್ವು ಹಸ್ತಕ್ಷೇಪ ಮಾಡದೆ ಸ್ವಾಭಾವಿಕ ರೀತಿಯಲ್ಲೇ ಸಂರಕ್ಷಿಸಿರುವುದು ದೇಶದಲ್ಲೇ ಮಾದರಿ ಎನಿಸಿದೆ.

PREV
Read more Articles on
click me!

Recommended Stories

ಪಶ್ಚಿಮ ಬಂಗಾಳ ಬಿಜೆಪಿ ಗೆಲುವಿನ ಹಿಂದೆ ಕನ್ನಡಿಗ ಅರುಣ್ ಬಿನ್ನಡಿ ಮೋಡಿ; ಇಲ್ಲಿದೆ ನೋಡಿ ಕಾಫಿನಾಡು ಯುವಕನ ಐಡಿಯಾಲಜಿ!
ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ, ಬೀದಿ ನಾಯಿಗಳ ಪಾಲಾದ ಮೃತದೇಹ! ಗ್ರಾಮಕ್ಕೆ ಸೋಂಕಿನ ಭೀತಿ!