ವಿವಾಹದಲ್ಲಿ ಪಾಲ್ಗೊಳ್ಳೋರಿಗೆ ಕೈಗೆ ಬ್ಯಾಂಡ್ : ಎಚ್ಚರ

By Kannadaprabha NewsFirst Published Apr 24, 2021, 6:55 AM IST
Highlights

ಇನ್ಮುಂದೆ ಮದುವೆಯಲ್ಲಿ ಪಾಲ್ಗೊಳ್ಳುವವರಿಗೆ ಕೈಗೆ ಬ್ಯಾಂಡ್ ಹಾಕಲಾಗುತ್ತದೆ. ಈ ಬ್ಯಾಂಡ್‌ನಿಂದ ಅಧಿಕ ಜನರು ಪಾಲ್ಗೊಂಡಲ್ಲಿ ಪತ್ತೆ ಹಚ್ಚುವುದು ಸುಲಭವಾಗಲಿದೆ. 

ಧಾರವಾಡ (ಏ.24) : ರಾಜ್ಯ ಸರ್ಕಾರವು ಏ.21ರಿಂದ ಜಾರಿಗೊಳಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ ಮದುವೆಗಳಲ್ಲಿ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಧಾರವಾಡ ಜಿಲ್ಲಾಡಳಿತವು ಈ ನಿಯಮ ಪಾಲನೆ ಹಾಗೂ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶೇಷ ಕ್ರಮ ಜರುಗಿಸಿದೆ.

ಮದುವೆಗಳಲ್ಲಿ ಭಾಗವಹಿಸುವ 50 ಜನರಿಗೆ ತಮ್ಮ ಕೈಗಳಿಗೆ ಧರಿಸಲು ವಿಶೇಷವಾದ ಬ್ಯಾಂಡ್‌ಗಳನ್ನು ಮದುವೆ ಆಯೋಜಕರಿಗೆ ಅನುಮತಿಯೊಂದಿಗೆ ಪಾಸ್‌ ರೂಪದಲ್ಲಿ ಬ್ಯಾಂಡ್‌ ನೀಡಲು ಕ್ರಮವಹಿಸಿದೆ. ಹೇಳಿ ಕೇಳಿ ಏಪ್ರಿಲ್‌, ಮೇ ತಿಂಗಳು ಮದುವೆ ಕಾಲ. ದಿನ ಬಿಟ್ಟು ದಿನ ಮದುವೆಗಳಿರುತ್ತವೆ. ಆದ್ದರಿಂದ ಮದುವೆ ಹೆಸರಿನಲ್ಲಿ ನೂರಾರು ಜನರು ಸೇರಿ ಕೋವಿಡ್‌ ಹೆಚ್ಚಳಕ್ಕೆ ಕಾರಣವಾಗುವುದು ಬೇಡ ಎಂದು ಜಿಲ್ಲಾಡಳಿತ ಅನಿವಾರ್ಯವಾಗಿ ಈ ಕ್ರಮಕ್ಕೆ ಮುಂದಾಗಿದೆ.

ದಕ್ಷಿಣ ಕನ್ನಡದಲ್ಲಿ ಮದುವೆ, ಮುಂಜಿ ಮಾಡುತ್ತಿರುವವರ ಗಮನಕ್ಕೆ ...

ಮರುಬಳಕೆ ಅಸಾಧ್ಯ:  ಈ ಬ್ಯಾಂಡ್‌ಗಳು ಜಲನಿರೋಧಕವಾಗಿದ್ದು (ವಾಟರ್‌ ಪ್ರೂಪ್‌), ಕೈಗಳಿಗೆ ಧರಿಸಿದಾಗ ಮಡಿಕೆ ಬೀಳದೆ ಇರುವಂತೆ ಹಾಗೂ ಒಬ್ಬ ವ್ಯಕ್ತಿ ಒಂದು ಸಲ ಧರಿಸಿದರೆ ಅದನ್ನು ತೆಗೆದು ಮರುಬಳಕೆ ಮಾಡಲು ಅಥವಾ ಮತ್ತೊಬ್ಬರಿಗೆ ಬ್ಯಾಂಡ್‌ ವರ್ಗಾಯಿಸಲು ಬರುವುದಿಲ್ಲ. ಒಂದು ವೇಳೆ ವರ್ಗಾಯಿಸಲು ಪ್ರಯತ್ನಿಸಿದರೆ ಅದು ತುಂಡಾಗುತ್ತದೆ. ಈ ಬ್ಯಾಂಡ್‌ಗಳನ್ನು ಜಿಲ್ಲಾಡಳಿತ ಉಚಿತವಾಗಿ ನೀಡಲಿದೆ.

click me!