
ಬೆಂಗಳೂರು(ಏ.23): ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (BAMUL) ವಿವಿಧ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿದ್ದು, ಪ್ರಕರಣವನ್ನು ಸಿಐಟಿ ಅಥವಾ ಎಸ್‌ಐಟಿಯಿಂದ ತನಿಖೆ ನಡೆಸುವಂತೆ ಸಂಸದ ಡಿ.ಕೆ.ಸುರೇಶ್(DK Suresh) ಆಗ್ರಹಿಸಿದ್ದಾರೆ.
ಈ ಕುರಿತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಅವರಿಗೆ ಪತ್ರ ಬರೆದಿರುವ ಅವರು, 2021 ಡಿಸೆಂಬರ್ 12ರಂದು ನಡೆಸಲಾಗಿರುವ ಲಿಖಿತ ಪರೀಕ್ಷೆಯಲ್ಲಿ ಹಲವು ಅಕ್ರಮಗಳು(Scam), ನ್ಯೂನತೆಗಳು ನಡೆದಿವೆ. ಬಮೂಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಹಕಾರ ಸಂಘದ ನಿಯಮಗಳನ್ನು ಪಾಲಿಸಿಲ್ಲ. ನಿವೃತ್ತಿ ಅಂಚಿನಲ್ಲಿದ್ದ ಅವರು ಸಂಸ್ಥೆಯ ಮೇಲೆ ಆರ್ಥಿಕವಾಗಿ, ಗಂಭೀರವಾಗಿ ಹಾಗೂ ಸಂಸ್ಥೆಯ ನೀತಿ ನಿಯಮಗಳಿಗೆ ಗಂಭೀರ ಪರಿಣಾಮ ಬೀರುವ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಆದರೆ, ಸಹಕಾರಿ ಸಂಘದ ನಿಯಮಗಳನ್ನು ಅವರು ಸಂಪೂರ್ಣವಾಗಿ ಧಿಕ್ಕರಿಸಿದ್ದಾರೆæ ಎಂದು ಆರೋಪಿಸಿದ್ದಾರೆ.
ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್
ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯ ಮಾಪನ, ಫಲಿತಾಂಶ ಪ್ರಕಟಣೆಯ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ(Karnataka State Open University) ವಹಿಸಲಾಗಿತ್ತು. ಇದಕ್ಕೆ ಬಮೂಲ್ ಆಡಳಿತ ಮಂಡಳಿ ಸದಸ್ಯರು ಹಾಗೂ ಇತರೆ ಜನ ಪ್ರತಿನಿಧಿಗಳಿಂದ ವಿರೋಧವಿದ್ದರೂ ಬಾಹ್ಯ ಒತ್ತಡ ಹಾಗೂ ರಾಜಕೀಯ ಶಿಫಾರಸಿನಿಂದ ರಾಜ್ಯ ಮುಕ್ತ ವಿವಿಗೆ ಜವಾಬ್ದಾರಿ ವಹಿಸಲಾಗಿದೆ. ವಿವಿಯ ಉಪ ಕುಲಪತಿಗಳು ಸದರಿ ಕಾರ್ಯವನ್ನು ಈ ಮೊದಲು ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆ ಸಿಬ್ಬಂದಿಯೊಂದಿಗೆ ಸೇರಿ ರಾಜ್ಯ ಮುಕ್ತ ವಿವಿಯನ್ನು ಕತ್ತಲಿನಲ್ಲಿಟ್ಟು ಫಲಿತಾಂಶ ಮತ್ತು ಮೌಲ್ಯಮಾಪನ ಕಾರ್ಯ ಕೈಗೊಂಡಿದ್ದಾರೆ ಎಂದು ದೂರಿದ್ದಾರೆ.
ಲಿಖಿತ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮೊದಲೇ ಸೋರಿಕೆಯಾಗಿದ್ದು, ಅನರ್ಹ ಹಾಗೂ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ನಷ್ಟವಾಗಿದೆ. ಈ ವಿಚಾರವನ್ನು ಸ್ವತಃ ಬಮೂಲ್‌ನ ವ್ಯವಸ್ಥಾಪಕ ನಿರ್ದೇಶಕರೇ ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ. ಅಭ್ಯರ್ಥಿಗಳ ನೇಮಕಾತಿಗಾಗಿ 1:5 ಅನುಪಾತ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ದೂರವಾಣಿ ಮೂಲಕ ಅಮಿಷವೊಡ್ಡಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಪರೀಕ್ಷೆಯ(Exams) ಒಎಂಆರ್(OMR) ಮಾರ್ಕ್ಶೀಟ್‌ನಲ್ಲಿ ಮೂರನೇ ವ್ಯಕ್ತಿಯಿಂದ ಉತ್ತರ ಭರ್ತಿ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.