ಕೂಡ್ಲಿಗಿಯಲ್ಲಿ ‘ಬೆಕ್ಕುಗಳ ಮನೆ’: ಶೌಚಾಲಯ ಬಳಸುವ, ಹೆಸರಿಡಿದು ಕರೆದರೆ ಓಗೊಡುವ ಬೆಕ್ಕುಗಳು

Published : Nov 26, 2026, 07:52 AM IST
cats

ಸಾರಾಂಶ

ಕೂಡ್ಲಿಗಿಯ ಗುನ್ನಳ್ಳಿ ರಾಘವೇಂದ್ರ ಅವರ ಕುಟುಂಬ ಬೆಕ್ಕುಗಳ ಬಗ್ಗೆ ಇರುವ ಮೂಢನಂಬಿಕೆಯನ್ನು ಸುಳ್ಳಾಗಿಸಿ, 25ಕ್ಕೂ ಹೆಚ್ಚು ಬೆಕ್ಕುಗಳನ್ನು ಪ್ರೀತಿಯಿಂದ ಸಾಕುತ್ತಿದೆ. ಈ ಮನೆಯಲ್ಲಿ ಬೆಕ್ಕುಗಳಿಗೆ ದೇವರ ಸಮಾನ ಸ್ಥಾನವಿದ್ದು, ಅವು ಶೌಚಾಲಯ ಬಳಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿವೆ.

ಭೀಮಣ್ಣ ಗಜಾಪುರ ಕೂಡ್ಲಿಗಿ

ಬೆಕ್ಕುಗಳು ದಾರಿಗೆ ಅಡ್ಡ ಬಂದರೆ ಅಪಶಕುನ ಎನ್ನುವ ಈ ನೆಲದಲ್ಲಿ ಬೆಕ್ಕುಗಳನ್ನೇ ಗೌರವಿಸುವ ಕುಟುಂಬಕ್ಕೆ ಬೆಕ್ಕುಗಳೇ ಶುಭ ಶಕುನ! ಗುನ್ನಳ್ಳಿ ರಾಘವೇಂದ್ರ ಪಟ್ಟಣದ ರಾಜೀವ್ ಗಾಂಧಿ ನಗರದಲ್ಲಿರುವ ತಮ್ಮ ಮನೆಯಲ್ಲಿ 4 ವರ್ಷಗಳಿಂದ ಬೆಕ್ಕುಗಳನ್ನು ಸಾಕಲು ಶುರು ಮಾಡಿದ್ದು, ಇದೀಗ 25 ಆಗಿವೆ. ವಿವಿಧ ಬಣ್ಣದ ಬೆಕ್ಕುಗಳು ಇಡೀ ಮನೆಯ ತುಂಬಾ ಎಲ್ಲೆಂದರಲ್ಲೇ ರಾಜರೋಷವಾಗಿ ತಿರುಗಾಡುತ್ತವೆ. ಇದು ಬೆಕ್ಕುಗಳದ್ದೇ ಮನೆ, ಬೆಕ್ಕುಗಳ ಮನೆಯಲ್ಲೇ ಈ ಕುಟುಂಬ ವಾಸಿಸುತ್ತದೆಯೋ ಏನೋ ಎನ್ನುವ ಭಾವ ಮೂಡುತ್ತದೆ.

ದೇವರ ಪೋಟೋಗಳ ಸಾಲಿಗೆ ಮರೆಯಾದ ಬೆಕ್ಕುಗಳ ಪೋಟೋ

ಈ ಮನೆಯಲ್ಲಿ ರಾಷ್ಟ್ರೀಯ ನಾಯಕರು, ದೇವರ ಪೋಟೋಗಳ ಸಾಲಿಗೆ ಮರೆಯಾದ ಬೆಕ್ಕುಗಳ ಪೋಟೋ ಸಹ ಸ್ಥಾನ ಪಡೆದಿವೆ. ಮನಸ್ಸು ಶುದ್ಧವಾಗಿದ್ದರೆ ಯಾವುದು ಅಪಶಕುನವಲ್ಲ ಎಂದು ಈ ಕುಟುಂಬ ತೋರಿಸಿಕೊಟ್ಟಿದೆ. ರಾತ್ರಿ ಮಲಗಿದರೆ ಕಾಲಲ್ಲಿ, ಎದೆಯಲ್ಲಿ, ತಲೆದಿಂಬಿನಲ್ಲಿ ಬೆನ್ನಿನ ಮೇಲೆ ಮಲಗುತ್ತವೆ, ಗುನ್ನಳ್ಳಿ ರಾಘವೇಂದ್ರ ಮನೆಯಲ್ಲಿ ಇಲ್ಲದಿದ್ದರೆ ಅವರ ಪತ್ನಿ ಪೆನ್ನಮ್ಮ ಬೆಕ್ಕುಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ.

ಶೌಚಾಲಯ ಬಳಸುವ ಬೆಕ್ಕುಗಳು

ರಾಣಿ, ಚಿನ್ನಿ, ಗುಂಡ, ಬಿಳಿ, ಖಡಿ, ಪಿಂಕಿ, ಅಪ್ಪಿ, ಬಡಕಿ, ಪಪ್ಪಿ, ಪ್ರೆಂಡ್, ತಿಪ್ಪಿಬಡಕಿ, ಪಾಪು ಹೀಗೆ ಹತ್ತಾರು ಹೆಸರುಗಳಿಂದ ಈ ಕುಟುಂಬದವರು ಕರೆಯುತ್ತಾರೆ. ಬೆಕ್ಕುಗಳ ಹೆಸರಿನಿಂದ ಕರೆದರೆ ಆ ಬೆಕ್ಕುಗಳು ಅಲರ್ಟ್ ಆಗುತ್ತವೆ. ಈ ಬೆಕ್ಕುಗಳು ಎಲ್ಲೆಂದರಲ್ಲಿ ಬಹಿರ್ದೆಸೆ ಮಾಡುವುದಿಲ್ಲ, ಬದಲಿಗೆ ಈ ಕುಟುಂಬದವರು ಬಳಸುವ ಶೌಚಾಲಯವನ್ನೇ ಬಳಸುವುದು ಕುತೂಹಲದ ಸಂಗತಿ.

25ಕ್ಕೂ ಹೆಚ್ಚು ಬೆಕ್ಕುಗಳಿಗೆ ಹಾಲು, ಅನ್ನ ಹಾಕಿ ಸಾಕುವ ಈ ಕುಟುಂಬಕ್ಕೆ ಬೆಕ್ಕುಗಳು 4 ವರ್ಷಗಳಿಂದಲೂ ಭಾರವಾಗಿಲ್ಲ, ಒಂದೆರಡು ಬೆಕ್ಕು ಕಣ್ಮರೆಯಾದರೆ ಈ ಮನೆಯವರು ಸರಿಯಾಗಿ ಊಟ ಮಾಡುವುದಿಲ್ಲ, ಕಳೆದು ಹೋದ ಬೆಕ್ಕುಗಳ ಪೋಟೋ ನೋಡಿ ಈಗಲೂ ಮರಗುತ್ತಾರೆ.

ನಾಲ್ಕು ವರ್ಷಗಳಿಂದ ನನ್ನ ಮನೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬೆಕ್ಕು ಸಾಕುತ್ತಿದ್ದೇನೆ. ನಮ್ಮ ಮನೆಯಲ್ಲಿ ಅಷ್ಟೊಂದು ಬೆಕ್ಕುಗಳಿದ್ದರೂ ಸ್ವಚ್ಛವಾಗಿದೆ. ಪ್ರತಿದಿನ ಹಾಲು- ಅನ್ನ ಹಾಕಿ ಇಟ್ಟರೆ ತಿನ್ನುತ್ತವೆ. ಬೆಕ್ಕುಗಳು ಇಲ್ಲಿ ಜಗಳವಾಡುವುದಿಲ್ಲ, ಕೆಲವೊಮ್ಮೆ ಮುನಿಸಿಕೊಳ್ಳುತ್ತವೆ ಎಂದು ಕೂಡ್ಲಿಗಿ ಸಿಪಿಐಎಂ ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಮಹಿಳೆಯರಿಗಿಂತ ಪುರುಷರೇ ಹೆಚ್ಚು ಜಾಗೃತರಾಗಬೇಕು; ಸಂತ್ರಸ್ತರು ಭಯವಿಲ್ಲದೆ ದೂರು ದಾಖಲಿಸಬೇಕು
Aero India 2027 ಮಿಸ್ ಮಾಡ್ಕೋಬೇಡಿ; ಬೆಂಗಳೂರಲ್ಲೇ ಯುದ್ಧವಿಮಾನಗಳ ಅಬ್ಬರ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಗೊತ್ತಾ?