
ಬಳ್ಳಾರಿ: ಬ್ಯಾನರ್ ಗಲಾಟೆ ವೇಳೆ ಮಾಜಿ ಸಚಿವ ಶ್ರೀರಾಮುಲು ಅವರನ್ನು ಹತ್ಯೆಗೈಯುವ ಸಂಚು ರೂಪಿಸಲಾಗಿತ್ತು. ಆದರೆ, ಶ್ರೀರಾಮುಲು ಮೇಲೆ ದಾಳಿ ಮಾಡುವ ಧೈರ್ಯ ಯಾರೂ ಮಾಡಿಲ್ಲ. ಹೀಗಾಗಿ ಪಾರಾಗಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ಸತೀಶ್ ರೆಡ್ಡಿ ಶ್ರೀರಾಮುಲುನನ್ನು ಮುಗಿಸಿ ಎಂದು ತೆಲುಗಿನಲ್ಲಿ ಹೇಳುವ ವಿಡಿಯೋ ಸಿಕ್ಕಿದೆ. ಈ ವೀಡಿಯೋದಲ್ಲಿ ಶ್ರೀರಾಮುಲುಗೆ ತೆಲುಗಿನಲ್ಲಿ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಆ ಶಬ್ದಗಳನ್ನು ಹೇಳಲು ನನ್ನ ಕೈಲೂ ಸಾಧ್ಯವಾಗುವುದಿಲ್ಲ. ಅಷ್ಟರಮಟ್ಟಿಗಿದೆ ಎಂದು ಹೇಳಿ ಗಲಭೆ ವೇಳೆಯಲ್ಲಿ ದೊರೆತ ವಿಡಿಯೋವನ್ನು ಬಿಡುಗಡೆ ಮಾಡಿದರು. ಆ ವಿಡಿಯೋದಲ್ಲಿ ಸತೀಶ್ ರೆಡ್ಡಿ ಮಾತುಗಳು ಸ್ಪಷ್ಟವಾಗಿ ಕೇಳಿ ಬಂದಿಲ್ಲ.
ಸಿಐಡಿ ಹಾಗೂ ಪೊಲೀಸ್ ಬೇರೆ ಬೇರೆಯಲ್ಲ. ಹೀಗಾಗಿ ಸಿಐಡಿ ತನಿಖೆಯಿಂದ ಸತ್ಯ ಬಹಿರಂಗವಾಗುವ ವಿಶ್ವಾಸವಿಲ್ಲ. ಒಂದು ವೇಳೆ ಪೊಲೀಸರು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದರೆ ಇಷ್ಟೊತ್ತಿಗೆ ಬ್ಯಾನರ್ ಗಲಭೆ ಪ್ರಕರಣದಲ್ಲಿ ಶಾಸಕ ನಾರಾ ಭರತ್ ರೆಡ್ಡಿಯನ್ನು ಬಂಧಿಸಬೇಕಿತ್ತು. ಆದರೆ, ಘಟನೆ ನಡೆದು 10 ದಿನ ಕಳೆದರೂ ಬಂಧನವಾಗಿಲ್ಲ. ಸಿಐಡಿ ತನಿಖೆ ಹೆಸರಿನಲ್ಲಿ ಸರ್ಕಾರ ಟೈಮ್ ಪಾಸ್ ಮಾಡುತ್ತಿದೆ. ಬ್ಯಾನರ್ ಗಲಭೆಯ ಸತ್ಯಾಸತ್ಯತೆ ಹೊರಬರಲು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿ: ನಗರದಲ್ಲಿ ಜರುಗಿದ ಬ್ಯಾನರ್ ಗಲಭೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಸ್ವಾಗತಿಸಿದ್ದಾರೆ. ಹಾಗೂ ನಿಷ್ಪಕ್ಷಪಾತ ಪಾರದರ್ಶಕವಾಗಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬ್ಯಾನರ್ ಗಲಾಟೆ ಕುರಿತಾದ ಸಾಕ್ಷ್ಯಾಧಾರಗಳ ವೀಡಿಯೋಗಳು ನಮ್ಮ ಬಳಿಯಿವೆ. ಯಾವುದೇ ತನಿಖಾ ಸಂಸ್ಥೆ ಕೇಳಿದರೂ ನೀಡುತ್ತೇವೆ. ಗಲಭೆಗೆ ಕಾರಣರಾದ ಶಾಸಕರನ್ನು ಬಂಧಿಸಬೇಕು. ಶಾಸಕರನ್ನು ರಕ್ಷಣೆ ಮಾಡುತ್ತಿರುವ ಸರ್ಕಾರದ ಧೋರಣೆ ಬಗ್ಗೆ ನಮಗೆ ಅಸಮಾಧಾನವಿದೆ. ಶಾಸಕರ ಬಂಧನದವರೆಗೆ ಹೋರಾಟ ನಿಲ್ಲೋದಿಲ್ಲ ಎಂದರು.
ಜ.17ರಂದು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಹೋರಾಟದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ, ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಲು ಬೆಂಗಳೂರಿಗೆ ಹೋಗಿದ್ದಾರೆ. ಬ್ಯಾನರ್ ಗಲಭೆಗೆ ಕಾರಣರಾದ ಶಾಸಕ ನಾರಾ ಭರತ್ ರೆಡ್ಡಿಯನ್ನು ಸರ್ಕಾರ ಈವರೆಗೆ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.