ಉತ್ತರ ಕರ್ನಾಟಕದ ಹುಡ್ಗರಿಗೂ ಶುರುವಾಯ್ತು ರ್ಯಾಪ್ ಸಾಂಗ್ ಗೀಳು| ಬಾಗಲಕೋಟೆ ಹುಡ್ಗರಿಂದ ತಯಾರಾಗ್ತಿದೆ ಕನ್ನಡಿಗ ರ್ಯಾಪ್ ಸಾಂಗ್| ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ತಾಣಗಳಲ್ಲಿ ಚಿತ್ರೀಕರಣ| ಕನ್ನಡ ನಾಡು,ನುಡಿ, ಭಾಷಾಭಿಮಾನ ರ್ಯಾಪ್ ಸಾಂಗ್ ಕಾನ್ಸೆಪ್ಟ್| ಹೈ ರೆಜ್ಯೂಲೆಶನ್'ನಲ್ಲಿ ಮೂಡಿಬರಲಿರುವ ರ್ಯಾಪ್ ಸಾಂಗ್| ಪಿ,ದಿಕ್ಷೀತ್ ಫೌಂಡೇಶನ್ ಬ್ಯಾನರ್ ನಲ್ಲಿ ಸಾಂಗ್|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಜು.28): ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ರ್ಯಾಪ್ ಸಾಂಗ್ ಯುವಕರನ್ನು ಆಕರ್ಷಿಸ್ತಿದೆ. ಇವುಗಳ ಮಧ್ಯೆ ಈ ಗೀಳು ಉತ್ತರ ಕರ್ನಾಟಕದಲ್ಲೂ ಸದ್ದು ಮಾಡ್ತಿದೆ. ಹೀಗಾಗಿ ಬಾಗಲಕೋಟೆ ಹುಡುಗರು ಸೇರಿಕೊಂಡು ಕನ್ನಡಿಗ ಅನ್ನೋ ರ್ಯಾಪ್ ಸಾಂಗ್ ಚಿತ್ರೀಕರಣ ಮಾಡ್ತಿದ್ದಾರೆ.
ಕನ್ನಡ ಭಾಷೆ, ನೆಲ, ಜಲ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಈ ತಂಡ ರ್ಯಾಪ್ ಸಾಂಗ್ ಮಾಡ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ತಾಣಗಳಲ್ಲಿ ಚಿತ್ರೀಕರಣ ನಡೆದು, ಇನ್ನೇನು ಬಿಡುಗಡೆಗೆ ಸಿದ್ಧವಾಗ್ತಿದೆ.
ಉತ್ತರ ಕರ್ನಾಟಕದಲ್ಲಿ ಜಾನಪದ ಸಾಂಗ್’ಗಳು ರಾಜ್ಯದ ಮನೆಮಾತಾಗಿವೆ. ಅದರಲ್ಲೂ ಈಚೆಗೆ ರ್ಯಾಪ್ ಸಾಂಗ್’ ಗಳ ಹವಾ ಜೋರಾಗುತ್ತಿದೆ. ಬಾಗಲಕೋಟೆ ಹುಡುಗರು ಸೇರಿಕೊಂಡು ಸೂಳೆಬಾವಿಯ ಪಿ,ದೀಕ್ಷಿತ್ ಫೌಂಡೇಶನ್ ಬ್ಯಾನರ್ ಅಡಿಯಲ್ಲಿ ಕನ್ನಡಿಗ ಅನ್ನೋ ರ್ಯಾಂಪ್ ಸಾಂಗ್ ಚಿತ್ರೀಕರಣ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಐತಿಹಾಸಿಕ ತಾಣ ಹಾಗೂ ಇಲ್ಲಿನ ಕನ್ನಡ ಭಾಷೆ,ಇಲಕಲ್ ಸೀರೆ,ಬಾದಾಮಿ, ಪಟ್ಟದಕಲ್ಲು, ಆಲಮಟ್ಟಿ ಜಲಾಶಯ, ಕೂಡಲಸಂಗಮದ ಕುರಿತು ಸ್ಥಳ ಮಹತ್ವ ಸಾರುವ ನಿಟ್ಟಿನಲ್ಲಿ ಕನ್ನಡ ಭಾಷೆ ಸತ್ವ,ಕನ್ನಡ ಕಲಿಕೆಗೆ ಪ್ರೋತ್ಸಾಹಿಸಲು ಈ ಯುವಕರ ಪಡೆ ರ್ಯಾಪ್ ಸಾಂಗ್ ಮಾಡುತ್ತಿದೆ.
ಈಗಾಗಲೇ ಬಾದಾಮಿ-ಪಟ್ಟದಕಲ್ಲು , ಹಾನಾಪೂರ ತಾಂಡಾ, ಸೂಳಿಬಾವಿ ,ಕೂಡಲಸಂಗಮ ಸೇರಿದಂತೆ ಅನೇಕ ತಾಣಗಳಲ್ಲಿ ಚಿತ್ರೀಕರಣ ಮಾಡಿದೆ. ಶಿವು ಹಾಗೂ ಇಲಕಲ್ ಬುಡ್ಡಾ ಅನ್ನುವವರು ಕನ್ನಡಿಗ ರ್ಯಾಂಪ್ ಸಾಂಗ್ ರಚನೆ ಮಾಡಿದ್ದು, ಬಾಗಲಕೋಟೆಯ ರವಿತೇಜ್ ಸಂಗೀತ ನಿರ್ದೇಶನದಲ್ಲಿ ಕ್ಯಾಟ್ ಬುಡ್ಡಾ ಮಧುರ ಕಂಠದಲ್ಲಿ ಹಾಡಿದ್ದಾರೆ. ಕನ್ನಡಿಗ ರ್ಯಾಂಪ್ ಸಾಂಗ್ ನಲ್ಲಿ ಪ್ರವೀಣ್ ಪತ್ರಿ ಪಿ ದೀಕ್ಷಿತ್ ಅಭಿನಯಿಸಿದ್ದರೆ ಕೃಷ್ಣಾ ನಾಯ್ಕರ್ ಅದ್ಭುತ ಕ್ಯಾಮೆರಾ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಸೂಳಿಬಾವಿ ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ಸೇರಿದಂತೆ ಜಿಲ್ಲೆಯ ಐತಿಹಾಸಿಕ ತಾಣಗಳ ಮಣ್ಣಿನ ಸೊಗಡನ್ನು ರ್ಯಾಪ್ ಸಾಂಗ್ ಮೂಲಕ ಕಟ್ಟಿಕೊಡುವ ಪ್ರಯತ್ನವಿದೆ. 5 ನಿಮಿಷದ ರ್ಯಾಪ್ ಸಾಂಗ್ ಚಿತ್ರೀಕರಣ ಅಂದಾಜು 4 ಲಕ್ಷ ಬಜೆಟ್ ನಲ್ಲಿ ಮೂಡಿಬರಲಿದೆ.
ಇನ್ನು ಈಗಾಗಲೇ ಚಿತ್ರೀಕರಣ ಬಹುತೇಕವಾಗಿ ಮುಗಿಸಿದ್ದು, ಬೆಂಗಳೂರಿನ ಪ್ರತಿಷ್ಠಿತ ಆಡಿಯೋ ಕಂಪನಿಯೊಂದಿಗೆ ಕನ್ನಡಿಗ ರ್ಯಾಪ್ ಸಾಂಗ್ ಹಕ್ಕನ್ನು ಕೊಡಲಾಗಿದೆ. ರ್ಯಾಪ್ ಸಾಂಗ್'ನ್ನು ಯೂಟ್ಯೂಬ್'ಗೆ ಆಡಿಯೋ ಕಂಪನಿ ಅಪ್ಲೋಡ್ ಮಾಡಲಿದೆ.
ಇದಕ್ಕೂ ಮುನ್ನ ಆಡಿಯೋ ಕಂಪನಿಯಲ್ಲಿ ಕನ್ನಡಿಗ ರ್ಯಾಪ್ ಸಾಂಗ್ ಅದ್ದೂರಿಯಾಗಿ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಕಲಾವಿದರು, ತಂತ್ರಜ್ಞರು, ಸಹಾಯಕರು ಸೇರಿ 50ಕ್ಕೂ ಹೆಚ್ಚು ಜನ ರ್ಯಾಪ್ ಸಾಂಗ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಒಟ್ಟಿನಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಹುಡಗರು ರ್ಯಾಪ್ ಸಾಂಗ್ ಮೂಲಕ ಕನ್ನಡಿಗರ ಮನಗೆಲ್ಲಲು ಬರ್ತಿದ್ದಾರೆ. ಆದ್ರೆ ನಾಡಿನ ಸಂಗೀತ ಪ್ರೇಮಿಗಳು ಕನ್ನಡಿಗ ರ್ಯಾಪ್ ಸಾಂಗ್’ಗೆ ಯಾವ ರೀತಿ ರೆಸ್ಪಾನ್ಸ್ ನೀಡ್ತಾರೆ ಅಂತ ಕಾದು ನೋಡಬೇಕಿದೆ.