
ಬಾಗಲಕೋಟೆ (ಮಾ.13): ಶಾಲಾ ವಾರ್ಷಿಕೋತ್ಸವ ಎಂದರೆ ಅಲ್ಲಿ ಸಡಗರ, ಸಂಭ್ರಮ ಇರಬೇಕು. ಆದರೆ, ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದು ರಕ್ತಪಾತದಲ್ಲಿ ಅಂತ್ಯವಾಗಿದೆ. ಸಣ್ಣ ವಿಚಾರಕ್ಕೆ ಶುರುವಾದ ಕಿರಿಕ್, ವಾಗ್ವಾದಕ್ಕೆ ತಿರುಗಿ ಕೊನೆಯಲ್ಲಿ ಯುವಕನೊಬ್ಬನ ಕೊಲೆಯಲ್ಲಿ ಕೊನೆಗೊಂಡಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಮಾರ್ಚ್ 11 ರಂದು ರಾತ್ರಿ ಆಯೋಜಿಸಲಾಗಿತ್ತು. ಸಾವಳಗಿ ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿತ್ತು. ಗ್ರಾಮಸ್ಥರು ಮತ್ತು ಪೋಷಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕಟ್ಟಡದ ಮೇಲ್ಛಾವಣಿಯಿಂದ ಯಾರೋ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಸ್ಥಳದಲ್ಲಿದ್ದ ಕೆಲವರ ಮಧ್ಯೆ ಮಾತಿನ ಚಕಮಕಿ ಆರಂಭವಾಗಿದೆ. ಈ ವಾಗ್ವಾದ ತಾರಕಕ್ಕೇರಿ ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಸ್ಥಳೀಯರು 19 ವರ್ಷದ ಸುದೀಪ್ ಪಾಂಗೆ ಎಂಬ ಯುವಕನಿಗೆ ತೀವ್ರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆಯಲ್ಲಿ ತೀವ್ರವಾಗಿ ಪೆಟ್ಟು ತಿಂದ ಸುದೀಪ್ ಪಾಂಗೆ ಸ್ಥಳದಲ್ಲೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣವೇ ಅಲ್ಲಿದ್ದವರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಯುವಕನನ್ನು ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಕೇವಲ 19 ವರ್ಷದ ಯುವಕನ ಸಾವು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತ ಸುದೀಪ್ ಪಾಂಗೆ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಕರಣದ ಪ್ರಮುಖ ಆರೋಪಿಗಳಾದ ರಾಜು, ವಿಜಯ್ ಮತ್ತು ಮಲ್ಲಿಕಾರ್ಜುನ ಎಂಬ ಮೂವರನ್ನು ಬಂಧಿಸಿದ್ದಾರೆ. ಸಂತೋಷದಿಂದ ನಡೆಯಬೇಕಿದ್ದ ಶಾಲಾ ವಾರ್ಷಿಕೋತ್ಸವದ ವೇದಿಕೆಯು ಈಗ ಪೊಲೀಸ್ ತನಿಖೆಯ ಕೇಂದ್ರಬಿಂದುವಾಗಿದೆ. ಅಚಾನಕ್ ಆಗಿ ನಡೆದ ಈ ಘಟನೆಯಿಂದ ಸಾವಳಗಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.