ಬಡತನದ ಮಧ್ಯೆ ಓದಿ ಭಾರತೀಯ ಸೇನೆಗೆ ಆಯ್ಕೆಯಾದ ಕೋಟೆನಾಡಿನ ಕುವರಿ

By Suvarna News  |  First Published Jun 23, 2022, 7:31 PM IST
  • ಬಾಗಲಕೋಟೆ ಜಿಲ್ಲೆಯ ಯಡಹಳ್ಳಿ ಗ್ರಾಮದ  ವಿಜಯಾ 
  • 9 ತಿಂಗಳ ಟ್ರೈನಿಂಗ್ ಮುಗಿಸಿ ಕೆಲಸಕ್ಕೆ ಸೇರಲು ತೆರಳಿದ ಯೋಧೆ  
  • 4 ಜನ ಹೆಣ್ಣು ಮಕ್ಕಳನ್ನ ಓದಿಸಿ ಶ್ಲಾಘನೆಗೆ ಕಾರಣರಾದ ತಂದೆ-ತಾಯಿ 
  • ಬಡತನದಲ್ಲಿ ಓದಿ ಯಶಸ್ಸು ಕಂಡ  ಮಗಳಿಗೆ ಶುಭ ಕೋರಿ ಬೀಳ್ಕೊಟ್ಟ ಗ್ರಾಮಸ್ಥರು
     

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಜೂನ್.23) : ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಅಂದರೆ ಸಾಕು ಮೂಗು ಮುರಿಯೋ ಜನರೇ ಜಾಸ್ತಿ, ಅಂತಹದ್ದರಲ್ಲಿ ಬಡತನದಲ್ಲಿಯೇ ತಂದೆಯೊಬ್ಬ ತನ್ನ 4 ಜನ ಹೆಣ್ಣು ಮಕ್ಕಳನ್ನ ಕಟ್ಟಿಕೊಂಡು, ಕೆಲಸ ಮಾಡಿ ಜೀವನ ಸಾಗಿಸಿ,  ಅವರನ್ನು ಓದಿಸಿದ ಪರಿಣಾಮ ಇದೀಗ ಮಗಳೊಬ್ಬಳು ಸಿಆರ್.ಪಿ.ಎಫ್ ಯೋಧಳಾಗಿ ಆಯ್ಕೆಯಾಗಿದ್ದು, ಇದರಿಂದ ಮನೆಯಲ್ಲಿ ಅಷ್ಟೇ ಅಲ್ಲ, ಇಡೀ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ. ಈ ಮಧ್ಯೆ ಮಗಳಿಗೆ  ಗ್ರಾಮಸ್ಥರೆಲ್ಲಾ ಶುಭಕೋರಿ ಕಳುಹಿಸಿಕೊಟ್ಟಿದ್ದಾರೆ. 

Tap to resize

Latest Videos

undefined

ತಮ್ಮ ಮನೆಯ ಬಡತನದ ಮಧ್ಯೆ ವಿಜಯಾ ಎಂಬ ಕುವರಿ  ಓದಿಕೊಂಡು ಇದೀಗ ದೇಶ ಸೇವೆ ಮಾಡಲು ಸಿಆರ್.ಪಿ.ಎಫ್ ಯೋಧಳಾಗಿ ಆಯ್ಕೆಯಾಗಿದ್ದಾಳೆ. ಬಾಗಲಕೋಟೆ ಜಿಲ್ಲೆಯ ಯಡಹಳ್ಳಿ ಗ್ರಾಮದ ಕಲ್ಲಪ್ಲ ಮತ್ತು ರೇಣುಕಾ ಎಂಬ ದಂಪತಿಗಳ ಮಗಳೇ ವಿಜಯಾ ಹದ್ಲಿ. ಕಲ್ಲಪ್ಪನಿಗೆ ಗಂಡು ಮಕ್ಕಳು ಇಲ್ಲ, ಬದಲಾಗಿ ಲಕ್ಷ್ಮೀ, ವಿಜಯಾ, ಕವಿತಾ ಮತ್ತು ಚೈತ್ರಾ ಎಂಬ 4 ಜನ ಮಕ್ಕಳಿದ್ದಾರೆ. ಇವರ ಪೈಕಿ ಇದೀಗ ಎರಡನೇ ಮಗಳಾದ ವಿಜಯಾ ಇದೀಗ ಸಿಆರ್.ಪಿ.ಎಫ್ ಯೋಧಳಾಗಿ ಆಯ್ಕೆಯಾಗಿದ್ದಾಳೆ.

ಮೊದಲು ಎರಡು ಪರೀಕ್ಷೆಗಳನ್ನ ಪೋಲಿಸ ಆಗಬೇಕೆಂಬ ಬಯಕೆಯಿಂದ ಬರೆದಾಗ ಅದರಲ್ಲಿ ಯಶಸ್ಸು ಸಿಗದೇ ಹೋದಾಗ ಕೊನೆಗೆ ಸಿಆರ್.ಪಿ.ಎಪ್. ಯೋಧಳಾಗಲು  ಬೆಳಗಾವಿಯಲ್ಲಿ ನಡೆದ ಪರೀಕ್ಷೆಗೆ ಹಾಜರಾಗಲು  ಕಷ್ಟಪಟ್ಟು ಓದಿ ಪರೀಕ್ಷೆ ಬರೆದಾಗ ಮೊದಲ ಪರೀಕ್ಷೆಯಲ್ಲೇ ತೇರ್ಗಡೆಯಾಗಿದ್ದಾಳೆ. ಇದರಿಂದ ಮನೆಯಲ್ಲಿ ಅಷ್ಟೇ ಅಲ್ಲದೆ ಇಡೀ ಗ್ರಾಮದಲ್ಲಿಯೇ ಸಂತಸ ಮನೆ ಮಾಡಿತ್ತು. ಬಳಿಕ ಬೆಂಗಳೂರಿನ ಯಲಹಂಕ ಬಿಎಸ್.ಎಫ್ ಗ್ರೌಂಡ್ ನಲ್ಲಿ ಮೆಡಿಕಲ್ ಚೆಕ್ ಅಪ್ ನಡೆಯಿತು, ನಂತರ ಸಿಆರ್.ಪಿ.ಎಫ್ ಗ್ರೌಂಡ್ ನಲ್ಲಿ ಜೊಯಿನಿಂಗ್ ಆಗಿ ಬಳಿಕ 9 ತಿಂಗಳ ಟ್ರೈನಿಂಗ್ ಮುಗಿಸಿ ಬಂದಿದ್ದು, ಇದೀಗ ದೇಶ ಸೇವೆಗಾಗಿ ಹೊರಟಿದ್ದಾಳೆ‌. ಇನ್ನು ಮಗಳು ದೇಶ ಸೇವೆಗೆ ಹೊರಡುವ ವೇಳೆ ಮನೆಯಲ್ಲಿನ ತಂದೆ ತಾಯಿಗಳು ಗ್ರಾಮಸ್ಥರು ಆಶೀರ್ವದಿಸಿ ಶುಭ ಹಾರೈಸಿದರು.

ಸರ್ಕಾರಿ ಶಾಲೆಗೆ ಅಡ್ಮಿಶನ್ ಆಗಿರುವ ಟಾಪ್ ಜಿಲ್ಲೆಯಲ್ಲಿ ಮಕ್ಕಳಿಗಿಲ್ಲ ತರಗತಿ ಕೊಠಡಿ!

4 ಜನ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ತಂದೆ- ತಾಯಿ ಬದುಕು ಕಂಡುಕೊಂಡ ಮಕ್ಕಳು
ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಕಲ್ಲಪ್ಪ ಮತ್ತು ರೇಣುಕಾ ದಂಪತಿಗಳಿಗೆ ಇದ್ದದ್ದು 4 ಜನ ಹೆಣ್ಣು ಮಕ್ಕಳೇ, ಇನ್ನು ಬಡತನದ ಮಧ್ಯೆ ತಮ್ಮ ಹೆಣ್ಣು ಮಕ್ಕಳನ್ನ ಹೆಚ್ಚೆಚ್ಚು ಓದಿಸಲು ಕಷ್ಟವಾಗಿತ್ತು, ಆದಾಗ್ಯೂ ಕಡು ಬಡತನದಲ್ಲೂ ಹೆಣ್ಣು ಮಕ್ಕಳು ಸಕಾ೯ರಿ ಶಾಲೆಯಲ್ಲಿಯೇ ಓದಿ ಉತ್ತಮ ವ್ಯಾಸಂಗ ಪಡೆದುಕೊಂಡಿದ್ದಾರೆ. ಇವರ ಪೈಕಿ ಮೊದಲ ಮಗಳು ಲಕ್ಷ್ಮೀ ಪಿಯುಸಿ ಮುಗಿಸಿ ಗ್ರಾಮ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಈಕೆಯೂ ಸಹ 2014ರಲ್ಲಿ ಐಟಿಬಿಪಿ (ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ) ದೇಶ ಸೇವೆಗೆ ಯೋಧಳಾಗಿ ಆಯ್ಕೆಯಾಗಿದ್ದಳು. ಆದರೆ ಆಗ ಮನೆಯಲ್ಲಿ ಜವಾಬ್ದಾರಿ ಹೊತ್ತಿದ್ದ ಮಗಳನ್ನ ಕಳುಹಿಸಲು ತಂದೆ ತಾಯಿಗಳು ಸಿದ್ದರಾಗಲಿಲ್ಲ. ಹೀಗಾಗಿ ತಾಲೂಕ ಪಂಚಾಯತಿಯಲ್ಲಿ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಇದರ ಬೆನ್ನಲ್ಲೆ ಎರಡನೇ ಮಗಳಾದ ವಿಜಯಾಳ ಓದಿಗೆ ಮೊದಲ ಮಗಳು ಲಕ್ಷ್ಮೀ ಸಹಕಾರಿಯಾದಳು. ಇದರಿಂದ ವಿಜಯಾ ತನ್ನ ಸ್ವಗ್ರಾಮದಲ್ಲಿ ಪ್ರಾಥಮಿಕ , ಪ್ರೌಢ ಶಿಕ್ಷಣ ಮುಗಿಸಿ, ಪಿಯುಸಿ ನಂತರ ಬಾಗಲಕೋಟೆಯಲ್ಲಿ ಪದವಿ ಸಹಿತ ಬಿಪಿಎಡ್ ಪದವಿಯೊಂದಿಗೆ NCC ಟ್ರೈನಿಂಗ್ ಸಹ ಪಡೆದಳು. ಇದಾದ ಬಳಿಕ ಸಿಆರ್. ಪಿ.ಎಫ್ ಪರೀಕ್ಷೆ ಬರೆದು ಯೋಧಳಾಗಿ ನೇಮಕವಾದಳು. ಇನ್ನುಳಿದಂತೆ ಮೂರನೇ ಮಗಳು ಕವಿತಾ ಪಿಯುಸಿ ಓದಿ ಮದುವೆಯಾಗಿದ್ದರೆ, ಕೊನೆಯ ಮಗಳು ಚೈತ್ರಾ ಇದೀಗ ಬಿಎಸ್ಸಿ ದ್ವೀತಿಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ‌. ಹೀಗೆ ತಂದೆ ಕಲ್ಲಪ್ಪ ತನ್ನ ಬಡತನದ ಮಧ್ಯೆ ತನ್ನ ಹೆಣ್ಣು ಮಕ್ಕಳ ಯಶಸ್ಸಿಗೆ ಕಾರಣರಾಗಿದ್ದು, ಎರಡನೇ ಮಗಳು ವಿಜಯಾ ದೇಶ ಸೇವೆಗಾಗಿ ಆಯ್ಕೆಯಾಗಿದ್ದಾಳೆ.

ಬಾಳೆಹೊನ್ನೂರು ಶಾಖಾ ಮಠದ 16ನೇ ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ವಿವಾಹ

ದೈಹಿಕ ಶಿಕ್ಷಕಿಯಾಗಬೇಕೆಂದವಳು,  ಆಗಿದ್ದು ಸಿ.ಆರ್.ಪಿ.ಎಫ್.ಯೋಧೆ
ವಿಜಯಾ ತನ್ನ ಮನೆಯ ಬಡತನದ ಪರಿಸ್ಥಿತಿ ಮನಗಂಡು ತಾನು ಕೂಡಾ ನೌಕರಿ ಸೇರಬೇಕು, ಮನೆಯ ಸಂಕಷ್ಟದ ಪರಿಸ್ಥಿತಿಗೆ ನೆರವಾಗಬೇಕೆಂಬ ಹವಣಿಕೆಯಲ್ಲಿದ್ದವಳು. ಈ ಮಧ್ಯೆ ಬಿಪಿಎಡ್ ಪದವಿ ಮುಗಿಸಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಬೇಕೆಂಬ ವಿಚಾರದಲ್ಲಿದ್ದಳು. ಆದರೆ ಅದರ ಬದಲಾಗಿ ತನ್ನ ಮುಂದೆ ಬಂದ ಪೋಲಿಸ ಮತ್ತು ಯೋಧರ ಆಯ್ಕೆ ಸಂಭಂದಿತ ಪರೀಕ್ಷೆ ಬರೆಯಲು ಯೋಚಿಸಿದಳು. ಪೋಲಿಸ ಇಲಾಖೆಯ ಎರಡು ಪರೀಕ್ಷೆಗಳಲ್ಲಿ  ತನಗೆ ಯಶಸ್ಸು ಸಿಗದೇ ಹೋದಾಗ ಹೇಗಾದರೂ ಮಾಡಿ ದಡ ಕಾಣಲೇಬೇಕೆಂಬ ಹಠ ತೊಟ್ಟ ವಿಜಯಾ ಕಷ್ಟಪಟ್ಟು ಚಾಲೆಂಜ್ ನಿಂದ ಓದಲಾರಂಬಿಸಿದಳು. ಅದೃಷ್ಟ ಆಕೆಯ ಕೈ ಹಿಡಿದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇದೀಗ ಸಿ.ಆರ್.ಪಿ.ಎಫ್ ಯೋಧಳಾಗಿ ಆಯ್ಕೆಯಾಗಿದ್ದಾಳೆ. ತನ್ನ ಬಡತನದಲ್ಲಿರುವ ಮನೆಗೆ ತಾನು ಬೆನ್ನೆಲುಬಾಗಿ ನಿಲ್ಲಬೇಕೆಂಬ ಮನದಾಸೆಯನ್ನ ಸಾರ್ಥಕಗೊಳಿಸಲು ಮುಂದಾಗಿದ್ದಾಳೆ.

ಯೋಧೆಯಾಗಿ ವಿಜಯಾ ಆಯ್ಕೆ, ಗ್ರಾಮಸ್ಥರಲ್ಲಿ ಹರ್ಷ : ಇನ್ನು ಗ್ರಾಮದಲ್ಲಿ ಸಿ.ಆರ್.ಪಿ.ಎಫ್ ಯೋಧೆಯಾಗಿ ಆಯ್ಕೆಯಾಗಿ ಟ್ರೈನಿಂಗ್ ಮುಗಿಸಿ ಇನ್ನೇನು ದೇಶ ಸೇವೆಗೆ ತೆರಳುತ್ತಿದ್ದ ವಿಜಯಾಳಿಗೆ ಇಡೀ ಗ್ರಾಮದ ಜನರೆಲ್ಲಾ ಶುಭಾಶಯ ಹೇಳಿದರು, ಇನ್ನು 4 ಜನ ಸಹೋದರಿಯರು ಸೇರಿ ಅಪ್ಪುಗೆಯ ಮೂಲಕ ಶುಭ ಕೋರಿದರು. ಈ ಮಧ್ಯೆ ವಿಜಯಾ ತನ್ನ ತಂದೆ ತಾಯಿಯರ ಆಶೀರ್ವಾದ ಪಡೆದಳು. ಈ ಮಧ್ಯೆ ತಾಯಿ ರೇಣುಕಾ ಮಗಳಿಗೆ ದೇಶ ಸೇವೆಗಾಗಿ ಧೈರ್ಯದಿಂದ ಕಾರ್ಯ ನಿರ್ವಹಿಸುವಂತೆ ಹೇಳಿ ಆತ್ಮಸ್ಥೈರ್ಯ ಹೆಚ್ಚಿಸಿದಳು. ತಂದೆ ತಾಯಿಗಳ ಮತ್ತು ಗ್ರಾಮಸ್ಥರ ಶುಭ ಹಾರೈಕೆ ಸೇರಿದಂತೆ ಅಕ್ಕಪಕ್ಕದವರೆಲ್ಲಾ ಮನೆಗೆ ಬಂದು ಅಭಿಮಾನದಿಂದ ವಿಜಯಾಳನ್ನ ಬೀಳ್ಕೊಟ್ಟರು.

click me!