ಜನ್ಮ ಕೊಟ್ಟು ಬಿಟ್ಟು ಹೋದ ಆನೆ, ಕಣ್ಣೀರಿಡುತ್ತಲೇ ಬಿಡಾರಕ್ಕೆ ತೆರಳಿದ ಮರಿಯಾನೆ..!

By Suvarna NewsFirst Published Oct 6, 2020, 3:13 PM IST
Highlights

6 ದಿನದ ಮರಿಯಾನೆಗೆ  ರಾಜ್ಯದ ದೊಡ್ಡ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ಟು ಶಿವಮೊಗ್ಗ ತಲುಪಿದ ಮರಿಯಾನೆ ನ್ಯೂರೋಲಾಜಿಕಲ್ ಸಮಸ್ಯೆ ಯಿಂದ ಬಳಲುತ್ತಿದೆ. ಈ ಕುರಿತು ಒಂದು ವರದಿ. 

ಶಿವಮೊಗ್ಗ/ಹಾಸ, (ಅ.06): ಇದು ಕೇವಲ 6 ದಿನದ ಅನೆ ಮರಿ, ತಾಯಿಯಿಂದ ಪರಿತ್ಯಕ್ತವಾಗಿ ಅಲೆದಾಡುತ್ತಿತ್ತು. ಕೊನೆಗಿದು ಕಾಫಿ ತೋಟದ ಮಾಲೀಕರ ಗಮನಕ್ಕೆ ಬಂದು ಅರಣ್ಯ ಇಲಾಖೆಯ ಮೂಲಕ ಆನೆ ಬಿಡಾರ ಸೇರಿದೆ.

 ಹೌದು... ಹಾಸನ ಜಿಲ್ಲೆಯ ಸಕಲೇಶಪುರದ ಕಾಫಿತೋಟದಲ್ಲಿ ತಾಯಿಯಿಂದ ಬೇರ್ಪಟ್ಟು ಪತ್ತೆಯಾದ ಮರಿಯಾನೆಯನ್ನು ಚಿಕಿತ್ಸೆಗೆಂದು ರಾಜ್ಯದ ದೊಡ್ಡ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ. 

ಮಳಲಿಯ ಅನಿಲ್ ಎಂಬುವರ ಕಾಫಿ ತೋಟದಲ್ಲಿ ಗಾಯಗೊಂಡು ಕೆಸರಿನಲ್ಲಿ ಸಿಲುಕಿ ನರಳುತ್ತಿದ್ದ ಮರಿಯಾನೆಗೆ ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಸಕ್ರೆಬೈಲು ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ. ಮರಿಯಾನೆ ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದೆ. 

ಜನ್ಮ ಕೊಟ್ಟು ಬಿಟ್ಟು ಹೋದ ತಾಯಿ, ಮರಿಯಾನೆ ಪರಿಸ್ಥಿತಿ ಕಂಡು ಮರುಗುತ್ತಿರೋ ಜನ

ಮರಿಯಾನೆ ಹಾಲು ಚೆನ್ನಾಗಿ ಕುಡಿಯುತ್ತಿದೆ. ಆದರೆ ನ್ಯೂರೋಲಾಜಿಕಲ್ ಸಮಸ್ಯೆಯಿಂದ ಬಳಲುತ್ತಿರುವ ಮರಿಯಾನೆಯ ಹಿಂಭಾಗದ ಕಾಲು ಊನವಾಗಿದೆ. ಅಲ್ಲದೆ, ಮುಂಭಾಗದ ಎಡಗಾಲು ಕೂಡ ಎಲ್ಬೊ ಜಾಯಿಂಟ್ ತಪ್ಪಿದ್ದು ತೀವ್ರ ನೋವು ಇರುವುದರಿಂದ ಮೇಲೆಳಲು ಮರಿಯಾನೆಗೆ ಸಾಧ್ಯವಾಗುತ್ತಿಲ್ಲ.ಕಾಲುಗಳನ್ನು ಮಜಾಸ್ ಮಾಡಲಾಗುತ್ತಿದೆ. ಎರಡು ಗಂಟೆಗೊಮ್ಮೆ ಹಾಲು ಕುಡಿಸಲಾಗುತ್ತಿದೆ. ಚಿಕಿತ್ಸೆ ಸ್ಪಂದಿಸುತ್ತಿದ್ದು ಇದೊಂದು ಸವಾಲಿನ ಟಾಸ್ಕ್ ಆಗಿಯೇ ಪರಿಣಮಿಸಿದೆ. 

ಮರಿಯಾನೆಯ ಸೇರ್ಪಡೆಯಿಂದ ರಾಜ್ಯದ ಅತಿದೊಡ್ಡ ಆನೆ ಬಿಡಾರ ಎಂಬ ಹೆಗ್ಗಳಿಕೆ ಸಕ್ರೆಬೈಲಿಗೆ ಸಲ್ಲಲಿದ್ದು ಒಟ್ಟಾರೆ ಆನೆಗಳ ಸಂಖ್ಯೆ 23ಕ್ಕೆ ಏರಿಕೆ ಕಂಡಿದೆ. ಬಿಡಾರದ ಐದನೇ ಮರಿಯಾನೆ ಇದಾಗಿದ್ದು ಮರಿಯಾನೆಗೆ ತಾಯಿ ಹಾಲು ಸಿಗದ ಕಾರಣ ನಿಶ್ಯಕ್ತವಾಗಿದೆ. ಒಟ್ಟಿನಲ್ಲಿ ಮರಿಯಾನೆ ಸಾವಿನ ಸವಾಲ್ ಗೆದ್ದು ಬರಲಿ ಎಂದು ಪ್ರಾಣಿಪ್ರಿಯರು ಹಾರೈಸುತ್ತಿದ್ದಾರೆ. 

ಆದರೆ ಮರಿಯಾನೆಗಳು ತೀವ್ರ ಗಾಯಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕಾಡಿನಲ್ಲಿ ಬಾಲಾಜಿ, ಐರಾವತ, ಶಾರಾದೆ ಎಂಬ ಮರಿಯಾನೆಗಳು ಗಾಯಗೊಂಡಿದ್ದಾಗಲೂ ಇಲ್ಲಿಗೆ ತಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಹಾಸನದ ಕಾಡಿನಲ್ಲಿ ಸೆರೆ ಹಿಡಿದಿದ್ದ ಶಾರದೆ ಮರಿಯಾನೆ ಬಹುಅಂಗಾಂಗ ವೈಫಲ್ಯ, ಜ್ವರ ಮತ್ತು ರಕ್ತ ಬೇಧಿಯಿಂದ ಬಳಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತ್ತು. ಹೀಗಾಗಿ ಈಗ ಸೆರೆ ಸಿಕ್ಕ ಮರಿಯಾನೆಯ ಆರೋಗ್ಯದ ಕುರಿತು ಕಾಳಜಿ ವ್ಯಕ್ತವಾಗುತ್ತಿದೆ. 

click me!