
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೆಲವೊಂದು ವಿಷಯಗಳು ಮಾತ್ರ ವಿಚಿತ್ರವಾಗಿಯೇ ಉಳಿದುಬಿಡುತ್ತವೆ. ಯಾರ ಊಹೆಗೂ ನಿಲುಕದ್ದಾಗಿರುತ್ತದೆ. ವೈದ್ಯಕೀಯದಲ್ಲಿಯೂ ವೈದ್ಯರು ಇಂಥ ವಿಚಿತ್ರ ಕೇಸ್ಗಳನ್ನು ನಡೆಸುತ್ತಲೇ ಇರುತ್ತಾರೆ. ಕೊನೆಗೆ ಅದಕ್ಕೆ ಕಾರಣ ಕಂಡುಹಿಡಿದು ಅದಕ್ಕೊಂದು ವೈದ್ಯಕೀಯದ ಹೆಸರು ಇಟ್ಟರೂ, ಆ ವಿಷಯಕ್ಕೆ ಕಾರಣ ಏನು ಎನ್ನುವುದು ನಿಗೂಢವಾಗಿಯೇ ಉಳಿದುಬಿಡುತ್ತದೆ. ಇದೀಗ ಅಂಥದ್ದೇ ಒಂದು ಕೇಸ್ ಹುಬ್ಬಳ್ಳಿಯಲ್ಲಿ ಆಗಿದ್ದು, ವೈದ್ಯರೇ ಬೆಚ್ಚಿಬಿದ್ದಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನವಜಾತ ಶಿಶುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿದ್ದು, ವೈದ್ಯರು ಅಚ್ಚರಿಗೊಂಡಿದ್ದಾರೆ. ಎರಡನೇ ಹೆರಿಗೆಗೆಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ 32 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಹುಟ್ಟಿರುವ ಮಗುವಿನೊಳಗೊಂದು ಭ್ರೂಣ ಇರುವುದು ಪತ್ತೆಯಾಗಿದೆ. ಮಹಿಳೆಗೆ ಕಳೆದ ಸೆಪ್ಟೆಂಬರ್ 23ರಂದು ಗಂಡು ಮಗು ಜನಿಸಿತ್ತು. ಮಗುವಿನ ದೇಹದಲ್ಲಿ ಕೆಲ ಬದಲಾವಣೆಗಳು ಕಂಡು ಬಂದ ಹಿನ್ನಲೆಯಲ್ಲಿ ಮಗುವಿಗೆ ಆಲ್ಟ್ರಾಸೌಂಡ್ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.
ಅಷ್ಟಕ್ಕೂ ಇದು ಅವಳಿ ಶಿಶು. ಆದರೆ ಮತ್ತೊಂದು ಮಗು ಅಮ್ಮನ ಗರ್ಭದಲ್ಲಿ ಜನಿಸುವ ಬದಲು ಶಿಶುವಿನ ಗರ್ಭದಲ್ಲಿ ಸೇರಿಹೋಗಿದೆ. ತನ್ನ ಅವಳಿ ಸಹೋದರನನ್ನು ಆ ಮಗು ತನ್ನ ಗರ್ಭದಲ್ಲಿ ಹೊತ್ತಿದೆ. ವಿಶ್ವಾದ್ಯಂತ ಸುಮಾರು 200 ಪ್ರಕರಣಗಳು ಹಾಗೂ ಭಾರತದಲ್ಲಿ 15 ರಿಂದ 20 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿದಿದೆ.
ಈಚೆಗೆ ಮಹಾರಾಷ್ಟ್ರದಲ್ಲಿಯೂ ಇಂಥ ಘಟನೆ ನಡೆದಿತ್ತು. ಆದರೆ ಮಗು ಗರ್ಭದಲ್ಲಿ ಇದ್ದಾಗಲೇ ಇನ್ನೊಂದು ಭ್ರೂಣ ಆ ಮಗುವಿನ ಒಳಗೆ ಸೇರಿರುವುದು ತಿಳಿದಿತ್ತು. ಮಹಿಳೆ 9 ತಿಂಗಳವರೆಗೆ ಹಲವು ಬಾರಿ ಪರೀಕ್ಷೆಗೆ ಒಳಗಾಗಿದ್ದರೂ ವೈದ್ಯರಿಗೆ ಇದನ್ನು ಕಂಡುಹಿಡಿಯಲು ಆಗಿರಲಿಲ್ಲ. 9ನೇ ತಿಂಗಳಿಗೆ ಮಹಿಳೆಗೆ ಪ್ರಸವ ವೇದನೆ ಶುರುವಾದಾಗಲಷ್ಟೇ ಇದು ಗುರುತಿಸಲು ಸಾಧ್ಯವಾಗಿದೆ! "ಹಿಂದಿನ ಸೋನೋಗ್ರಫಿಯಲ್ಲಿ ಇದು ಗಮನಕ್ಕೆ ಬಂದೇ ಇರಲಿಲ್ಲ. ಏಕೆಂದರೆ ಇದು ಬಹಳ ಅಪರೂಪದ ಸ್ಥಿತಿಯಾಗಿದ್ದು, ಅಂತಹ ಸ್ಥಿತಿ ಅಸ್ತಿತ್ವದಲ್ಲಿರುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಆದ್ದರಿಂದ, ನಾನು ಒಂದೆರಡು ವೈದ್ಯರಿಂದ ವಿವರವಾದ ಅಧ್ಯಯನವನ್ನು ಮಾಡಿ ಅದನ್ನು ದೃಢಪಡಿಸಿದೆ" ಎಂದು ವೈದ್ಯರು ಹೇಳಿದ್ದರು.