ಬೊಮ್ಮಾಯಿ ಪದಗ್ರಹಣಕ್ಕೆ ಗೈರು: ಶ್ರೀರಾಮುಲು ಮುನಿಸಿಗೆ ಕಾರಣವೇನು?

By Kannadaprabha News  |  First Published Jul 29, 2021, 1:26 PM IST

* ಉಪಮುಖ್ಯಮಂತ್ರಿ ಘೋಷಿಸದ ಹಿನ್ನೆಲೆ ಹಿಂದಿನ ರಾತ್ರಿಯೇ ಬಳ್ಳಾರಿಗೆ ಆಗಮನ
*  ಘೋಷಣೆಯಾಗದ ಡಿಸಿಎಂ ಹುದ್ದೆ
*  ಶ್ರೀರಾಮುಲು ಬೆಂಗಳೂರು ತೊರೆದು ಬಳ್ಳಾರಿಗೆ ಬಂದಿದ್ದು ಏಕೆ? 
 


ಬಳ್ಳಾರಿ(ಜು.29): ಉಪಮುಖ್ಯಮಂತ್ರಿ ಘೋಷಿಸದ ಹಿನ್ನೆಲೆ ಮುನಿಸಿಕೊಂಡ ಶ್ರೀರಾಮುಲು, ನೂತನ ಮುಖ್ಯಮಂತ್ರಿಗಳ ಕಾರ್ಯಕ್ರಮದಿಂದಲೂ ದೂರ ಉಳಿದು ಬಳ್ಳಾರಿಯ ಮನೆ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀರಾಮುಲು, ಮಂಗಳವಾರ ತಡರಾತ್ರಿ ಬಳ್ಳಾರಿಗೆ ಆಗಮಿಸಿದ್ದು, ಎಲ್ಲರಿಂದಲೂ ದೂರ ಉಳಿದಿರುವುದು ಅನೇಕ ರಾಜಕೀಯ ಲೆಕ್ಕಾಚಾರ, ಊಹಾಪೋಹಗಳಿಗೆ ರೆಕ್ಕೆಪುಕ್ಕ ಮೂಡಿಸಿದೆ.

ಡಿಸಿಎಂ ಹುದ್ದೆ ಘೋಷಣೆ ಮಾಡಲಿಲ್ಲ ಎಂಬ ಕಾರಣಕ್ಕಾಗಿಯೇ ಬೆಂಗಳೂರಿನಿಂದ ಬಳ್ಳಾರಿಯತ್ತ ದಿಢೀರ್‌ ಆಗಮಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿಯೇ ಕೇಳಿ ಬಂದಿವೆ. ಇದಕ್ಕೆ ಪುಷ್ಟಿನೀಡುವಂತೆ ಅವರ ಪ್ರತಿಕ್ರಿಯೆ, ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಕೇಳಲು ಮನೆಯ ಮುಂದೆ ಗಂಟೆಗಟ್ಟಲೆ ಕಾದ ಮಾಧ್ಯಮಗಳಿಗೂ ಶ್ರೀರಾಮುಲು ಸಿಗದೆ, ಮನೆಯಲ್ಲಿಯೇ ಉಳಿದುಕೊಂಡರು.

Tap to resize

Latest Videos

undefined

ಆನಂದ್‌ ಸಿಂಗ್‌ ಪರ ಡಿಸಿಎಂ ಹುದ್ದೆ ಅಭಿಯಾನ

ರಾಜ್ಯ ರಾಜಕೀಯದಲ್ಲಿ ಅನೇಕ ಬೆಳವಣಿಗೆ ನಡೆಯುತ್ತಿವೆ. ಡಿಸಿಎಂ, ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಅನೇಕ ಶಾಸಕರು, ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಶ್ರೀರಾಮುಲು ಬೆಂಗಳೂರು ತೊರೆದು ಬಳ್ಳಾರಿಗೆ ಬಂದಿದ್ದು ಏಕೆ ಎಂಬ ಪ್ರಶ್ನೆಗಳು ಮೂಡಿವೆ.

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ವಿದೇಶದಲ್ಲಿದ್ದ ರಾಮುಲು ಬೆಂಗಳೂರಿಗೆ ಬಂದರು. ನೂತನ ಸಿಎಂ ಘೋಷಣೆ ಮಾಡುವಾಗಲೂ ಅಲ್ಲಿಯೇ ಇದ್ದರು. ಆದರೆ, ಡಿಸಿಎಂ ಹುದ್ದೆ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದರು. ಆದರೆ, ತಡವಾಗಿದ್ದರಿಂದ ಮುನಿಸಿಕೊಂಡ ಶ್ರೀರಾಮುಲು ಬಳ್ಳಾರಿಯ ಕಡೆ ಮುಖವೊಡ್ಡಿದ್ದಾರೆ.

ಏತನ್ಮಧ್ಯೆ ಶ್ರೀರಾಮುಲು ಬೆಂಬಲಿಗರು ಹಾಗೂ ಸಮುದಾಯದ ಅಭಿಮಾನಿಗಳು ಡಿಸಿಎಂ ಶ್ರೀರಾಮುಲು ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸುತ್ತಿದ್ದಾರೆ. ಕೆಲವರು ನೂತನ ಡಿಸಿಎಂ ಎಂದು ಪತ್ರಿಕೆ ಜಾಹೀರಾತು ನೀಡಿ ಶುಭ ಹಾರೈಸಿದ್ದಾರೆ. ಆದರೆ, ಡಿಸಿಎಂ ಹುದ್ದೆ ಮಾತ್ರ ಘೋಷಣೆಯಾಗಲಿಲ್ಲ. ಇದು ಶ್ರೀರಾಮುಲುಗೆ ಮುಜುಗರ ತಂದಿದೆ ಎನ್ನಲಾಗಿದ್ದು, ಈ ಕಾರಣಕ್ಕಾಗಿಯೇ ಬೆಂಗಳೂರು ಬಿಟ್ಟು ಬಳ್ಳಾರಿಯ ಹವಾಂಭಾವಿ ಪ್ರದೇಶದಲ್ಲಿ ತಮ್ಮ ನಿವಾಸ ಸೇರಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
 

click me!