ಬಿ-ಖಾತಾಗಳಿಗೆ ಎ-ಖಾತಾ ಕಾನೂನು ಮಾನ್ಯತೆ ಭಾಗ್ಯ : ಬಿಬಿಎಂಪಿ ನೀಡಿರುವ ಎಲ್ಲ ಬಿ ಖಾತೆಗಳಿಗೆ ಅನ್ವಯ

Kannadaprabha News   | Kannada Prabha
Published : Jul 18, 2025, 06:57 AM IST
BBMP latest news today photo

ಸಾರಾಂಶ

ರಾಜ್ಯ ಸರ್ಕಾರ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಬಿ-ಖಾತಾ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿದ್ದು, 2024ರ ಸೆ.30 ರವರೆಗೆ ಬಿಬಿಎಂಪಿ ನೀಡಿರುವ ಎಲ್ಲ ಬಿ-ಖಾತಾಗಳಿಗೆ ಎ-ಖಾತಾ ಅಥವಾ ಸರಿಯಾದ ಖಾತಾ (ಕಾನೂನು ಬದ್ಧ) ಎಂದು ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.

ಬೆಂಗಳೂರು : ರಾಜ್ಯ ಸರ್ಕಾರ ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಬಿ-ಖಾತಾ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿದ್ದು, 2024ರ ಸೆ.30 ರವರೆಗೆ ಬಿಬಿಎಂಪಿ ನೀಡಿರುವ ಎಲ್ಲ ಬಿ-ಖಾತಾಗಳಿಗೆ ಎ-ಖಾತಾ ಅಥವಾ ಸರಿಯಾದ ಖಾತಾ (ಕಾನೂನು ಬದ್ಧ) ಎಂದು ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.

ಈ ನಿರ್ಧಾರದಿಂದ ವರ್ಷಗಳಿಂದ ಕಾನೂನು ಮಾನ್ಯತೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ಬಿ-ಖಾತಾದಾರರಿಗೆ ನಿರಾಳತೆ ಮೂಡಿದ್ದು, ಈ ಬಗ್ಗೆ ಸದ್ಯದಲ್ಲೇ ನಿಯಮಾವಳಿ ಸಹಿತ ಅಧಿಕೃತ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ. ಪ್ರಸ್ತುತ ಇ-ಖಾತಾ ಜಾರಿಯಲ್ಲಿರುವುದರಿಂದ ಎ-ಖಾತಾ ಹಾಗೂ ಸರಿಯಾದ ಖಾತಾಗಳನ್ನು ಹೇಗೆ ವಿತರಿಸಬೇಕು ಎಂಬ ಪ್ರಕ್ರಿಯೆ ಹಾಗೂ ಶುಲ್ಕ ವಿವರಗಳನ್ನು ತಿಳಿಸುವ ಸಾಧ್ಯತೆಯಿದೆ.

ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯು 2009 ರಿಂದ ಈಚೆಗೆ ಬಿ-ಖಾತಾ ನೀಡಲಾಗುತ್ತಿತ್ತು. ಬಿ-ಖಾತಾ ನೀಡುವ ಪ್ರಕ್ರಿಯೆಯನ್ನು 2024ರ ಸೆ.30 ರಂದು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ 2009 ರಿಂದ 2024ರ ಸೆ.30ರ ನಡುವೆ ನೀಡಿರುವ ಬಿ-ಖಾತಾ ಆಸ್ತಿ ಸಮಸ್ಯೆ ಪರಿಹರಿಸಲು ಸುದೀರ್ಘ ಚರ್ಚೆ ನಡೆಸಲಾಯಿತು.

ಬಳಿಕ ಈ ಬಿ-ಖಾತಾ ಸರ್ಕಾರದ ಸುತ್ತೋಲೆಗಳ ಆಧಾರದ ಮೇಲೆ ನೀಡಿದ್ದರೆ ಎ-ಖಾತಾ ಎಂದು ಪರಿಗಣಿಸಬಹುದು. ಇಲ್ಲದಿದ್ದರೆ ಸರಿಯಾದ ಖಾತಾ ಎಂದು ಪರಿಗಣಿಸಿ ಕಾನೂನು ಉದ್ದೇಶಕ್ಕೆ ಅಧಿಕೃತ ಎಂದು ಪರಿಗಣಿಸಬಹುದು ಎಂದು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಈ ಮೂಲಕ ಬಿ ಖಾತಾಗಳಿಗಿದ್ದ ಬಿಬಿಎಂಪಿ ನಕ್ಷೆ ಅನುಮೋದನೆ, ಓಸಿ ಹಾಗೂ ಸಿಸಿ ಸಮಸ್ಯೆ, ತನ್ಮೂಲಕ ಉಂಟಾಗಿದ್ದ ವಿದ್ಯುತ್‌ ಸಂಪರ್ಕ, ನೀರು, ಒಳಚರಂಡಿ ಸಂಪರ್ಕ ಸಮಸ್ಯೆಗಳಿಗೆ ಮುಕ್ತಿ ನೀಡಲು ಮುಂದಾಗಿದೆ.

2009ಕ್ಕಿಂತ ಹಿಂದಿನ ಆಸ್ತಿಗೆ ಸರಿಯಾದ ಖಾತಾ:

ಬಿಬಿಎಂಪಿ ವ್ಯಾಪ್ತಿಯಲ್ಲಿ 2009ರಲ್ಲಿ ಕೆಎಂಸಿ-1976 ರ ಸೆಕ್ಷನ್‌ 108ಎ ಸೇರ್ಪಡೆ ಮಾಡಿ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾ ನೀಡುವ ಪರಿಕಲ್ಪನೆ 2009ರಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಅನಧಿಕೃತ ಖಾತೆಗಳಿಗೆ ಬಿ-ಖಾತಾ ನೀಡುವ ಪರಿಕಲ್ಪನೆ ಇರಲಿಲ್ಲ. ಹೀಗಾಗಿ 2009ಕ್ಕಿಂತ ಹಿಂದೆ ನೀಡಿರುವ ಎಲ್ಲ ಖಾತಾಗಳೂ ಎ-ಖಾತಾ ಅಥವಾ ಸರಿಯಾದ ಖಾತಾ (ಕಾನೂನು ಬದ್ಧ) ಎಂದು ತೀರ್ಮಾನಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ?:

ಅನಧಿಕೃತ ಆಸ್ತಿಗಳಿಗೆ ಕೆಲ ಮಾನದಂಡ ಪೂರೈಸಿದ್ದರೆ ಎ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಕಾಶವನ್ನು 2021ರಲ್ಲಿ ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ ತಂದು ರದ್ದುಗೊಳಿಸಲಾಗಿತ್ತು. ಯೋಜನಾ ಪ್ರಾಧಿಕಾರದಿಂದ ಬಿಡುಗಡೆಯಾಗದ ಹೊರತು ಯಾವುದೇ ನಿವೇಶನ ಹಾಗೂ ಕಟ್ಟಡಗಳಿಗೆ ಖಾತಾ ಹಾಗೂ ಇ-ಖಾತಾ ನೀಡುವುದು ನಿಷೇಧಿಸಲಾಗಿತ್ತು. ಆದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಏಕ ನಿವೇಶನಗಳಿಗೆ ಸಹ ಎ-ಖಾತಾ ನೀಡಲಾಗಿತ್ತು.

ಉಳಿದಂತೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬದಲಾವಣೆಗೊಂಡ ಯಾವುದೇ ವಿಸ್ತೀರ್ಣದ ಭೂಮಿಗೆ ಮತ್ತು ಅಭಿವೃದ್ಧಿ ಶುಲ್ಕವನ್ನು ಪಾವತಿಸಿದ ಜಾಗಕ್ಕೆ ಬಿ-ಖಾತಾ ನೀಡಿದ್ದರೆ ಅದಕ್ಕೆ ಎ-ಖಾತಾ ನೀಡಬಹುದು.

2.5 ಎಕರೆ ವಿಸ್ತೀರ್ಣದ ಏಕ ನಿವೇಶನಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಬಿಬಿಎಂಪಿಗೆ ನೀಡಲಾಗಿದ್ದು, ಖಾಸಗಿ ರಸ್ತೆಗಳು ಮತ್ತು ಬೀದಿಗಳನ್ನು ಸಾರ್ವಜನಿಕ ರಸ್ತೆ ಅಥವಾ ಬೀದಿಗಳೆಂದು ಘೋಷಿಸಿದ್ದರೆ ಅವುಗಳಿಗೆ ಎ-ಖಾತಾ ನೀಡಬಹುದು ಎಂದು ಹೇಳಲಾಗಿದೆ.

ಬಿ-ಖಾತಾದಾರರಿಗೆ ಎ-ಖಾತಾ/ಸರಿಯಾದ ಖಾತಾ ನೀಡಲು ನಿರ್ಧಾರ: ಎಚ್.ಕೆ.ಪಾಟೀಲ್‌

ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌, ಬೆಂಗಳೂರಿನಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣ ಮತ್ತು ಬಡಾವಣೆ ನಿರ್ಮಿಸುತ್ತಿರುವ ಬಗ್ಗೆ ಶಿಸ್ತು ತರಲು ಸಂಪುಟದಲ್ಲಿ ಚರ್ಚಿಸಲಾಯಿತು. ನಗರದ ನಾಗರಿಕರಿಗೆ ಆಗುತ್ತಿರುವ ಅವ್ಯವಸ್ಥೆ, ಉಸಿರುಗಟ್ಟಿಸುವಂತಹ ತೊಂದರೆ ನಿವಾರಿಸಲು ಎ ಮತ್ತು ಬಿ-ಖಾತಾ ನೀಡುವುದನ್ನು ನಿಯಂತ್ರಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಬಿ-ಖಾತಾ ನೀಡಿರುವ ಆಸ್ತಿಗಳಿಗೆ ಎ-ಖಾತಾ ಅಥವಾ ಸರಿಯಾದ ಖಾತಾ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಐದು ಪಾಲಿಕೆಗಳ ರಚನೆಗೆ ಸಂಪುಟ ಅಸ್ತು

-ಎಲ್ಲೆಲ್ಲಿ ರಚನೆ, ವಿಸ್ತೀರ್ಣ, ವಾರ್ಡ್‌, ಜನಸಂಖ್ಯೆ ಬಗ್ಗೆ ಮತ್ತೆ ಸಭೆಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಐದು ಪಾಲಿಕೆಗಳ ರಚನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ 2024-ರ ಪರಿಶೀಲಿಸಿ ವರದಿ ನೀಡಲು ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ 3 ರಿಂದ 5 ಪಾಲಿಕೆ ರಚಿಸಬಹುದು. ನಗರ ಬೆಳೆಯುವ ಬಗ್ಗೆ ದೂರ ದೃಷ್ಟಿಯಿಂದ ಹೆಚ್ಚು ಪಾಲಿಕೆ ರಚಿಸಿದಷ್ಟೂ ಉತ್ತಮ ಎಂದು ವರದಿ ನೀಡಿತ್ತು.

ಈ ವರದಿಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಐದು ಪಾಲಿಕೆಗಳನ್ನು ರಚಿಸಲು ಸಂಪುಟ ಸಭೆ ತೀರ್ಮಾನಿಸಿದೆ.

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಐದು ಪಾಲಿಕೆಗಳು ಎಲ್ಲೆಲ್ಲಿ? ರಚನೆಯಾಗುತ್ತವೆ. ವಿಸ್ತೀರ್ಣ ಹಾಗೂ ವಾರ್ಡ್‌, ಜನಸಂಖ್ಯೆ ಮತ್ತಿತರ ವಿಷಯಗಳ ಬಗ್ಗೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮತ್ತೊಮ್ಮೆ ಸಭೆ ನಡೆಸಿ ನಿರ್ಧರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್