Bagalkot: ಇಲಕಲ್ ಸೀರೆಯಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ..!

By Girish GoudarFirst Published May 18, 2022, 10:33 AM IST
Highlights

*  ಯುವ ನೇಕಾರ ಮೇಘರಾಜ್ ನಿಂದ ಇಲಕಲ್ ಸೀರೆಯಲ್ಲಿ ಮೂಡಿದ ರಾಮ ಮಂದಿರ
*  ಇಲಕಲ್ ಸೀರೆಯಲ್ಲಿ ರಾಷ್ಟ್ರ ಧ್ವಜ ಮತ್ತು ನಾಡ ಧ್ವಜದ ಮಧ್ಯೆ ರಾಮ ಮಂದಿರ ನೇಯ್ದ ಮೇಘರಾಜ್ 
*  ಮೇಘರಾಜ್ ಗುದ್ದಟ್ಟಿ, ಇಲಕಲ್ ಸೀರೆ ತಯಾರಕ ನೇಕಾರ 
 

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಮೇ.18): ಸಾಮಾನ್ಯವಾಗಿ ಕರ್ನಾಟಕದಲ್ಲಿ ಇಲಕಲ್ ಸೀರೆ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಇಂತಹ ಅಪರೂಪದ ಇಲಕಲ್ ಸೀರೆಯಲ್ಲಿ ಯುವ ನೇಕಾರನೊಬ್ಬ ಅಯೋಧ್ಯೆಯ ರಾಮ ಮಂದಿರ ನೇಯುವ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಬೇಡಿಕೆಯೊಂದನ್ನು ಸಲ್ಲಿಸಿದ್ದಾನೆ.

ಹೌದು, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಅಂದರೆ ಸಾಕು ನಮಗೆ ಥಟ್ಟನೆ ನೆನಪಾಗೋದು ಇಲಕಲ್ ಸೀರೆ. ಕನ್ನಡ ನಾಡಿನ ಸಂಪ್ರದಾಯದಲ್ಲಿ ಹಾಸು ಹೊಕ್ಕಾಗಿರುವ ಇಲಕಲ್ ಸೀರೆ ಇಂದಿನ ಆಧುನಿಕತೆಯ ನಾಗಾಲೋಟದಲ್ಲೂ ತನ್ನತನವನ್ನ ಕಳೆದುಕೊಂಡಿಲ್ಲ. ಇವುಗಳ ಮಧ್ಯೆ ಇಲಕಲ್ ಪಟ್ಟಣದ ನೇಕಾರ ಯುವಕ ಮೇಘರಾಜ್ ಇಲಕಲ್ ಸೀರೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಚಿತ್ರವನ್ನು ನೇಯ್ದಿದ್ದಾನೆ. ನಿರಂತರ 4 ದಿನಗಳವರೆಗೆ ನೇಯ್ಗೆ ಕಾಯಕದಲ್ಲಿ ನಿರತರಾಗಿದ್ದ ಮೇಘರಾಜ್ ಎಲ್ಲರ ಹುಬ್ಬೇರಿಸುವಂತೆ ಸುಂದರವಾಗಿ ರಾಮ ಮಂದಿರವನ್ನು ನೇಯ್ಗೆ ಮೂಲಕ ಪ್ರದಶಿ೯ಸಿದ್ದಾನೆ‌.

ನಾಟಕ ಮಾಡಿದ್ದಿದ್ರೆ ನಾನು ಸಿಎಂ, ಚರಂತಿಮಠ ಮಂತ್ರಿ ಆಗಿರ್ತಿದ್ವಿ: ಯತ್ನಾ​ಳ

ಇಲಕಲ್ ಸೀರೆಯಲ್ಲಿ ರಾಷ್ಟ್ರ ಧ್ವಜ ಮತ್ತು ನಾಡ ಧ್ವಜಗಳ ಮಧ್ಯೆ ಅರಳಿ ನಿಂತ ಅಯೋಧ್ಯೆಯ ರಾಮ ಮಂದಿರ 

ಯುವ ನೇಕಾರ ಮೇಘರಾಜ್ ಈಗಾಗಲೇ ಸಾಕಷ್ಟು ಕಲಾಕೃತಿಗಳನ್ನು ಇಲಕಲ್ ಸೀರೆಯಲ್ಲಿ ಬಿಡಿಸಿದ್ದು, ಸಧ್ಯ ಅಯೋಧ್ಯೆಯ ಶ್ರೀರಾಮ ಮಂದಿರ ಬಿಡಿಸಲು ಮುಂದಾಗಿದ್ದಾನೆ. ಆರಂಭದಲ್ಲಿ ಕನ್ನಡ ನಾಡಿನ ಕೆಂಪು ಮತ್ತು ಹಳದಿ ಬಣ್ಣವುಳ್ಳ ನಾಡಧ್ವಜವನ್ನು ರೂಪಿಸಿದರೆ ನಂತರ ಕೇಸರಿ, ಬಿಳಿ, ಹಸಿರು ಕಲರ್ ನಲ್ಲಿ  ರಾಷ್ಟ್ರಧ್ವಜ ರೂಪಿಸಿದ್ದಾನೆ. ಇವರೆಡರ ಮಧ್ಯೆ ಅಯೋಧ್ಯೆಯ ರಾಮ ಮಂದಿರವನ್ನು ಹಳದಿ ಮತ್ತು ನೀಲಿ ಕಲರ್ ಬಳಸಿ ನೇಯ್ಗೆಯಲ್ಲಿ ಒಡಮೂಡಿಸಿದ್ದಾನೆ. ತನ್ನ ನಿತ್ಯದ ಕಾಯಕದ ಮಧ್ಯೆ ನಿರಂತರ 4 ದಿನಗಳ ಕಾಲ ಈ ಸಂಭಂದ ನೇಯ್ಗೆ ನೇಯ್ದು ಅಪರೂಪದ ಇಲಕಲ್ ಸೀರೆಯನ್ನು ತಯಾರಿಸಿದ್ದಾನೆ.

ರಾಮ ಮಂದಿರವನ್ನು ರಾಷ್ಟ್ರ ಮಂದಿರವನ್ನಾಗಿ ಘೋಷಿಸುವಂತೆ ಮೋದಿ ಮತ್ತು ಯೋಗಿಗೆ ಮನವಿ

ಹೀಗೆ ಇಲಕಲ್ ಸೀರೆಯಲ್ಲಿ ಅಯೋಧ್ಯೆಯ ರಾಮ ಮಂದಿರವನ್ನು ಬಿಡಿಸಿರುವ ನೇಕಾರ ಮೇಘರಾಜ್ ನ ಹಿಂದೆ ಉದ್ದೇಶವೂ ಸಹ ಇದೆ. ಅದೇನೆಂದರೆ ದೇಶದ ಹಿಂದೂಗಳ ಅರಾಧ್ಯ ದೇವನಾಗಿರುವ ಶ್ರೀ ರಾಮನ ಹೆಸರಿನಲ್ಲಿ ಅಯೋಧ್ಯೆಯಲ್ಲಿ ನಿಮಾ೯ಣವಾಗುತ್ತಿರುವ ರಾಮ ಮಂದಿರವೂ ಮುಕ್ತಾಯ ಹಂತ ತಲುಪಿದ್ದು, ಅದು ಮುಗಿಯುತ್ತಲೇ ರಾಮ ಮಂದಿರವನ್ನು ರಾಷ್ಟ್ರ ಮಂದಿರವನ್ನಾಗಿ ಘೋಷಿಸಿಬೇಕೆಂದು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮನವಿ ಮಾಡಿದ್ದಾನೆ.‌ 

ನೇಕಾರರ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರಕ್ಕೆ ಆಗ್ರಹ 

ತಮ್ಮ ವಿಶೇಷ ಕೌಶಲ್ಯದ ಮೂಲಕ ವಿವಿಧ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಇಲಕಲ್ ಸೀರೆಯಲ್ಲಿ ಬಿಡಿಸುತ್ತಾ ಬಂದಿರುವ ಯುವ ನೇಕಾರ ಮೇಘರಾಜ್ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ರಾಜ್ಯ ಸಕಾ೯ರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೇಕಾರರಿಗೆ ಅಗತ್ಯವಾಗಿರುವ ನೂಲು, ಚಮಕ ಸೇರಿದಂತೆ ಕಚ್ಚಾ ಮಾಲಿನ ಬೆಲೆ ಗಗನಕ್ಕೇರಿದ್ದು, ಇಂತಹ ಕಚ್ಚಾ ಮಾಲು ತಂದು ಇಡೀ ಮನೆ ಮಂದಿಯೆಲ್ಲಾ ಸೇರಿ ಸೀರೆಯನ್ನು ನೇಯ್ದಂತಹ ಸಂದರ್ಭದಲ್ಲಿಯೂ ಸೀರೆಗಳಿಗೆ ಯೋಗ್ಯ ದರ ಸಿಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿರುವ ನೇಕಾರ ಕುಟುಂಬಗಳು ದಯನೀಯ ಸ್ಥಿತಿಯಲ್ಲಿದ್ದು, ಆದಷ್ಟು ಬೇಗ ರಾಜ್ಯ ಸರ್ಕಾರ ನೇಕಾರರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಿ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದೆ ಎಂದು ಮೇಘರಾಜ್ ಮನವಿ ಮಾಡಿದ್ದಾನೆ.
 

click me!