ಸಾಲ ಮರುಪಾವತಿಸಿ - ಬಡ್ಡಿ ಹೊರೆಯಿಂದ ಪಾರಾಗಿ

By Kannadaprabha NewsFirst Published Nov 27, 2022, 4:56 PM IST
Highlights

ಬ್ಯಾಂಕ್‌ ಸಿಬ್ಬಂದಿಗೆ ಅಗ್ನಿಪರೀಕ್ಷೆಯ ಕಾಲ. ರಾಜಕೀಯ ಪಕ್ಷಗಳ ಘೋಷಣೆಗಳಿಂದಾಗಿ ಸಾಲ ವಸೂಲಾತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಬ್ಯಾಂಕ್‌ ಉಳಿಸುವ ಕೆಲಸ ಮಾಡಿ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್‌ ನೌಕರರು, ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೋಲಾರ : ಚುನಾವಣಾ ವರ್ಷವಾಗಿದ್ದು, ಬ್ಯಾಂಕ್‌ ಸಿಬ್ಬಂದಿಗೆ ಅಗ್ನಿಪರೀಕ್ಷೆಯ ಕಾಲ. ರಾಜಕೀಯ ಪಕ್ಷಗಳ ಘೋಷಣೆಗಳಿಂದಾಗಿ ಸಾಲ ವಸೂಲಾತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಬ್ಯಾಂಕ್‌ ಉಳಿಸುವ ಕೆಲಸ ಮಾಡಿ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್‌ ನೌಕರರು, ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಎಲ್ಲಾ ಶಾಖೆಗಳ ಅಧಿಕಾರಿ, ಸಿಬ್ಬಂದಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಚುನಾವಣಾ ವರ್ಷವಾಗಿದ್ದು, ಸಾಲ ಮನ್ನಾ, ಬಡ್ಡಿಮನ್ನಾದಂತಹ ಘೋಷಣೆಗಳು ಈಗಾಗಲೇ ಮೊಳಗುತ್ತಿವೆ, ಇದು ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಲಿದೆ, ಬ್ಯಾಂಕ್‌ ಸಿಬ್ಬಂದಿ ಸಾಲ ಪಡೆದವರ ಮನೆಗಳಿಗೆ ತೆರಳಿ ಮನವೊಲಿಸಿ ಸಾಲ ವಸೂಲಿ ಮಾಡಿ ಎಂದು ಸೂಚಿಸಿದರು.

ಸಾಲಗಾರರಿಗೆ ಮಾಹಿತಿ ನೀಡಿ

ಮುಂದೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದು ಸರ್ಕಾರ ಜಾರಿಗೆ ತರುವ ಸಾಲ ಮನ್ನಾ, ಬಡ್ಡಿಮನ್ನಾದಂತಹ ಯೋಜನೆಗಳ ಜಾರಿಗೆ ಬ್ಯಾಂಕ್‌ ಸದಾ ಸಿದ್ದವಿದೆ. ಆದರೆ ಚುನಾವಣಾ ಪೂರ್ವ ಭರವಸೆಗಳನ್ನು ನಂಬಿ ಸಾಲ ಪಡೆದ ಸ್ತ್ರೀಶಕ್ತಿಸಂಘಗಳು, ರೈತರು ಸಾಲ ಮರುಪಾವತಿಸದಿದ್ದರೆ ಬಡ್ಡಿಯ ಸುಳಿಗೆ ಸಿಲುಕುತ್ತಾರೆ ಎಂಬ ಅಂಶ ಗಮನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.

ಸರ್ಕಾರದ ಸೌಲಭ್ಯಗಳನ್ನು ಜಾರಿಯಾದರೆ ಒದಗಿಸಲು, ಅದರ ಪ್ರಯೋಜನ ರೈತರು, ಮಹಿಳೆಯರಿಗೆ ತಲುಪಿಸಲು ಬ್ಯಾಂಕ್‌ ಬದ್ದತೆ ಹೊಂದಿದೆ. ಗ್ರಾಹಕರು ಈಗ ಭರವಸೆಗಳನ್ನು ನಂಬಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇದೆ, ಇದರಿಂದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮವೂ ಬೀರುತ್ತದೆ ಎಂದು ಎಚ್ಚರಿಸಿದರು.

ಎನ್‌ಪಿಎ ಕಡಿಮೆ ಆಗಬೇಕು

ಬ್ಯಾಂಕಿನ ಎನ್‌ಪಿಎ ಕಡಿಮೆಯಾಗಬೇಕು. ರೈತರಿಗೆ ನೀಡಿರುವ ಬೆಳೆಸಾಲ, ಮಹಿಳಾ ಸಂಘಗಳಿಗೆ ನೀಡಿರುವ ಬಡ್ಡಿರಹಿತ ಸಾಲ, ಮಧ್ಯಮಾವಧಿ, ಚಿನ್ನದ ಮೇಲಿನ ಸಾಲ ಯಾವುದೇ ಇರಲಿ ಕಂತು ಬಾಕಿ ಇದ್ದರೆ ಕ್ಷಮಿಸುವುದಿಲ್ಲ. ಬ್ಯಾಂಕಿನಲ್ಲಿ ಕುಳಿತು ಏನು ಮಾಡುತ್ತೀರಿ, ಡಿಸೆಂಬರ್‌ 31ಕೊಳಗೆ ವಸೂಲಾತಿಗೆ ಕ್ರಮವಹಿಸಿ ಎಂದರು.

ಡಿಸಿಸಿ ಬ್ಯಾಂಕ್‌ ಎಲ್ಲಾ ರೀತಿಯ ಆರ್ಥಿಕ ವ್ಯವಹಾರಗಳು, ಸಾಲ ವಿತರಣೆ, ವಸೂಲಾತಿ, ಕಂಪ್ಯೂಟರೀಕರಣ ಎಲ್ಲಾ ವಿಷಯಗಳಲ್ಲೂ ದೇಶಕ್ಕೆ ನಂ.1 ಆಗಿದೆ ಆದರೆ ಠೇವಣಿ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದ ಅವರು,ಬ್ಯಾಂಕ್‌ ಸಿಬ್ಬಂದಿ ಶ್ರದ್ಧೆ ವಹಿಸಿ, ಈ ಸಾಲಿನಲ್ಲಿ 500 ಕೋಟಿ ಠೇವಣಿ ಸಂಗ್ರಹದ ಗುರಿ ಸಾಧನೆಗೆ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.

ಠೇವಣಿ ಪ್ರಮಾಣ ಹೆಚ್ಚಾಗಬೇಕು

ಸಾಲಕ್ಕೆ ಮಾತ್ರ ಬ್ಯಾಂಕಿಗೆ ಬರುವವರಿಗೆ ಸೌಲಭ್ಯ ನೀಡದಿರಿ, ಡಿಸಿಸಿ ಬ್ಯಾಂಕಿನಲ್ಲೇ ವಹಿವಾಟು ನಡೆಸಲು ಸೂಚಿಸಿ ಎಂದ ಅವರು, ಬ್ಯಾಂಕ್‌ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಿ, ಠೇವಣಿ ಹೆಚ್ಚಿಸಿ ಎಂದು ತಿಸಿ, ಜಿಲ್ಲೆಯ ಪ್ಯಾಕ್ಸ್‌ಗಳ ಕಾರ್ಯದರ್ಶಿಗಳು ತಲಾ 50 ಲಕ್ಷ ಠೇವಣಿ ಸಂಗ್ರಹಿಸಿಕೊಡಲು ಮನವೊಲಿಸಿ ಎಂದು ಸೂಚಿಸಿದರು.

ಸಾಲ ವಸೂಲಾತಿಯಲ್ಲಿ ನಿರೀಕ್ಷಿತ ರೀತಿ ಕೆಲಸ ಮಾಡದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬ್ಯಾಂಕ್‌ ನಿಮಗೆ ಅನ್ನ ನೀಡುತ್ತಿದೆ, ನಿಮ್ಮ ಕುಟಂಬದ ಆರೋಗ್ಯ ರಕ್ಷಣೆಗೆ ವಿಮಾ ಯೋಜನೆ ನೀಡಿದ್ದೇವೆ, ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದರು. ಬ್ಯಾಂಕಿನ ಎಜಿಎಂ ಶಿವ ಕುಮಾರ್‌, ಹುಸೇನ್‌ ದೊಡ್ಡ ಮುನಿ, ಬೈರೇಗೌಡ,ಬಾಲಾಜಿ, ಅರುಣ್‌ಕುಮಾರ್‌, ಹ್ಯಾರೀಸ್‌,ಪದ್ಮಮ್ಮ, ತಿಮ್ಮಯ್ಯ, ವಿ-ಸಾಫ್ಟ್‌ ಸಿಬ್ಬಂದಿ ವಿಶ್ವಪ್ರಸಾದ್‌, ಸಿರೀಶ್‌, ಫರ್ನಾಂಡೀಸ್‌ ಇದ್ದರು.

click me!