ಆಟೋಮೊಬೈಲ್ ಕ್ಷೇತ್ರದ ಹಿಂಜರಿಕೆ ಶಿವಮೊಗ್ಗದ ಕೈಗಾರಿಕಾ ಕ್ಷೇತ್ರದಲ್ಲಿ ಪರಿಣಾಮ ಬೀರಲಾರಂಭಿಸಿದ್ದು, ನೂರಾರು ಉದ್ಯೋಗ ಕಡಿತ ಆರಂಭವಾಗಿರುವುದರಿಂದ ಕಾರ್ಮಿಕ ವಲಯದಲ್ಲಿ ಆತಂಕ ಎದುರಾಗಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ [ಆ.27]: ದೇಶದಲ್ಲಿ ಉಂಟಾಗಿರುವ ಆಟೋಮೊಬೈಲ್ ಕ್ಷೇತ್ರದ ಹಿಂಜರಿಕೆ ಶಿವಮೊಗ್ಗದ ಕೈಗಾರಿಕಾ ಕ್ಷೇತ್ರದಲ್ಲಿ ಪರಿಣಾಮ ಬೀರಲಾರಂಭಿಸಿದ್ದು, ನೂರಾರು ಉದ್ಯೋಗ ಕಡಿತ ಆರಂಭವಾಗಿರುವುದರಿಂದ ಕಾರ್ಮಿಕ ವಲಯದಲ್ಲಿ ಆತಂಕ ಎದುರಾಗಿದೆ.
ಆರ್ಥಿಕ ಹಿಂಜರಿಕೆಯ ಹೆಜ್ಜೆಯ ಗುರುತು ಶಿವಮೊಗ್ಗದ ಕೈಗಾರಿಕಾ ವಲಯದಲ್ಲಿ ಕಾಣಲಾರಂಭಿಸಿದ್ದು, ಕಾರ್ಮಿಕರಿಗೆ ಇದರ ಬಿಸಿ ಈಗಾಗಲೇ ತಟ್ಟಿದೆ. ಹಲವು ಉದ್ದಿಮೆಗಳು ಲೇ ಆಫ್ ಘೋಷಿಸಿದ್ದು, ಬರುವ ದಿನಗಳಲ್ಲಿ ಎದುರಾಗಬಹುದಾದ ಇನ್ನಷ್ಟು ಕಠಿಣ ಸ್ಥಿತಿಯನ್ನು ಎದುರಿಸುವ ಕುರಿತು ತೀವ್ರ ಚಿಂತನೆ, ಚರ್ಚೆ ಇಲ್ಲಿನ ಉದ್ಯಮ ವಲಯದಲ್ಲಿ ನಡೆಯುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶಿವಮೊಗ್ಗ ನಗರದಲ್ಲಿ ಮೂರು ಕೈಗಾರಿಕಾ ವಸಾಹತು ಪ್ರದೇಶಗಳಿದ್ದು, ಇದರಲ್ಲಿ ಎರಡು ವಲಯಗಳಲ್ಲಿ ಸಾಕಷ್ಟುಆಟೋಮೊಬೈಲ್ ಉದ್ಯಮಗಳಿವೆ. ದೇಶದಲ್ಲಿಯೇ ಆಟೋ ಮೊಬೈಲ್ ಉದ್ಯಮ ಕ್ಷೇತ್ರದಲ್ಲಿ ಶಿವಮೊಗ್ಗಕ್ಕೆ ದೊಡ್ಡ ಹೆಸರು ಇದ್ದು, ಗುಣಮಟ್ಟದಲ್ಲಿ ಹೆಸರು ಮಾಡಿವೆ. ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ದೇಶಗಳಿಗೆ ಬಿಡಿ ಭಾಗಗಳನ್ನು ಪೂರೈಸಲಾಗುತ್ತಿದೆ. ಸಾವಿರಾರು ಜನ ಕಾರ್ಮಿಕರು ಈ ಉದ್ಯಮ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಇವರೆಲ್ಲರೂ ಇದೀಗ ಉದ್ಯೋಗ ವಂಚಿತರಾಗುವ ಆತಂಕದಲ್ಲಿ ಇದ್ದಾರೆ.
ಮಾಚೇನಹಳ್ಳಿ ಕೈಗಾರಿಕಾ ವಸಾಹತು ಪ್ರದೇಶ ಮತ್ತು ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಒಟ್ಟಾರೆ ಸುಮಾರು 35 ಆಟೋ ಮೊಬೈಲ್ ಬಿಡಿ ಭಾಗ ತಯಾರಿಕಾ ಘಟಕಗಳು ಮತ್ತು ಫೌಂಡ್ರಿಗಳಿವೆ. ಇವುಗಳನ್ನು ಆಧರಿಸಿ ಸುಮಾರು 250 ಕ್ಕೂ ಹೆಚ್ಚು ಆ್ಯನ್ಸಿಲರಿ ಯೂನಿಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ಸುಮಾರು 5 ಸಾವಿರಕ್ಕೂ ಅಧಿಕ ಉದ್ಯೋಗಿಗಳು, ಕಾರ್ಮಿಕರು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಳೆದ ಒಂದು ತಿಂಗಳಿಂದ ಯುರೋಪ್, ಅಮೆರಿಕ ಮತ್ತು ಮಧ್ಯ ಪ್ರಾಚ್ಯ ದೇಶಗಳಿಂದ ಬೃಹತ್ ಆಟೋಮೊಬೈಲ್ ಕೈಗಾರಿಕೆಗಳು ಬೇಡಿಕೆಗಳನ್ನು ಕಡಿಮೆ ಮಾಡಿವೆ. ಹೀಗಾಗಿ ಇಲ್ಲಿನ ಕೈಗಾರಿಕೆಗಳು ಸಹಜವಾಗಿಯೇ ತಮ್ಮ ಉತ್ಪನ್ನಗಳನ್ನು ಕಡಿಮೆ ಮಾಡುವ ಅನಿವಾರ್ಯತೆಗೆ ಸಿಲುಕಿವೆ.
ಈಗಾಗಲೇ ಹಲವು ಕೈಗಾರಿಕೆಗಳು ತನ್ನ ಉದ್ದಿಮೆಯಿಂದ ಹಲವು ಕಾರ್ಮಿಕರನ್ನು ತೆಗೆದು ಹಾಕಿವೆ. ಇನ್ನು ಕೆಲವು ಪ್ರಮುಖ ಕಾರ್ಖಾನೆಗಳು ವಾರಕ್ಕೆ ಮೂರು ದಿನ ಮಾತ್ರ ಕೆಲಸ ನೀಡಿ, ಉಳಿದಂತೆ ಲೇ ಆಫ್ ಘೋಷಿಸಿವೆ. ಪ್ರಮುಖ ಕಾರ್ಖಾನೆಯೊಂದು ಆ. 1 ರಿಂದ 8 ರವರೆಗೆ ಸಂಪೂರ್ಣ ಮುಚ್ಚಿತ್ತು. ಇನ್ನೊಂದು ಕಾರ್ಖಾನೆ 20 ದಿನಗಳ ಲೇ ಆಫ್ ಘೋಷಣೆ ಮಾಡಿತ್ತು.
ಕಳೆದ ಎರಡು ತಿಂಗಳಿಂದ ಇದರ ಪರಿಣಾಮ ಇಲ್ಲಿ ನಿಧಾನವಾಗಿ ಆರಂಭಗೊಂಡಿದ್ದು, ಜುಲೈ ತಿಂಗಳಲ್ಲಿ ಸ್ವಲ್ಪ ಗಂಭೀರ ಎನಿಸಿತ್ತು. ಆಗಸ್ಟ್ ತಿಂಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚೇ ಪರಿಣಾಮ ಕಾಣಿಸಿದೆ. ಇಲ್ಲಿನ ಕಾರ್ಖಾನೆ ಮಾಲೀಕರ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಇನ್ನಷ್ಟುಗಂಭೀರ ಪರಿಣಾಮ ಉಂಟಾಗಲಿದೆ.
ಕೈಗಾರಿಕೋದ್ಯಮಿಗಳ ಪ್ರಕಾರ ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿದ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಪ್ರೋತ್ಸಾಹ ನೀಡುವ ಅಂಶವೇ ಕಾರಣ. ಈ ಘೋಷಣೆಯಿಂದಾಗಿ ಜನ ತಪ್ಪು ಭಾವಿಸಿ ಹೊಸ ವಾಹನ ಖರೀದಿಯಿಂದ ಹಿಂದೆ ಸರಿದರು. ಇದರಿಂದ ಆಟೋ ಮೊಬೈಲ್ ಕ್ಷೇತ್ರ ಕುಸಿಯಿತು ಎನ್ನುತ್ತಾರೆ. ಇದಲ್ಲದೆ, ವಿಶ್ವದಲ್ಲಿ ಮತ್ತು ದೇಶದಲ್ಲಿ ಎದುರಾಗಿರುವ ಆರ್ಥಿಕ ಕುಸಿತ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ.
ಲಕ್ಷದಿಂದ ಕೋಟಿವರೆಗೆ ಸಾಲ ಮಾಡಿ ಕೈಗಾರಿಕೆಗಳನ್ನು ಆರಂಭಿಸಿರುವ ಉದ್ದಿಮೆಗಳ ಮಾಲೀಕರು ಅಕ್ಷರಶಃ ಕಂಗಾಲಾಗಿದ್ದರೆ, ಇನ್ನೊಂದೆಡೆ ಈ ಉದ್ದಿಮೆಗಳನ್ನೇ ನಂಬಿಕೊಂಡು ಸಂಸಾರದ ನೊಗ ಹೊತ್ತಿರುವ ಕಾರ್ಮಿಕರು ಇನ್ನಷ್ಟುಹೆದರಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಲೇ ಆಫ್ ಘೋಷಣೆ ಇವರನ್ನು ಕಂಗಾಲು ಮಾಡಿದೆ.
ಪರಿಸ್ಥಿತಿ ಗಂಭೀರವಾಗಿದೆ. ಜುಲೈನಲ್ಲಿಯೇ ಸುಳಿವು ಸಿಕ್ಕಿತ್ತು. ಆಗಸ್ಟ್‌ನಲ್ಲಿ ಇದರ ನಿಜವಾದ ಪರಿಣಾಮ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟುಗಂಭೀರ ಸಮಸ್ಯೆಯಾಗಿ ಕಾಡಲಿದೆ. ಏಷ್ಯಾದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಉತ್ಪಾದನೆಗೆ ಹೆಸರು ಮಾಡಿರುವ ಶಿವಮೊಗ್ಗ ಆಟೋ ಮೊಬೈಲ್ ಉದ್ದಿಮೆ ಕುಸಿದರೆ ಇದರ ಪರಿಣಾಮ ಗಂಭೀರವಾಗಿರುತ್ತದೆ. ಮಾಲೀಕರು ಮತ್ತು ಕಾರ್ಮಿಕರು ಇಬ್ಬರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗಾಗಲೇ ಕನಿಷ್ಠ ವೇತನದಿಂದ ಹಲವಾರು ಉದ್ದಿಮೆಗಳು ಬಾಗಿಲು ಮುಚ್ಚುವ ಹಂತ ತಲುಪಿರುವ ವೇಳೆಯಲ್ಲಿಯೇ ಈಗ ಉದ್ಭವಿಸಿರುವ ಸ್ಥಿತಿ ಇನ್ನಷ್ಟುಕಠಿಣ ಪರಿಸ್ಥಿತಿಯನ್ನು ಹುಟ್ಟು ಹಾಕಲಿದೆ.
-ರಮೇಶ್ ಹೆಗ್ಡೆ, ಅಧ್ಯಕ್ಷರು, ಮಾಚೇನಹಳ್ಳಿ ಕೈಗಾರಿಕೋದ್ಯಮಿಗಳ ಸಂಘ