ಮುಜರಾಯಿ ಇಲಾಖೆ ದೇವಸ್ಥಾನಗಳ ಆಸ್ತಿ ಸರ್ವೇ ಮಾಡಲು ಈಗಾಗಲೇ ಕಂದಾಯ ಇಲಾಖೆ ಜೊತೆ ಕ್ರಮ ವಹಿಸಲಾಗಿದೆ. ಇಲಾಖೆಗೆ ಆಸ್ತಿಗಳು ಪರಭಾರೆ ಅಥವಾ ಅತಿಕ್ರಮಣವಾಗಿದ್ದರೆ ಹಿಂಪಡೆಯಲು ಸ್ವಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದ ರಾಜ್ಯ ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಕುಂದಾಪುರ(ಜ.23): ಹೆಚ್ಚೆಚ್ಚು ಭಕ್ತರು ಆಗಮಿಸುವ ಮೈಸೂರಿನ ಚಾಮುಂಡೇಶ್ವರಿ, ಕೊಪ್ಪಳದ ಹುಲಿಗೆಮ್ಮ ಹಾಗೂ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಸ್ಥಾನಗಳ ಉಸ್ತುವಾರಿಗೆ ಪ್ರಾಧಿಕಾರ ರಚನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇಲ್ಲಿನ ಮಾರಣಕಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಜರಾಯಿ ಇಲಾಖೆ ದೇವಸ್ಥಾನಗಳ ಆಸ್ತಿ ಸರ್ವೇ ಮಾಡಲು ಈಗಾಗಲೇ ಕಂದಾಯ ಇಲಾಖೆ ಜೊತೆ ಕ್ರಮ ವಹಿಸಲಾಗಿದೆ. ಇಲಾಖೆಗೆ ಆಸ್ತಿಗಳು ಪರಭಾರೆ ಅಥವಾ ಅತಿಕ್ರಮಣವಾಗಿದ್ದರೆ ಹಿಂಪಡೆಯಲು ಸ್ವಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ರಾಮನ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ಕಾಂಗ್ರೆಸ್ ಮಾನಸಿಕತೆ ತೋರಿಸುತ್ತದೆ: ಸಂಸದ ನಳಿನ್ ಕುಮಾರ್
ಮುಜರಾಯಿ ದೇವಸ್ಥಾನದ ಎ,ಬಿ ದರ್ಜೆಯ ನೌಕರರನ್ನು ಹೊರತುಪಡಿಸಿ ಉಳಿದವರನ್ನು ಇಲಾಖೆಯ ಇತರೆ ದೇವಾಲಯಗಳಿಗೆ ಅಂತರ್ ವರ್ಗಾವಣೆ ಮಾಡುವ ಪ್ರಾಸ್ತಾಪ ಇಲ್ಲ. ಆದರೆ ನೌಕರರ ಮೇಲೆ ನಿರ್ದಿಷ್ಟ ದೂರುಗಳು ಬಂದಲ್ಲಿ ತನಿಖೆ ನಡೆಸಿ ವರ್ಗಾವಣೆ ಸೇರಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. ಕೊಲ್ಲೂರು ಸೇರಿ ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ನೇಮಕಾತಿ ಕುರಿತು ಸದ್ಯವೇ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಹೇಳಿದರು.
ಕೊಲ್ಲೂರು ಅವ್ಯವಸ್ಥೆ ತನಿಖೆ:
ಕೊಲ್ಲೂರು ಪರಿಸರದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಇಲ್ಲಿನ ಧಾರ್ಮಿಕತೆಗೆ ಧಕ್ಕೆಯಾಗುತ್ತಿರುವ ದೂರಿದ್ದು, ಶೀಘ್ರ ವರದಿ ತರಿಸಿ ಸಮಗ್ರ ತನಿಖೆ ನಡೆಸುವುದಾಗಿ ಸಚಿವರು ಹೇಳಿದರು. ಮುಜರಾಯಿ ಇಲಾಖೆ ಹಣವನ್ನು ಇಲಾಖೆ ಉದ್ದೇಶಗಳಿಗಲ್ಲದೆ ಬೇರೆ ಉದ್ದೇಶಗಳಿಗೆ ಬಳಸುವುದು ಸಾಧ್ಯವಿಲ್ಲ. ಮುಜರಾಯಿ ದೇವಸ್ಥಾನಗಳಿಂದ ಆಗಿರುವ ಕಾಮಗಾರಿಗಳ ನಿರ್ವಹಣೆ ಕೂಡ ದೇವಸ್ಥಾನದ್ದೇ ಆಗಿರುತ್ತದೆ. ಕೊಲ್ಲೂರಿನಲ್ಲಿ ಒಳಚರಂಡಿ ಯೋಜನೆಗೆ ಬಳಕೆಯಾಗಿರುವ ಇಲಾಖೆ ಅನುದಾನದ ಮಾಹಿತಿ ಪಡೆದುಕೊಳ್ಳುತ್ತೇನೆ. ಯೋಜನೆ ನಿರ್ವಹಣೆ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುತ್ತೇನೆ. ತಪ್ಪಾಗಿದ್ದಲ್ಲಿ ಖಂಡಿತಾ ಕ್ರಮ ಕೈಗೊಳ್ಳುತ್ತೇನೆ ಎಂದರು.