ಶ್ರೀರಾಮ ಕೇವಲ ಒಂದು ಸಮುದಾಯ, ಸಂಘಟನೆ ಅಥವಾ ರಾಜಕೀಯ ಪಕ್ಷಕ್ಕೆ ಸೀಮಿತ ಅಲ್ಲ. ರಾಮನ ಆದರ್ಶಮಯ ಜೀವನ ಮತ್ತು ಆಡಳಿತ ವ್ಯವಸ್ಥೆ ಎಲ್ಲವೂ ಎಲ್ಲರಿಗೂ ಮಾದರಿ: ಅಥಣಿ ಶಾಸಕ ಲಕ್ಷ್ಮಣ ಸವದಿ
ಅಥಣಿ(ಜ.23): ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು.ಆದರೆ, ಇಂದು ಧಾರ್ಮಿಕ ಕಾರ್ಯದಲ್ಲಿ ರಾಜಕಾರಣ ಸೇರುತ್ತಿರುವುದು ವಿಷಾದದ ಸಂಗತಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಸೋಮವಾರ ಪಟ್ಟಣದ ಪುರಸಭೆಯ ವಾರ್ಡ್ ನಂ.21ರಲ್ಲಿ ಶ್ರೀರಾಮ ಬಡಾವಣೆ ನಾಮಕರಣ ಸಮಾರಂಭದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶ್ರೀರಾಮ ಕೇವಲ ಒಂದು ಸಮುದಾಯ, ಸಂಘಟನೆ ಅಥವಾ ರಾಜಕೀಯ ಪಕ್ಷಕ್ಕೆ ಸೀಮಿತ ಅಲ್ಲ. ರಾಮನ ಆದರ್ಶಮಯ ಜೀವನ ಮತ್ತು ಆಡಳಿತ ವ್ಯವಸ್ಥೆ ಎಲ್ಲವೂ ಎಲ್ಲರಿಗೂ ಮಾದರಿ. ಶ್ರೀರಾಮ ಆದರ್ಶ ಪುರುಷ, ಅವರ ತತ್ವಗಳನ್ನು ಹಿಂದು ಸನಾತನ ಅನುಯಾಯಿಗಳಷ್ಟೇ ಅಲ್ಲದೆ, ಇತರ ಧರ್ಮದವರು ಸಹ ರಾಮ ಮೆಚ್ಚಿಕೊಂಡಿರುವ ವ್ಯಕ್ತಿತ್ವ ಹೊಂದಿದ್ದ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಕಾರ್ಯ ನಡೆಯುತ್ತಿದ್ದು, ದೇಶದ ಹಿಂದು ರಾಮನ ಭಕ್ತರ ಬಹುದಿನಗಳ ಕನಸು ನನಸಾಗುತ್ತಿರುವುದು ಸಂತಸದ ಸಂಗತಿ ಎಂದರು.
Pejawar Shri: ಭವ್ಯ ರಾಮ ಮಂದಿರ ನಿರ್ಮಾಣದಿಂದ ಭಾರತದ ದಿಕ್ಕು ಬದಲಾಗಲಿದೆ: ಪೇಜಾವರ ಶ್ರೀ
ಶ್ರೀರಾಮನನ್ನು ಒಂದು ಪಕ್ಷ ತನ್ನ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳಬಾರದು. ರಾಮನ ಭಕ್ತರು ಎಲ್ಲ ಪಕ್ಷ ಮತ್ತು ಎಲ್ಲ ಧರ್ಮದಲ್ಲಿಯೂ ಇದ್ದಾರೆ. ಆದರೆ, ಕೆಲವು ಪಕ್ಷದ ಮುಖ್ಯಸ್ಥರು ಶ್ರೀರಾಮನನ್ನು ತಮ್ಮ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಇಂತಹ ಧಾರ್ಮಿಕ ಕಾರ್ಯಗಳಲ್ಲಿ ರಾಜಕಾರಣ ಬೆರೆಸದೆ ಎಲ್ಲರ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕಾರ್ಯಕ್ರಮಗಳು ಆಗಬೇಕು. ಒಂದು ಧರ್ಮ ಅಥವಾ ಒಂದು ಪಕ್ಷದ ಕಾರ್ಯಕ್ರಮವಾಗುತ್ತಿರುವದು ಬೆಸರದ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ಪುರಸಭೆ ಸದಸ್ಯ ವಿಲೀನ ಯಳಮೇಲ್ಲೆ, ರಾಜಶೇಖರ ಗುಡೋಡಗಿ, ಮಲ್ಲೇಶ ಹುದ್ದಾರ, ಶ್ರೀರಾಮ ನಗರ ಬಡಾವಣೆಯ ನ್ಯಾಯವಾದಿ ಕೆ.ಎ.ವಣಜೋಳ, ಸಾರ್ಥಕ ಕುಂದರಗಿ, ಧರೇಪ್ಪ ಠಕ್ಕಣ್ಣವರ, ಸುಶಿಲಕುಮಾರ ಪತ್ತಾರ, ಆನಂದ ದೇಶಪಾಂಡೆ, ರಘೋತ್ತಮ ಕಟ್ಟಿ, ಜನಕರಾಜ ದುರ್ಗಣ್ಣವರ, ರಾಜು ಕುಲಕರ್ಣಿ ಸೌರಭ ಮಾಶಾಳ, ವಿಕಾಸ ಕುಲಕರ್ಣಿ, ವಿ.ಕೆ.ಕುಲಕರ್ಣಿ, ವಾದಿರಾಜ ಕುಲಕರ್ಣಿ, ಡಾ.ಅಮಿತ ಕೋಳಿ, ಪದ್ಮಶ್ರೀ ಕರವ, ವಸುಧಾ ವಂಟಿಮಾರ, ವೈಷ್ಣವಿ ಕುಲಕರ್ಣಿ ಸೇರಿದಂತೆ ಶ್ರೀರಾಮ ಬಡಾವಣೆಯ ನೂರಾರು ಜನ ಇದ್ದರು.
ಸಮಯ ಬಂದಾಗ ಉತ್ತರಿಸುವೆ
ಅಲ್ಪ ಮತಿಗಳು ಅವರಿಗೆ ಹೊಳೆದಷ್ಟು ಮಾತಾಡುತ್ತಾರೆ. ನಾನು ಬಿಜೆಪಿಯಲ್ಲಿದ್ದಾಗ ರಾಮ ಮಂದಿರ ನಿರ್ಮಾಣಕ್ಕೆ ₹10 ಲಕ್ಷ ದೇಣಿಗೆ ನೀಡಿದ್ದು ಸತ್ಯ. ಆದರೆ, ಕೋಟಿ ಕೋಟಿ ಹಣ ಕೊಟ್ಟವರಿಗೆ ಆಮಂತ್ರಣ ಬಂದಿಲ್ಲ, ಇವರಿಗೆ ಹೇಗೆ ಆಮಂತ್ರಣ ಪತ್ರಿಕೆ ಬರುತ್ತದೆ ಎಂದು ಅಥಣಿ ಆರ್‌ಎಸ್‌ಎಸ್ ಮುಖಂಡರು ಪ್ರಶ್ನಿಸಿದ್ದರು. ಆಮಂತ್ರಣ ಪತ್ರಿಕೆ ಬರದಿರುವುದಕ್ಕೆ ಬೇಸರವಿಲ್ಲ, ಯಾಕೆ ಕರೆದಿಲ್ಲ ಅಂತಾನೂ ಕೇಳಿಲ್ಲ, ನನ್ನ ತಂದೆ ತಾಯಿ ಲಕ್ಷ್ಮಣ ಅಂತ ನಾಮಕರಣ ಮಾಡಿದ್ದು, ರಾಮನ ಸಹೋದರ ಅಂತಾ ಹೇಳಿ ಹೊರತು ಬೇರೆಯದ್ದಕ್ಕಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.