'ಕೊರೋನಾಗೆ ಔಷಧಿ ಕಂಡು ಹಿಡಿಯಲು ಕನಿಷ್ಠ 10 ವರ್ಷಗಳಾದ್ರೂ ಬೇಕು'..! ಕನ್ನಡಿಗ ಕೆನಡಾ ವಿಜ್ಞಾನಿ ಹೇಳಿದ್ದಿಷ್ಟು

By Kannadaprabha News  |  First Published May 23, 2020, 11:44 AM IST

ಜಗತ್ತಿನಾದ್ಯಂತ ಅತ್ಯಂತ ತುರ್ತಾಗಿ ಬೇಕಾಗಿರುವ ಕೊರೋನಾ ವೈರಸ್‌ ತಡೆಯುವ ಔಷಧಿಯೊಂದನ್ನು ಕಂಡು ಹಿಡಿಯುವಲ್ಲಿ ಕೆನಡ ದೇಶದಲ್ಲಿರುವ ಕನ್ನಡಿಗರೊಬ್ಬರ ಸಂಶೋಧನೆ ಭರವಸೆ ಮೂಡಿಸಿದೆ.


ಉಡುಪಿ(ಮೇ 23): ಜಗತ್ತಿನಾದ್ಯಂತ ಅತ್ಯಂತ ತುರ್ತಾಗಿ ಬೇಕಾಗಿರುವ ಕೊರೋನಾ ವೈರಸ್‌ ತಡೆಯುವ ಔಷಧಿಯೊಂದನ್ನು ಕಂಡು ಹಿಡಿಯುವಲ್ಲಿ ಕೆನಡ ದೇಶದಲ್ಲಿರುವ ಕನ್ನಡಿಗರೊಬ್ಬರ ಸಂಶೋಧನೆ ಭರವಸೆ ಮೂಡಿಸಿದೆ.

ಮೂಲತಃ ಉಡುಪಿ ಸಮೀಪದ ಪೆರಂಪಳ್ಳಿ ಗ್ರಾಮದ ನೆಕ್ಕಾರ್‌ ಮನೆತನದ ಡಾ.ಪ್ರವೀಣ್‌ ರಾವ್‌ ನೆಕ್ಕಾರ್‌ ಪ್ರಸ್ತುತ ಕೆನಡ ವಾಟರ್‌ ಲೂ ವಿ.ವಿ.ಯ ಕೆಮಿಕಲ್‌ ಫಾರ್ಮಸಿ ಪ್ರಯೋಗಾಲಯದ ಮುಖ್ಯಸ್ಥರಾಗಿದ್ದಾರೆ. ಈ ಪ್ರಯೋಗಾಲಯಲ್ಲಿ ಅವರು 6 ಮಂದಿ ವಿಜ್ಞಾನಿಗಳೊಂದಿಗೆ ಔಷಧಿಗಳು ದೇಹದೊಳಗೆ ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಯೋಗಗಳಲ್ಲಿ ನಿರತರಾಗಿದ್ದಾರೆ.

Tap to resize

Latest Videos

ಕೊರೋನಾ ಭೀತಿ: ಕೊಲ್ಲೂರು ದೇವಾಲಯಕ್ಕೇ ಸ್ಯಾನಿಟೈಸೇಶನ್‌!

ಜರ್ಮನಿಯ ವಿಜ್ಞಾನಿಗಳು ಕೋವಿಡ್‌ - 19 ವೈರಸ್‌ನ ಹೆಚ್ಚಳಕ್ಕೆ ಸಹಾಯ ಮಾಡುವ ಪ್ರೊಟಿನ್‌ನ ಸಂರಚನೆಯನ್ನು ಕಂಡುಹಿಡಿದಿದ್ದಾರೆ. ಈ ಪ್ರೊಟಿನ್‌ ಮನುಷ್ಯನ ದೇಹದೊಳಗೆ ಸೇರುವ ಕೋವಿಡ್‌ - 19 ವೈರಸ್‌ ಬಹವೇಗವಾಗಿ ದ್ವಿಗುಣಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ಈ ಪ್ರೊಟೀನನ್ನು ನಿಯಂತ್ರಿಸಿದರೆ, ಕೋವಿಡ್‌ ವೈರಸ್‌ ತಾನಾಗಿಯೇ ನಿಯಂತ್ರಣವಾಗುತ್ತದೆ ಎಂಬುದನ್ನು ಡಾ.ಪ್ರವೀಣ್‌ ನೆಕ್ಕಾರ್‌ ತಂಡ ಆಲೋಚಿಸಿ, ಈ ನಿಟ್ಟಿನಲ್ಲಿ ಕಾರ್ಯನಿರತವಾಯಿತು.

ಈಗಾಗಲೇ ಟೈಪ್‌ 2 ಡಯಾಬಿಟೀಸ್‌ ಕಾಯಿಲೆಗೆ ಬಳಸುವಂತಹ ಡಿಪಿಪಿ4 ಇನ್‌ ಹಿಬಿಟರ್‌ ಎಂಬ ಔಷಧಿಯನ್ನು ಪ್ರೊಟಿನ್‌ ನಿಯಂತ್ರಿಸುವುದಕ್ಕೆ ಬಳಸಲಾಗುತ್ತದೆ. ಅದೇ ಫಾರ್ಮುಲವನ್ನು ಬಳಸಿಕೊಂಡು ಕೊರೋನಾ ರೋಗಿ ದೇಹದಲ್ಲಿ ಕೋವಿಡ್‌ -19 ವೈರಸ್‌ ದ್ವಿಗುಣಗೊಳ್ಳುವುದನ್ನು ತಡೆಯಬಹುದು ಎಂದು ಡಾ.ನೆಕ್ಕಾರ್‌ ಅವರು ತಾಂತ್ರಿಕವಾಗಿ ಸಾಬೀತು ಮಾಡಿದ್ದಾರೆ.

WHO ಚೇರ್ಮನ್‌ ಆಗಿ ಹರ್ಷವರ್ಧನ್‌ ಅಧಿಕಾರ ಸ್ವೀಕಾರ

ಅದನ್ನು ಕೋವಿಡ್‌ ವೈರಸ್‌ ಇರುವ ಪ್ರಾಣಿಗಳ ಮೇಲೆ ಪ್ರಯೋಗಿಸಿ, ಅದರಲ್ಲಿ ಯಶಸ್ವಿಯಾದರೆ ಮನುಷ್ಯನ ಮೇಲೆಯೂ ಬಳಸಬಹುದು ಎಂದು ಡಾ.ನೆಕ್ಕಾರ್‌ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೆನಡಾ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಇದೀಗ ಇಡಿ ವಿಶ್ವವೇ ಡಾ.ನೆಕ್ಕಾರ್‌ ಅವರ ಈ ಸಂಶೋಧನೆಯತ್ತ ಆಶಾವಾದದಿಂದ ನೋಡುತ್ತಿದೆ.

ಸದ್ಯಕ್ಕಂತೂ ಬೇರೆ ಔಷಧಿ ಲಭ್ಯವಾಗುವುದಿಲ್ಲ

ಕೋವಿಡ್‌ - 19 ವೈರಸ್‌ಗೆ ಔಷಧಿ ಕಂಡು ಹಿಡಿಯಲು ಇನ್ನೂ ಕನಿಷ್ಠ 10 ವರ್ಷಗಳಾದರೂ ಬೇಕು. ಅದಕ್ಕೆ 15 ಮಿಲಿಯನ್‌ ಡಾಲರ್‌ನಷ್ಟುಖರ್ಚಾಗಬಹುದು. ಆದರೆ, ಕೊರೋನಾ ಹರಡುತ್ತಿರುವ ವೇಗಕ್ಕೆ ತಕ್ಷಣವೇ ಔಷಧಿ ಬೇಕಾಗಿದೆ. ನಾವು ಬೇರೆ ಬೇರೆ ರೋಗಗಳ ನಿಯಂತ್ರಣಕ್ಕೆ ಕಂಡುಹಿಡಿದಿರುವ ಐದು ಸಾವಿರ ಔಷಧ ಫಾರ್ಮುಲಾ ಇದೆ, ಅವುಗಳಲ್ಲಿ ಟೈಪ್‌ 2 ಡಯಾಬಿಟೀಸ್‌ ಮದ್ದಿನಲ್ಲಿ ಕೊರೋನಾದ ವ್ಯಾಪಕ ಹರಡುವಿಕೆಯನ್ನು ತಡೆಯುವ ಶಕ್ತಿ ಇದೆ. ಇದೇ ಫಾರ್ಮುಲವನ್ನು ರಿಪರ್ಪಸಿಂಗ್‌ ಮಾಡಿದ್ದೇವೆ. ಕೊರೋನಾ ಸೋಂಕಿತರ ಮೇಲೆ ಪ್ರಯೋಗ ಮಾಡಿ ನೋಡುವುದು ಬಾಕಿ ಇದೆ ಎಂದು ವಿಜ್ಞಾನಿ ಡಾ. ಪ್ರವೀಣ್‌ ರಾವ್‌ ನೆಕ್ಕಾರ್‌ ತಿಳಿಸಿದ್ದಾರೆ.

ನೆಕ್ಕಾರ್‌ ಓದಿಗೆ ತಂದೆ ಮನೆಯನ್ನೇ ಅಡವಿಟ್ಟಿದ್ದರು

ಉಡುಪಿಯ ಪ್ರತಿಷ್ಠಿತ ನೆಕ್ಕಾರ್‌ ಮನೆತನದವರಾಗಿರುವ ಪ್ರವೀಣ್‌ ತನ್ನ ಹೈಸ್ಕೂಲ್‌ವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪಡೆದಿದ್ದಾರೆ. ಅವರ ತಂದೆ ಉಡುಪಿಯ ಖ್ಯಾತ ನ್ಯಾಯವಾದಿ ಗೋಪಾಲಕೃಷ್ಣ ರಾವ್‌ ಅವರು ಪ್ರವೀಣ್‌ ಅವರನ್ನು ಓದಿಸಲು ತನ್ನ ಮನೆಯನ್ನೇ ಅಡಮಾನವಿಟ್ಟಿದ್ದರು. ಮಣಿಪಾಲ ಫಾರ್ಮಸಿ ಕಾಲೇಜಿನಲ್ಲಿ ಔಷಧಿಶಾಸ್ತ್ರ ಅಧ್ಯಯನ ಮಾಡಿದ ಅವರು ಕೆನಡದ ಅಲ್ಬರ್ಟ್‌ ವಿವಿಯಲ್ಲಿ ತಮ್ಮ ಸಂಶೋಧನೆಗೆ ಪಿ.ಎಚ್‌ಡಿ. ಪದವಿ ಪಡೆದರು. ಈಗ ವಾಟರ್‌ ಲೂ ವಿ.ವಿ.ಯ ಫಾರ್ಮಸಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿದ್ದಾರೆ.

click me!