ಮಾಸ್ಕ್‌ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ

By Kannadaprabha NewsFirst Published Oct 24, 2020, 7:37 AM IST
Highlights

ಬಿಬಿಎಂಪಿ ವೈದ್ಯ ವೆಂಕಟೇಶ್‌ ಮೇಲೆ ಹಲ್ಲೆ| ಹಲ್ಲೆ ಮಾಡಿದ ಆರೋಪಿಗಳು ಮತ್ತು ವೈದ್ಯರ ನಡುವೆ ರಾಜಿ ಸಂಧಾನ| ಈ ಸಂಬಂಧ ಯಾವುದೇ ದೂರು ನೀಡದ ವೈದ್ಯರು| ಕೋವಿಡ್‌ ಟೆಸ್ಟ್‌ ಮಾಡುವಾಗ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ| 

ಬೆಂಗಳೂರು(ಅ.24): ಕೊರೋನಾ ಪರೀಕ್ಷೆ ನಡೆಸುತ್ತಿದ್ದ ಕರ್ತವ್ಯ ನಿರತ ಬಿಬಿಎಂಪಿ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳಿಬ್ಬರು ಥಳಿಸಿ ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಿಬಿಎಂಪಿ ವೈದ್ಯ ವೆಂಕಟೇಶ್‌ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ ಆರೋಪಿಗಳು ಮತ್ತು ವೈದ್ಯರ ನಡುವೆ ಅಲ್ಲಿಯೇ ರಾಜಿ ಸಂಧಾನ ನಡೆದಿದೆ. ಈ ಸಂಬಂಧ ವೈದ್ಯರು ಯಾವುದೇ ದೂರು ನೀಡಿಲ್ಲ ಎಂದು ಕೊಡಿಗೇಹಳ್ಳಿ ಠಾಣೆ ಪೊಲೀಸರು ಹೇಳಿದ್ದಾರೆ.

ಕೊಡಿಗೇಹಳ್ಳಿ ವೃತ್ತದಲ್ಲಿ ಗಣೇಶ್‌ ದೇವಾಲಯದ ಬಳಿ ಬಿಬಿಎಂಪಿ ವತಿಯಿಂದ ಕೊರೋನಾ ಪರೀಕ್ಷೆ ನಡೆಸಲಾಗುತ್ತಿತ್ತು. ಅ.22ರಂದು ಮಾಸ್ಕ್‌ ಧರಿಸದೇ ದ್ವಿಚಕ್ರ ವಾಹನದಲ್ಲಿ ಇಬ್ಬರು ಅಪರಿಚಿತರು ಕೊಡಿಗೇಹಳ್ಳಿ ವೃತ್ತದ ಬಳಿ ಬಂದಿದ್ದರು.
ಅಲ್ಲಿಯೇ ಇದ್ದ ವೈದ್ಯ ಸಿಬ್ಬಂದಿ ಸವಾರರನ್ನು ಅಡ್ಡಗಟ್ಟಿಪ್ರಶ್ನೆ ಮಾಡಿದ್ದಾರೆ. ಈ ವೇಳೆ ಬಿಬಿಎಂಪಿ ಸಿಬ್ಬಂದಿ ಮತ್ತು ಅಪರಿಚಿತರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಮಾಸ್ಕ್‌ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ವೈದ್ಯ ವೆಂಕಟೇಶ್‌ ಅವರು ಕಂದಾಯ ಅಧಿಕಾರಿಗಳು ಮತ್ತು ಇತರರ ಬಳಿ ಚರ್ಚೆ ನಡೆಸುತ್ತಿದ್ದರು. ತಮ್ಮ ಸಿಬ್ಬಂದಿ ಮೇಲೆ ಇಬ್ಬರು ವಾಹನ ಸವಾರರು ಗಲಾಟೆ ಮಾಡುತ್ತಿದ್ದನ್ನು ನೋಡಿ, ಅಪರಿಚಿತರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ವೈದ್ಯರ ವಿರುದ್ಧ ಅವಾಚ್ಯ ಶಬ್ಧದಿಂದ ನಿಂದಿಸಿ ಹಲ್ಲೆ ನಡೆಸಿದ್ದು, ವೆಂಕಟೇಶ್‌ ಇದನ್ನು ವಿಡಿಯೋ ಮಾಡಿದ್ದಾರೆ.

ದಾಖಲೆ ಸಂಖ್ಯೆಯಲ್ಲಿ ಕೊರೋನಾದಿಂದ ಗುಣಮುಖ: 13550 ಮಂದಿ ಡಿಸ್ಚಾರ್ಜ್‌

ಈ ಬಗ್ಗೆ ವಿಡಿಯೋದಲ್ಲಿ ಪ್ರತಿಕ್ರಿಯಿಸಿರುವ ವೈದ್ಯ ವೆಂಕಟೇಶ್‌, ಸಾರ್ವಜನಿಕರ ಒಳಿತಿಗಾಗಿ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ. ಆದರೂ ಜನ ಅರ್ಥ ಮಾಡಿಕೊಳ್ಳದೇ ವೈದ್ಯರು ಎಂಬುದನ್ನು ನೋಡದೇ ಹಲ್ಲೆ ನಡೆಸಿದ್ದಾರೆ. ಕರ್ತವ್ಯ ನಿರತ ನಮ್ಮ ಮೇಲೆ ಹಲ್ಲೆ ನಡೆಸಿರುವುದು ನಮಗೆ ಆತಂಕಗೊಳ್ಳುವಂತೆ ಮಾಡಿದೆ. ಇಂತಹ ಘಟನೆಯಿಂದ ಮಾನಸಿಗೆ ನೋವಾಗಿದ್ದು, ಕರ್ತವ್ಯ ನಿರ್ವಹಿಸುವ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದಿದ್ದಾರೆ.

ದೂರು ನೀಡಿದರೆ ಕ್ರಮಕೈಗೊಳ್ಳುತ್ತೇವೆ. ಆದರೆ ಅಲ್ಲಿಯೇ ರಾಜಿ ಸಂಧಾನ ಮಾಡಿಕೊಂಡು ಹೋಗಿದ್ದಾರೆ. ಯಾವುದೇ ದೂರುಗಳು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.
 

click me!