* ಕಾರಲ್ಲಿ ವಾಶಿಂಗ್ ಬೇಸಿನ್ ಸಾಗಿಸಿದ್ದಕ್ಕೆ 20 ಸಾವಿರಕಕ್ಕೆ ಬೇಡಿಕೆ
* ಎಎಸ್‌ಐ ಡಿ.ಸಿ.ಮಹೇಶ್ ಹಾಗೂ ಹೆಡ್ ಕಾನ್‌ಸ್ಟೇಬಲ್ ಗಂಗಾಧರಸ್ವಾಮಿ ತಲೆದಂಡ
* ಕರ್ತವ್ಯ ಲೋಪ ಹಾಗೂ ದುರ್ನಡತೆ ಮೇರೆಗೆ ಅಮಾನತು
ಬೆಂಗಳೂರು(ಜೂ.29): ಹೊಸ ರಾಜ್ಯದ ವಾಹನಗಳನ್ನು ತಡೆದು ಸಂಚಾರ ನಿಯಮ ಉಲ್ಲಂಘನೆ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇರೆಗೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಸೇರಿದಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಹಲಸೂರು ಗೇಟ್ ಸಂಚಾರ ಠಾಣೆಯ ಎಎಸ್‌ಐ ಡಿ.ಸಿ.ಮಹೇಶ್ ಹಾಗೂ ಹೆಡ್ ಕಾನ್‌ಸ್ಟೇಬಲ್ ಗಂಗಾಧರಸ್ವಾಮಿ ತಲೆದಂಡವಾಗಿದ್ದು, ಇತ್ತೀಚೆಗೆ ಕಾರ್ಪೋರೇಷನ್ ಸಮೀಪದ ದೇವಾಂಗ ಜಂಕ್ಷನ್‌ನಲ್ಲಿ ಕೇರಳ ಮೂಲದ ಸಂತೋಷ್ ಅವರನ್ನು ತಡೆದು 2,500 ವನ್ನು ಈ ಇಬ್ಬರು ಪೊಲೀಸರು ವಸೂಲಿ ಮಾಡಿದ್ದರು. ಈ ಬಗ್ಗೆ ಸಂತೋಷ್ ನೀಡಿದ ಇ.ಮೇಲ್ ದೂರು ಆಧರಿಸಿ ವಿಚಾರಣೆ ನಡೆಸಿ ಆರೋಪಿತ ಪೊಲೀಸರನ್ನು ಜಂಟಿ ಆಯುಕ್ತರು ಅಮಾನತುಗೊಳಿಸಿದ್ದಾರೆ.
Bengaluru Crime: ಮದ್ಯದ ಅಮಲಿನಲ್ಲಿ ಪೊಲೀಸರಿಗೇ ಗುದ್ದಿದ ಬೈಕ್ ಸವಾರ..!
ಕಾರಿನಲ್ಲಿ ವಾಷ್ ಬೇಸಿನ್ ಇದ್ದಿದಕ್ಕೆ 20 ಸಾವಿರ!
ಜೂ.10ರಂದು ಕೇರಳ ಮೂಲದ ಸಂತೋಷ್ ಕುಮಾರ್ ಅವರು ತಮ್ಮ ಕಾರಿನಲ್ಲಿ ವಾಷ್ ಬೇಸಿನ್ ತೆಗೆದುಕೊಂಡು ಹೊರಟಿದ್ದರು. ಆಗ ದೇವಾಂಗ ಜಂಕ್ಷನ್ ಸಮೀಪ ಕರ್ತವ್ಯದಲ್ಲಿ ನಿರತರಾಗಿದ್ದ ಎಎಸ್‌ಐ ಮಹೇಶ್ ಹಾಗೂ ಗಂಗಾಧ ಸ್ವಾಮಿ ಅವರು, ಸಂತೋಷ್ ಕುಮಾರ್ ಅವರ ಕಾರನ್ನು ತಪಾಸಣೆ ನೆಪದಲ್ಲಿ ಅಡ್ಡಗಟ್ಟಿದ್ದರು. ಬಳಿಕ ಕಾರಿನಲ್ಲಿ ವಾಷ್ ಬೇಸಿನ್ ಇರುವುದನ್ನು ನೋಡಿದ ಪೊಲೀಸರು, ಸರಕು ಸಾಗಾಣಿಕೆಗೆ ಮಾಡಿದ ತಪ್ಪಿಗೆ ನ್ಯಾಯಾಲಯದಲ್ಲಿ ನೀವು .20 ಸಾವಿರ ದಂಡ ಕಟ್ಟಬೇಕಾಗುತ್ತದೆ. ಆದರೆ ಇಲ್ಲೇ .2500 ಹಣ ನೀಡಿದರೆ ವಾಹನ ಬಿಡುತ್ತೇವೆ ಎಂದಿದ್ದರು. ಈ ಮಾತಿಗೊಪ್ಪಿದ ಅವರು, ಪೊಲೀಸರಿಗೆ ಕೇಳಿದಷ್ಟುಹಣ ಕೊಟ್ಟು ತೆರಳಿದ್ದರು. ಇದಾದ ನಂತರ ಹಣ ವಸೂಲಿ ಬಗ್ಗೆ ಜಂಟಿ ಆಯುಕ್ತ ರವಿಕಾಂತೇಗೌಡ ಅವರಿಗೆ ಇ-ಮೇಲ್ ಮೂಲಕ ಸಂತೋಷ್ ದೂರು ಸಲ್ಲಿಸಿದರು.
ಕರ್ತವ್ಯದ ಅವಧಿಯಲ್ಲಿ ವಾಹನಗಳನ್ನು ಕೇವಲ ದಾಖಲಾತಿ ಪರಿಶೀಲನೆ ಸಲುವಾಗಿ ಎಎಸ್‌ಐ ಮಹೇಶ್ ಹಾಗೂ ಹೆಚ್‌ಸಿ ಗಂಗಾಧರಸ್ವಾಮಿ ನಿಲ್ಲಿಸುತ್ತಿದ್ದು ಪತ್ತೆಯಾಯಿತು. ಅಲ್ಲದೆ ಆ ದಿನ ಬಾಡಿ ವೋರ್ನ್ ಕ್ಯಾಮರಾ ಧರಿಸದೆ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದರು. ಅರ್ಜಿದಾರರಿಂದ ಅಕ್ರಮವಾಗಿ .2500 ರು ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ವಿಚಾರಣಾ ವರದಿ ಆಧರಿಸಿ ಕರ್ತವ್ಯ ಲೋಪ ಹಾಗೂ ದುರ್ನಡತೆ ಮೇರೆಗೆ ಎಎಸ್‌ಐ ಹಾಗೂ ಎಚ್‌ಸಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.