ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂದೆ ನಿಜಕ್ಕೂ ಏನಾಗಿದೆ? ಶಾಸಕ ಪೊನ್ನಣ್ಣ ಹೇಳಿದ್ದೇನು?

Published : Jun 05, 2026, 08:54 PM IST
AS Ponnanna

ಸಾರಾಂಶ

ಸರ್ಕಾರ ಬದಲಾವಣೆ ಆದಾಗ ಸಹಜವಾಗಿ ಇವೆಲ್ಲಾ ನಡೆಯುತ್ತವೆ, ಅಂತಹ ಸಂದರ್ಭದಲ್ಲಿ ಮನಸ್ತಾಪಗಳು ಇದ್ದೇ ಇರುತ್ತವೆ ಎಂದು ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪ್ರತಿಕ್ರಿಯಿಸಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜೂ.05): ಸರ್ಕಾರ ಬದಲಾವಣೆ ಆದಾಗ ಸಹಜವಾಗಿ ಇವೆಲ್ಲಾ ನಡೆಯುತ್ತವೆ, ಅಂತಹ ಸಂದರ್ಭದಲ್ಲಿ ಮನಸ್ತಾಪಗಳು ಇದ್ದೇ ಇರುತ್ತವೆ ಎಂದು ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿರುವ ವಿಚಾರಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪ್ರತಿಕ್ರಿಯಿಸಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರಿನಲ್ಲಿ 43 ಆದಿವಾಸಿ ಕುಟುಂಬಗಳಿಗೆ ನಿರ್ಮಿಸಿಕೊಟ್ಟಿರುವ ಮನೆಗಳ ಹಸ್ತಾಂತರಿಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯ ನಾಯಕರು, ದೊಡ್ಡ ನಾಯಕರು.

ಹೀಗಾಗಿ ಅವರು ಇದೆಲ್ಲಾವನ್ನು ಗಮನಿಸಿ ಸರ್ಕಾರದಲ್ಲಿ ಭಾಗಿಯಾಗುವ ನಂಬಿಕೆ ಇದೆ. ಪಕ್ಷ ಮತ್ತು ನಮ್ಮ ನಾಯಕರು ಅವರ ಮನವೊಲಿಸುವ ವಿಶ್ವಾಸವಿದೆ. ಸಚಿವ ಸ್ಥಾನಗಳನ್ನು ಸಿಎಂ, ಮಾಜಿ ಸಿಎಂ ಮತ್ತು ಹೈಕಮಾಂಡ್ ನಿರ್ಧರಿಸಿರುತ್ತದೆ. ಪಕ್ಷದ ಹಿರಿಯ ನಾಯಕರು ಕೂಡ ರಾಮಲಿಂಗಾರೆಡ್ಡಿ ಅವರ ಮನಸ್ಸಿಗೆ ನೋವಾಗದಂತೆ ಖಾತೆ ಹಂಚುವ ವಿಶ್ವಾಸವಿದೆ. ಪಕ್ಷದ ನಾಯಕರು ಮತ್ತು ಡಿಕೆಶಿ ಅವರು ಅವರ ಮನವೊಲಿಸುವ ವಿಶ್ವಾಸವಿದೆ. ರಾಜ್ಯದ ಹಿತ ಕಾಪಾಡುವ ದೃಷ್ಟಿಯಿಂದ ಪಕ್ಷದ ನಾಯಕರ ನಿರ್ಧಾರಗಳು ಇರುತ್ತವೆ ಎಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ.

ನಾನು ಕೇಳಿದ್ದು ಖಾತೆ ಕೊಡುವುದಾಗಿ ಹೇಳಿದ್ದರು ಎಂಬ ರಾಮಲಿಂಗಾರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೊನ್ನಣ್ಣ ಅವರು ಅದಕ್ಕೆಲ್ಲಾ ನಾವು ಸಾಕ್ಷಿ ಅಲ್ಲ ಎಂದ ಅವರು ಸರ್ಕಾರ ಮುಂದಕ್ಕೆ ಸುಗಮವಾಗಿ ನಡೆಯಲಿದೆ, ಹಿಂದಿನಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಿಎಂ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಸಚಿವ ಸ್ಥಾನ ತಪ್ಪಿಸುವುದಕ್ಕಾಗಿಯೇ ಜಮೀರ್ ಅವರದು ಎನ್ನಲಾದ ಆಡಿಯೋ ವೈರಲ್ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿರುವುದಕ್ಕೆ ಅವರು ಮಾಡದಿರುವ ತಪ್ಪಿಗೆ ಅವರಿಗೆ ಶಿಕ್ಷೆ ಕೊಡುವುದು ಸರಿಯಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ತನಿಖೆ ಆಗಲಿ

ಜಮೀರ್ ಅವರು ನಾನು ಮಾತನಾಡಿಯೇ ಇಲ್ಲ ಎನ್ನುತ್ತಾರೆ. ಇದು ಎಐ ಆಡಿಯೋ ಅಂತ ಅವರು ಹೇಳುತ್ತಿದ್ದಾರೆ, ಮತ್ತೆ ಅದರ ವಿರುದ್ಧ ದೂರನ್ನೂ ನೀಡಿದ್ದಾರೆ. ಇಂದು ಎಐ ಇರುವುದರಿಂದ ಏನು ಬೇಕಾದರೂ ಮಾಡಿರುವ ಸಾಧ್ಯತೆ ಇದೆ. ಯಾರ ಧ್ವನಿ, ಚಿತ್ರವನ್ನು ಬೇಕಾದರೂ ಸೃಷ್ಟಿ ಮಾಡಬಹುದು. ಇಂತಹ ವಿಚಾರದಲ್ಲಿ ಪ್ರತಿಕ್ರಿಯಿಸುವುದಕ್ಕಿಂತ ಪರಿಶೀಲನೆ ಮಾಡಬೇಕಾಗುತ್ತದೆ. ಹೀಗಾಗಿ ತನಿಖೆ ಆಗಲಿ ಎಂದು ಶಾಸಕ ಎ. ಎಸ್ ಪೊನ್ನಣ್ಣ ಆಗ್ರಹಿಸಿದರು. ಇನ್ನು ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಕೊಡುವುದು ಅಥವಾ ಬಿಡುವುದು ಅದೆಲ್ಲವನ್ನೂ ಮಾನ್ಯ ಸಿದ್ದರಾಮಯ್ಯನವರು, ಸಿಎಂ ಡಿ.ಕೆ ಶಿವಕುಮಾರ್ ಮತ್ತು ಹೈಕಮಾಂಡ್ ನವರು ತೀರ್ಮಾನ ಮಾಡುತ್ತಾರೆ.

ಯಾವುದು ಸೂಕ್ತ, ಯಾರಿಗೆ ಕೊಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜೀವನ ನಡೆಯುವುದೇ ಭರವಸೆಯ ಮೇಲೆ, ಹೀಗಾಗಿ ಸಚಿವ ಸ್ಥಾನ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಹಿರಿಯ ಶಾಸಕರು ಪಕ್ಷದ ಆಧಾರದ ಸ್ಥಂಭಗಳು, ಮತ್ತು ಯಾವ ಭಾಗಕ್ಕೆ ಪ್ರಾತಿನಿಧ್ಯ ಕೊಡಬೇಕು ಎಂಬುವುದು ಇರುತ್ತದೆ. ಅದನ್ನೆಲ್ಲ ಗಮನಿಸಿ ಮೊದಲ ಪಟ್ಟಿಯಲ್ಲಿ ಸಚಿವಸ್ಥಾನ ನೀಡಿರುತ್ತಾರೆ ಎಂದಿದ್ದಾರೆ. ಕೊಡಗು ಜಿಲ್ಲೆಗೆ ಜಿಲ್ಲೆಗೆ ಸಚಿವಸ್ಥಾನ ಕೊಡಬೇಕು, ಇಲ್ಲಿಯವರೇ ಉಸ್ತುವಾರಿ ಆಗಿರಬೇಕು ಎನ್ನುವ ಕೂಗು ಇದೆ.

ಅದು ಪಕ್ಷದ ನಾಯಕರ ಗಮನದಲ್ಲಿ ಇದೆ. ಎಲ್ಲರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಆದರೆ ಯಾರು ಸೂಕ್ತ ವ್ಯಕ್ತಿ, ಯಾರಿಗೆ ಕೊಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾವು ಸ್ವಲ್ಪ ದಿನ ಕಾಯೋಣ ಎಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ. ಈ ಸರ್ಕಾರ ಶಾಶ್ವತವಲ್ಲ ಎಂದು ವಿಪಕ್ಷಗಳು ಇದನ್ನೇ ಹೇಳುವುದು. ವಿರೋಧ ಪಕ್ಷದವರು ಇದನ್ನೇ ಹೇಳ್ತಾರೆ, ನಾವು ವಿರೋಧ ಪಕ್ಷದಲ್ಲಿ ಇದ್ದರು ಇದನ್ನೇ ಹೇಳುತ್ತಿದ್ದೆವು. ಸರ್ಕಾರ ನಡೆಸುತ್ತಿರುವವರಿಗೆ ಇದನ್ನು ನಿಭಾಯಿಸುವ ಸಾಮರ್ಥ್ಯ ಇದೆ. ಇದನ್ನು ಮುಂದಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್ ಸಮರ್ಥವಾಗಿ ನಿಭಾಯಿಸಲಿದ್ದಾರೆ. ಉತ್ತಮ ಆಡಳಿತವನ್ನು ಮಾನ್ಯ ಶಿವಕುಮಾರ್ ಅವರು ಕೊಡಲಿದ್ದಾರೆ ಎಂದು ಕೊಡಗಿನ ಕೆದಮುಳ್ಳೂರಿನಲ್ಲಿ ಶಾಸಕ ಪೊನ್ನಣ್ಣ ಹೇಳಿದ್ದಾರೆ.

PREV
Read more Articles on
click me!

Recommended Stories

Kodagu: 9 ವರ್ಷಗಳ ಬಳಿಕ ಸಿಕ್ಕ ಸ್ವಂತ ಸೂರು: 43 ಆದಿವಾಸಿ ಕುಟುಂಬಗಳ ಕಣ್ಣಲ್ಲಿ ಸಂತಸದ ಕಣ್ಣೀರು!
ಡಿ.ಕೆ.ಶಿವಕುಮಾರ್ ಸರ್ಕಾರದ ಮುಂದೆ ದೊಡ್ಡ ಸವಾಲುಗಳಿವೆ: ಸಿ.ಟಿ.ರವಿ ಹೇಳಿದ್ದೇನು?