ಹಿರಿಯ ರಂಗಕರ್ಮಿ ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಇನ್ನಿಲ್ಲ/ ರಂಗಭೂಮಿ ನಿರ್ದೇಶಕರಾಗಿ ಕಥೆಗಾರನಾಗಿ ಕವಿಯಾಗಿ ನಾಡಿನಾದ್ಯಂತ ಪ್ರಸಿದ್ಧ/ ಜನಮೆಚ್ಚುಗೆ ಪಡೆದಿದ್ದ ಗುಡ್ಡದ ಭೂತ ಧಾರವಾಹಿಯಲ್ಲಿ ಮಾಧವ ಆಚಾರ್ಯ ನಟನೆ
ಉಡುಪಿ(ಡಿ. 07) ಹಿರಿಯ ರಂಗಕರ್ಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐವತ್ತಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಉದ್ಯಾವರ ಮಾಧವ ಆಚಾರ್ಯ ರಿಗೆ 79 ವರ್ಷವಾಗಿತ್ತು. ರಂಗಭೂಮಿ ನಿರ್ದೇಶಕರಾಗಿ ಕಥೆಗಾರನಾಗಿ ಕವಿಯಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದರು. ಜನಮೆಚ್ಚುಗೆ ಪಡೆದಿದ್ದ ಗುಡ್ಡದ ಭೂತ ಧಾರವಾಹಿಯಲ್ಲಿ ಮಾಧವ ಆಚಾರ್ಯ ನಟಿಸಿದ್ದರು.
ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ ಇನ್ನಿಲ್ಲ
ಉಡುಪಿಯ ಸಮೂಹ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಇವರು, ತಮ್ಮ ತಂಡವನ್ನು ದೇಶ-ವಿದೇಶಗಳಿಗೆ ಕೊಂಡೊಯ್ದು ನಾಟಕ , ರೂಪಕ ಗಳನ್ನು ಪ್ರದರ್ಶಿಸಿದ್ದರು. ರಾಜ್ಯೋತ್ಸವ, ರಂಗ ವಿಶಾರದ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸನ್ಮಾನಗಳು ಆಚಾರ್ಯರಿಗೆ ಒಲಿದುಬಂದಿದೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕನಾಗಿ ಕುಂದಾಪುರದ ಬಿಪಿ ಶೆಟ್ಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ಇವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರು ಯಕ್ಷಗಾನ ವೃತ್ತಿ ಕಲಾವಿದರಿಗಾಗಿ ಆರಂಭಗೊಂಡ ‘ಪ್ರೊ. ಬಿ. ವಿ. ಆಚಾರ್ಯ ಯಕ್ಷನಿಧಿ’ಯ ಆರಂಭ ಕಾಲದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡ ಅಮೇರಿಕಾದಲ್ಲಿ ಜರುಗಿದ ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಿ ಅಮೇರಿಕದಾದ್ಯಂತ 11 ಕಡೆಗಳಲ್ಲಿ ಪ್ರದರ್ಶನ ನೀಡಿತ್ತು. ಆಚಾರ್ಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.