ದೈವ ನರ್ತಕನಿಗೆ 2.10 ಲಕ್ಷ ರು. ಮೌಲ್ಯದ ಕೃತಕ ಕಾಲು

Kannadaprabha News   | Kannada Prabha
Published : Feb 02, 2026, 12:29 PM IST
Dakshina Kannada

ಸಾರಾಂಶ

ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ, ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ 2.10 ಲಕ್ಷ ರು. ಮೌಲ್ಯದ ಕೃತಕ ಕಾಲಿನ ದೇಣಿಗೆ ನೀಡಿ ಆ ವ್ಯಕ್ತಿಯು ನಡೆದಾಡುವ ಅಪೂರ್ವ ಅವಕಾಶ

ಮಂಗಳೂರು: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ, ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ 2.10 ಲಕ್ಷ ರು. ಮೌಲ್ಯದ ಕೃತಕ ಕಾಲಿನ ದೇಣಿಗೆ ನೀಡಿ ಆ ವ್ಯಕ್ತಿಯು ನಡೆದಾಡುವ ಅಪೂರ್ವ ಅವಕಾಶವನ್ನು ಕಲ್ಪಿಸಿದೆ.

ಕಾಸರಗೋಡು ತಾಲೂಕಿನ ಪೆರ್ಮುದೆ ಗ್ರಾಮದ 53 ವರ್ಷದ ಬಾಬು ಅವರು ವೃತ್ತಿಯಲ್ಲಿ ಭೂತಾರಾಧನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೈವ ನರ್ತಕರಾಗಿ ಕಾರ್ಯ ನಿರ್ವಹಿಸಿ, ತಮ್ಮ ಜೀವನೋಪಾಯಕ್ಕೆ ದಾರಿ ಕಂಡುಕೊಂಡಿದ್ದರು. ಅತಿಯಾದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅವರ ಎಡಕಾಲು ಗ್ಯಾಂಗ್ರೀನ್ ರೋಗಕ್ಕೆ ತುತ್ತಾಗಿ ಕಾಲನ್ನೇ ಕತ್ತರಿಸುವ ಪರಿಸ್ಥಿತಿ ಎದುರಾಗಿ ನಡೆದಾಡಲು ಸಮಸ್ಯೆಯಾಗಿತ್ತು.

ಆರ್ಥಿಕ ಸಹಾಯವನ್ನು ಕೋರಿದ್ದ ಬಾಬು

ಈ ಪರಿಸ್ಥಿತಿಯಲ್ಲಿ ಬಾಬು ಅವರು ನಗರದ ಖ್ಯಾತ ವೈದ್ಯಕೀಯ ಶಾಸ್ತ್ರ ತಜ್ಞರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ದೇವದಾಸ್ ರೈ ಅವರನ್ನು ಭೇಟಿ ಮಾಡಿ ಆರ್ಥಿಕ ಸಹಾಯವನ್ನು ಕೋರಿದ್ದರು. ಬಾಬು ಅವರ ಕರುಣಾಜನಕ ಸಮಸ್ಯೆಯನ್ನು ಪರಿಗಣಿಸಿದ ಡಾ. ದೇವದಾಸ್ ರೈ ಅವರು, ಮಾನವೀಯತೆಯ ನೆಲೆಯಲ್ಲಿ ತಮ್ಮ ಮಾತೃ ಸಂಸ್ಥೆಯಾದ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಕಾರ್ಯಕಾರಿ ಸಮಿತಿ ಎದುರು ಈ ಸಮಸ್ಯೆಯನ್ನು ಮಂಡಿಸಿ, ಸಂಸ್ಥೆಯ ಸಮಾಜ ಸೇವಾ ಯೋಜನೆಗಳ ಚಟುವಟಿಕೆಗಳ ಅಂಗವಾಗಿ 2.10 ಲಕ್ಷ ರು. ಮೌಲ್ಯದ ಕೃತಕ ಕಾಲನ್ನು ಮಂಜೂರು ಮಾಡಿಸಿದರು.

ಸರಳ ಸಮಾರಂಭದಲ್ಲಿ ಬಾಬು ಅವರಿಗೆ ಕೃತಕ ಕಾಲನ್ನು ನೀಡಿ ಜೋಡಿಸಲಾಯಿತು

ಡಾ. ದೇವದಾಸ್ ರೈ ಅವರ ‘ಸೌರಭ್’ ಚಿಕಿತ್ಸಾಲಯದಲ್ಲಿ ಗುರುವಾರ ಸರಳ ಸಮಾರಂಭದಲ್ಲಿ ಬಾಬು ಅವರಿಗೆ ಕೃತಕ ಕಾಲನ್ನು ನೀಡಿ ಜೋಡಿಸಲಾಯಿತು.ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಾಜಿ ಅಧ್ಯಕ್ಷ ಸಂತೋಷ್‌ ಶೇಟ್, ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಇದ್ದರು. ಬಾಬು ಅವರು ಈಗ ಸುಸೂತ್ರವಾಗಿ ನಡೆದಾಡುವ ಸ್ಥಿತಿಯಲ್ಲಿದ್ದು, ರೋಟರಿ ಸಂಸ್ಥೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್: ಮೈಲಾರದ ಗೊರವಯ್ಯ ಕಾರ್ಣಿಕ
'ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್': ಮಾತೃ ಇಲಾಖೆ ವಿರುದ್ಧವೇ ಸ್ಟೇಟಸ್ ಹಾಕಿದ ಕೊಪ್ಪಳದ ಪೇದೆ!