ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ಹಿಂಪಡೆಯಲು ಅಸಲಿ ಕಾರಣ ಏನು? ಮೋದಿ ಮತ್ತು ಅಮಿತ್ ಶಾ ಗೆ ಈ ಯೋಚನೆ ಬಂದಿದ್ದು ಎಲ್ಲಿಂದ? ಆರ್ ಎಸ್ ಎಸ್ ನಾಯಲ ಕಲ್ಲಡ್ಕ ಪ್ರಭಾಕರ್ ಭಟ್ ನೀಡಿದ ಉದಾಹರಣೆ
ಬಾಗಲಕೋಟೆ [ಅ. 07] ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮಹತ್ವದ ಹೆಜ್ಜೆಯನ್ನು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತಮ್ಮದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಮೋದಿ ಮತ್ತು ಅಮಿತ್ ಶಾ ಸೇರಿ ಕಾಶ್ಮೀರಕ್ಕೆ ನೀಡಿದ್ದ 370 ವಿಧಿ ರದ್ದತಿಗೆ ಕಾರಣವಾಯ್ತಾ RSS ನಲ್ಲಿ ಆಡಿದ್ದ ಮಂಡಲದ ಆಟ? ಹಾಗೆ ಸುಲಭಕ್ಕೆ ಇದು ಅರ್ಥವಾಗುವುದಿಲ್ಲ. ಪ್ರಕಾಕರ್ ಭಟ್ಟರ ವಿಶ್ಲೇಷಣೆಯನ್ನೇ ಕೇಳಬೇಕು.
ಆರ್ಟಿಕಲ್ 370 ರದ್ದು: ಜಮ್ಮು ಕಾಶ್ಮೀರದ ಸಂವಿಧಾನದಲ್ಲೇ ಇತ್ತು ಸ್ಪಷ್ಟ ಅವಕಾಶ
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ RSS ವಾರ್ಷಿಕೋತ್ಸವದಲ್ಲಿ ಮಾತನಾಡಿದ ಪ್ರಭಾಕರ್ ಭಟ್, ಈ ದೇಶದಲ್ಲಿರುವ ಹಣ, ವ್ಯವಸ್ಥೆ, ಆಹಾರ ಅವರಿಗೆ ಕಶ್ಮೀರದವರಿಗೆ ಬೇಕು. ಆದರೆ ಈ ದೇಶದೊಟ್ಟಿಗೆ ಸೇರೋಲ್ಲ ಎನ್ನುವವರಿಗೆ ಪ್ರತ್ಯೇಕ ಕಾನೂನು ಮಾಡಿಕೊಟ್ಟಿದ್ದರು ನಮ್ಮ ನಾಯಕರು. ಆದರೆ ಇತ್ತೀಚೆಗೆ ಒಂದು ಸಂತಸದ ಸಂಗತಿ ನಡೆಯಿತು. ಕಾಶ್ಮೀರಕ್ಕಿದ್ದ 370ನೇ ವಿಧಿ ಮತ್ತು 35 ಎ ರದ್ದು ಮಾಡಲಾಯಿತು. ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಯಿತು ಎಂದಿದ್ದಾರೆ.
ಕಾಶ್ಮೀರ ಬೇರೆ ಎಂದದ್ದೇ ತಡ, ಭಯೋತ್ಪಾದನೆ ಬೆಳೆದು, ಸಾವಿರಾರು ಜನ ಮುಗ್ಧ ಭಾರತೀಯರನ್ನು ಹತ್ಯೆ ಮಾಡುವ ಪ್ರಕರಣಗಳು ನಡೆದವು. ಈ ಹಿನ್ನೆಲೆಯಲ್ಲಿ ಕಾಶ್ಮೀರ ಸೇರ್ಪಡೆ ವಿಚಾರ ಇಲ್ಲಿಯವರೆಗೆ ಎಳೆದುಕೊಂಡು ಬಂದಿತು. ಯಾಕೆ ಹಿಂದಿನ ನಾಯಕರಿಗೆ ಬರಲಿಲ್ಲ, ಬಹುಮತದ ಸರ್ಕಾರ ಇದ್ದರೂ ಅದನ್ನು ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದರು.
ಪ್ರಧಾನಿ ಮತ್ತು ಗೃಹ ಸಚಿವರಿಗೆ ಈ ಯೋಚನೆ ಬರಲು ಕಾರಣವಾಗಿದ್ದೇ RSS, ಇದನ್ನು ನೆನಪಿಡಿ. ಇದಕ್ಕೆಲ್ಲಾ RSSನಲ್ಲಿ ಬರುವ ಮಂಡಲದ ಆಟವೇ ಕಾರಣವಾಯಿತು. ಮಂಡಲದ ಆಟದಲ್ಲಿ ಮಧ್ಯೆ ಇರುವ ಹುಡುಗ ಕಾಶ್ಮೀರ ಕಿಸಕಾ ಹೈ? ಅಂತಾನೆ. ಆಗ ಸುತ್ತಲೂ ಇರೋ ಹುಡುಗರು ಕಾಶ್ಮೀರ ಹಮಾರಾ ಹೈ ಅಂತಾರೆ. ಅಲ್ಲಿಂದ ಸೀಟಿ ಹಾಕುತ್ತಲೇ ಅರ್ಧ ನಿಮಿಷ, ಮುಕ್ಕಾಲು ನಿಮಿಷ ಒಬ್ಬರನ್ನೊಬ್ಬರನ್ನ ನೂಕ್ತಾರೆ, ಆಗ ಮತ್ತೊಮ್ಮೆ ಸೀಟಿ ಹಾಕಲಾಗುತ್ತದೆ. ಯಾರ ಕಾಲು ಸಣ್ಣ ಮಂಡಲದಲ್ಲಿ ಇರುತ್ತೋ ಅವ್ರು ನಮ್ಮದು ಕಾಶ್ಮೀರ ಅಂತಾರೆ. ಈ ರಾಷ್ಟ್ರೀಯ ಚಿಂತನೆಯ ಭಾವನೆಯ ಆಟವನ್ನ ನಾವೆಲ್ಲಾ ಆಡಿರುತ್ತೇವೆ. ಇಂತಹ ಆಟವನ್ನು ಆಡಿದ ಪ್ರಧಾನಿ ಮತ್ತು ಗೃಹ ಮಂತ್ರಿಗಳಿಗೆ ಅನಿಸಿದ್ದೇ ಕಾಶ್ಮೀರ ನಮ್ಮದು ಭಾವನೆ ಹಾಗಾಗಿ ಈ ದಿಟ್ಟ ನಿರ್ಧಾರ ಸಾಧ್ಯವಾಯಿತು ಎಂದರು.
ಕಾಶ್ಮೀರ ಪಾಕಿಸ್ತಾನ ಕೆ ನಯೀ ಹೈ, ಏ ಹಮಾರ ಹೈ, ಹೀಗೆ ಸಂಘ ಪರಿವಾರದ ಒಂದು ಸಣ್ಣ ಆಟದ ಮೂಲಕ ದೇಶ ಒಂದು ಅನ್ನೋದನ್ನ ಮೂಡಿಸಲು ಹೊರಟಿದ್ದು. ಇದು ಸಂಘ ಪರಿವಾರದಿಂದ ಮಾತ್ರ ಸಾಧ್ಯ. ಇಡೀ ದೇಶ ಒಂದು ಅನ್ನೋ ಅಖಂಡತೆಯನ್ನ ಹೇಳಿಕೊಡುವುದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಭಟ್ ಹೇಳಿದರು.