ಕೋಲಾರ ಎಸ್ಪಿಯನ್ನೇ ಬಂಧಿಸಲು ಆದೇಶ, ಬಳಿಕ ವಾಪಾಸ್!

By Web DeskFirst Published Jun 8, 2019, 11:05 AM IST
Highlights

ಕೋಲಾರ ಎಸ್ಪಿಯನ್ನೇ ಬಂಧಿಸಲು ಆದೇಶ!| ವಾರಂಟ್‌ ಹೊರಡಿಸಿ ಹಿಂಪಡೆದ ಹೈಕೋರ್ಟ್‌

ಬೆಂಗಳೂರು[ಜೂ.08]: ಪ್ರಕರಣವೊಂದರ ಸಂಬಂಧ ಕೋಲಾರ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ರೋಹಿಣಿ ಸೆಪಟ್‌ ಕಟೋಚ್‌ ಅವರನ್ನು ಬಂಧಿಸಲು ಡಿಜಿಪಿಗೆ ಹೊರಡಿಸಿದ್ದ ತನ್ನದೇ ಆದೇಶವನ್ನು ಹೈಕೋರ್ಟ್‌ ಶುಕ್ರವಾರ ಹಿಂಪಡೆದಿದೆ.

ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಉಪ ವಿಭಾಗಾಧಿಕಾರಿ (ಎಸಿ) ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಎಂಜಿನಿಯರ್‌ (ಇಎ) ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ರೋಹಿಣಿ ಸೆಪಟ್‌ ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಎಸ್‌ಪಿ ರೋಹಿಣಿ ವಿರುದ್ಧ ಹೈಕೋರ್ಟ್‌ ಬಂಧನ ವಾರಂಟ್‌ ಹೊರಡಿಸಿತ್ತು. ಈ ವಿಷಯ ತಿಳಿದ ಕೂಡಲೇ ಮಧ್ಯಾಹ್ನದ ಕಲಾಪಕ್ಕೆ ರೋಹಿಣಿ ಅವರು ವಿಚಾರಣೆಗೆ ಖುದ್ದು ಹಾಜರಾದರು. ಹೀಗಾಗಿ ನ್ಯಾಯಾಲಯವು ಆ ತಪ್ಪನ್ನು ಮನ್ನಿಸಿ, ರೋಹಿಣಿ ವಿರುದ್ಧ ಬಂಧನ ವಾರೆಂಟ್‌ ಹಿಂಪಡೆಯಬೇಕು ಎಂದು ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ಕೋರಿದರು.

ಅದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಅವರು, ರೋಹಿಣಿ ಮತ್ತು ಕೋಲಾರ ಎಸಿ ಹಾಗೂ ಇಎ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್‌ ಹಿಂಪಡೆದರು. ನಂತರ ಅರ್ಜಿದಾರರ ಭೂಮಿಗೆ ಪರಿಹಾರ ನೀಡಬಹುದಾದ ಮೊತ್ತದ ಬಗ್ಗೆ ಪರಿಶೀಲಿಸಿ ಜೂನ್‌ 14ರಂದು ವರದಿ ಸಲ್ಲಿಸುವಂತೆ ಕೋಲಾರ ಜಿಲ್ಲಾ ಪಂಚಾಯತ್‌ ಸಿಇಒಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

click me!