ಕೊಪ್ಪಳ ನಗರಸಭೆಯಲ್ಲಿ ಕೈ ಕೈ ಮಿಲಾಯಿಸಿದ ಕಾಂಗ್ರೆಸ್‌ ಸದಸ್ಯರು..!

By Girish Goudar  |  First Published Jun 7, 2022, 1:19 PM IST

*  ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆ ಕುರಿತು ಕೋಲಾಹಲ
*  ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದ
*  ನಗರಸಭೆಯಲ್ಲಿ ಫಾರ್ಮ್‌- 3 ಮಾರಾಟ 
 


ಕೊಪ್ಪಳ(ಜೂ.07): ನಗರದಲ್ಲಿ ಎಪಿಜಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಕುರಿತು ಚರ್ಚೆ ತಾರಕಕ್ಕೇರಿ ಹೋಗಿದ್ದಲ್ಲದೆ ಆಡಳಿತರೂಢ ಕಾಂಗ್ರೆಸ್‌ ಸದಸ್ಯರಲ್ಲಿಯೇ ವಾಗ್ವಾದ ಕೈಮೀರಿ ಕೈ ಕೈ ಮಿಲಾಯಿಸಿದ ಘಟನೆ ಸೋಮವಾರ ನಡೆಯಿತು.

ನಗರಸಭೆಯ ತುರ್ತು ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿ, ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗುವುದಕ್ಕೆ ಸಾಕ್ಷಿಯಾಯಿತು. ನಗರದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆ ಕುರಿತು ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಯಿತು.

Latest Videos

undefined

ಗ್ಯಾಸ್‌ ಪೈಪ್‌ ಅಳವಡಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಇದನ್ನು ಕೈಬಿಡುವುದು ಸೂಕ್ತ. ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಸದಸ್ಯರಾದ ಮುತ್ತು ಕುಷ್ಟಗಿ, ಅಮ್ಜಾದ್‌ ಪಟೇಲ್‌, ಸಿದ್ದು ಮ್ಯಾಗೇರಿ, ಪರಶುರಾಮ ಹಾಗೂ ಮಹೇಂದ್ರ ಛೋಪ್ರಾ ಹಾಗೂ ಕೆಲವು ಮಹಿಳಾ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

Koppala; ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೂಗು

ಇದರಿಂದ ಮುಂದೆ ಅನಾಹುತವಾಗುವ ಸಾಧ್ಯತೆ ಇದೆ. ಇದು ಕೇಂದ್ರ ಸರ್ಕಾರದ ಯೋಜನೆಯೇ ಅಲ್ಲ. ಆದರೂ ಕೇಂದ್ರ ಸರ್ಕಾರದ ಯೋಜನೆ ಎಂದು ಹಾಕಲಾಗುತ್ತಿದೆ. ಸರ್ಕಾರದಿಂದ ಯಾವುದೇ ಸುತ್ತೋಲೆ ಇಲ್ಲ. ಹೀಗಿರುವಾಗ ಯಾಕೆ ಅವಕಾಶ ನೀಡಬೇಕು ಎಂದು ಕಿಡಿಕಾರಿದರು.

ಗ್ಯಾಸ್‌ ಪೈಪ್‌ಲೈನ್‌ನನ್ನು ಕುಡಿಯುವ ನೀರಿನ ಪೈಪ್‌ ಮಾದರಿಯಲ್ಲಿ ಅಳವಡಿಸಲಾಗುತ್ತದೆ. ನಾಳೆ ಯಾರಾದರೂ ಗೊತ್ತಿಲ್ಲದೇ ರಸ್ತೆ ಅಗೆದರೆ ಅನಾಹುತ ಆಗುತ್ತದೆ. ಈಗಾಗಲೇ ಆಂಧ್ರದಲ್ಲಿ ಅನಾಹುತವಾಗಿರುವುದು ವರದಿಯಾಗಿದೆ. ಹೀಗಿದ್ದಾಗ್ಯೂ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲು ಯಾಕೆ ಅವಕಾಶ ನೀಡಬೇಕು? ಹಿಂದಿನ ಅಧ್ಯಕ್ಷರು ಮತ್ತು ಪೌರಾಯುಕ್ತ ಏಕಾಏಕಿ ಅನುಮತಿ ನೀಡಿದ್ದಾರೆ. ಸಭೆಯಲ್ಲಿ ಚರ್ಚೆಯೇ ಮಾಡಿಲ್ಲ ಎಂದು ವಿರೋಧಿಸಿದರು.

ಇದಕ್ಕೆ ಸದಸ್ಯರಾದ ರಾಜಶೇಖರ ಆಡೂರು, ಅಕ್ಬರ್‌ ಪಾಶಾ, ಅರುಣ ಅಪ್ಪುಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯ ಅಕ್ಬರ್‌ ಪಾಶಾ ಮಾತನಾಡಿ, ವೈಎಸ್‌ಆರ್‌ ಅವರು ಹೆಲಿಕಾಪ್ಟರ್‌ ದುರಂತದಲ್ಲಿ ಸತ್ತರು ಎಂದ ಮಾತ್ರಕ್ಕೆ ಹೆಲಿಕಾಪ್‌ಟರ್‌ನಲ್ಲಿ ಓಡಾಡುವುದನ್ನೇ ನಿಲ್ಲಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಆಂಧ್ರದಲ್ಲಿ ಅನಾಹುತವಾಗಿದೆ ಎಂದು ನಮ್ಮೂರಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವುದನ್ನು ಕೈಬಿಡುವುದು ಸರಿಯಲ್ಲ. ಈ ಹಿಂದೆ ಯಾವುದೇ ಯೋಜನೆಯನ್ನು ಜಾರಿ ಮಾಡುವ ವೇಳೆ ರಸ್ತೆ ಅಗೆದಿಲ್ಲವೇ ಎಂದರು. ನಾವು ಇದಕ್ಕೆ ಅವಕಾಶ ನೀಡುತ್ತೇವೆ. ಇದರಿಂದ ಜನರಿಗೆ ಅಗ್ಗದ ದರದಲ್ಲಿ ಗ್ಯಾಸ್‌ ಸಿಗುವುದಾದರೆ ಅನುಕೂಲವಾಗುತ್ತದೆ ಎಂದರು.

ಇದು ಸದಸ್ಯರ ನಡುವೆ ಕೋಲಾಹಲಕ್ಕೆ ಕಾರಣವಾಯಿತು. ಬೇಕು-ಬೇಡಗಳ ಮಧ್ಯೆ ಚರ್ಚೆ ತೀವ್ರವಾಗಿ ಕಾಂಗ್ರೆಸ್‌ ಸದಸ್ಯರಲ್ಲಿಯೇ ತೀವ್ರ ವಾಗ್ವಾದವಾಗಿ, ಕೈ ಕೈ ಮಿಲಾಯಿಸಿದರು.

ಸದಸ್ಯ ಅರುಣ ಅಪ್ಪು ಶೆಟ್ಟಿ ಮೇಲೆ ಸದಸ್ಯರಾದ ಅಮ್ಜಾದ್‌ ಪಟೇಲ್‌ ಮತ್ತು ಸಿದ್ದು ಮ್ಯಾಗೇರಿ ಅವರು ಕೈಮಾಡಲು ಮುಂದಾದಾಗ ಪರಸ್ಪರ ಕೈ ಕೈ ಮಿಲಾಯಿಸಲಾಯಿತು. ಇಷ್ಟೆಲ್ಲ ಆಗುತ್ತಿದ್ದರೂ ಅಧ್ಯಕ್ಷೆ ಶಿವಗಂಗಾ ಮತ್ತು ಉಪಾಧ್ಯಕ್ಷೆ ಆಯಿಷಾ ರೂಬಿಯಾ ಅವರು ಮಾತ್ರ ತಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆಯೇ ಇದ್ದರು. ತುರ್ತುಸಭೆಯಲ್ಲಿ ಸದಸ್ಯರು ತಮ್ಮ ತಮ್ಮಲ್ಲಿಯೇ ಚರ್ಚೆ ಮಾಡಿಕೊಂಡರು. ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದರು. ಆದರೆ, ಇವರು

ಮಾತ್ರ ಬಾಯಿ ಬಿಡಲೇ ಇಲ್ಲ.

ಕೊನೆಗೂ ಕೆಲವು ಸದಸ್ಯರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಕುರಿತು ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ದಾಖಲಿಸಲು ಸೂಚಿಸಿದಾಗ ಸದಸ್ಯರು ಅನಿಸಿಕೆಯನ್ನು ದಾಖಲಿಸಿದರು. ಆದರೆ, ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಯೋಜನೆಯ ಅನುಷ್ಠಾನದ ಕುರಿತು ಯಾವುದೇ ನಿರ್ಧಾರಕ್ಕೆ ಬರಲು ಆಗಲಿಲ್ಲ.

ನಗರಸಭೆ ಅಧ್ಯಕ್ಷೆ ಶಿವಗಂಗಮ್ಮ ಶಿವರಡ್ಡಿ ಭೂಮಕ್ಕನವರ, ಉಪಾಧ್ಯಕ್ಷೆ ಐಯಿಷಾ ರೂಬೀನಾ, ಪೌರಾಯುಕ್ತ ಎಚ್‌.ಎನ್‌. ಬಜೆಕ್ಕನವರ, ಅಭಿಯಂತರ ಶಿವಾನಂದರಡ್ಡಿ ಇತರರು ಇದ್ದರು.

ಕೊಪ್ಪಳ: ತುಂಗಭದ್ರಾ ಡ್ಯಾಂನಲ್ಲಿ ನೀರುಂಟು, ಬಿಡುವುದಕ್ಕೇನು ಗಂಟು?

ನಗರಸಭೆಯಲ್ಲಿ ಫಾರ್ಮ್‌- 3 ಮಾರಾಟ: ಆರೋಪ

ನಗರಸಭೆ ಸಭೆಯಲ್ಲಿ ಸದಸ್ಯ ಮುತ್ತುರಾಜ ಕುಷ್ಟಗಿ ಅವರು, ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಫಾರ್ಮ್‌ ನಂ. 3 ಸಮಸ್ಯೆ ಗಂಭೀರವಾಗಿದೆ. ಇದನ್ನು ಇತ್ಯರ್ಥ ಮಾಡುತ್ತಿಲ್ಲ. ಈ ನಡುವೆ ಸಿಬ್ಬಂದಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. .30 ಸಾವಿರ ಕೊಟ್ಟರೆ ಮನೆಗೆ ಹೋಗಿ ಫಾರ್ಮ್‌ ನಂ. 3 ಕೊಟ್ಟು ಬರುತ್ತಾರೆ. ಆದರೆ, ಸದಸ್ಯರು ಹೇಳಿದರೆ ಕಾನೂನು ಅಡ್ಡಿಯಾಗಿದೆ ಎನ್ನುತ್ತಾರೆ ಎಂದು ದೂರಿದರು. ಮರಣ ಪ್ರಮಾಣಪತ್ರ ಪಡೆಯಲು ಲಂಚ ಕೊಡಬೇಕು. ಅಂಗಡಿ ಪರವಾನಗಿ ಪಡೆಯಲು ಹಣ ಕೊಡಬೇಕು. ಇಂಥ ಕೆಟ್ಟ ಆಡಳಿತ ಎಲ್ಲಿಯೂ ನೋಡಿರಲಿಲ್ಲ. ನಮಗೆ ಇದರಿಂದ ಸಾಕಾಗಿದೆ ಎಂದು ಅಪಾದಿಸಿದರು.

ಫಾರ್ಮ್‌ ನಂ. 3 ಸಮಸ್ಯೆಯೇ ಇಲ್ಲ. ಪಕ್ಕದ ಗದಗ ಮತ್ತು ಹುಬ್ಬಳ್ಳಿಯಲ್ಲಿ ಕೊಡುತ್ತಿದ್ದಾರೆ. ಖಾತಾ ಎ ಕೊಡುವುದಕ್ಕೆ ಸಮಸ್ಯೆಯಿದ್ದರೂ ಖಾತಾ ಬಿ ಕೊಡುವುದಕ್ಕೆ ಅವಕಾಶ ಇದೆ. ದಂಡ ಪಾವತಿಸಿಕೊಂಡು ಕೊಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಅದನ್ನೂ ಮಾಡುತ್ತಿಲ್ಲ. ಆದರೆ, ಕಳ್ಳತನದಿಂದ ಮಾರಾಟ ಮಾಡುತ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು. ಇಷ್ಟಾದರೂ ಇದ್ಯಾವುದಕ್ಕೂ ಅಧಿಕಾಗಳು ಉತ್ತರ ನೀಡಲಿಲ್ಲ.

ಹಳೆಯ ಜೆಸಿಬಿ ಖರೀದಿ:

ಕೊಪ್ಪಳ ನಗರಸಭೆಯವರು 5 ವರ್ಷಗಳ ಹಳೆಯ ಜೆಸಿಬಿ ಖರೀದಿ ಮಾಡಿದ್ದಾರೆ. ಈಗ ಅದನ್ನು ದುರಸ್ತಿ ಮಾಡಿಸುವ ಕಾರ್ಯ ನಡೆದಿರುವ ಅಂಶ ಸಭೆಯಲ್ಲಿ ಬೆಳಕಿಗೆ ಬಂದಿತು. ಈ ಬಗ್ಗೆ ಖರೀದಿ ಮಾಡಿದವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು. 

click me!