ಅಡಕೆ ಬೆಲೆ ಭಾರೀ ಏರಿಕೆಯಾಗಿದ್ದು ಇದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ
ಮಂಗಳೂರು (ಅ.20): ಕೊರೋನಾ ಸಂಕಷ್ಟದ ಸಮಯದಲ್ಲಿ ಕರಾವಳಿ ಚಾಲಿ ಅಡಕೆಗೆ ಮಾರುಕಟ್ಟೆಯಲ್ಲಿ ದಾಖಲೆಯ ಧಾರಣೆ ಸಿಕ್ಕಿತ್ತು. ಇದೀಗ ಹೊಸ ಅಡಕೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಂಡುಬಂದಿದೆ.
ಹೊಸ ಅಡಕೆ ಖರೀದಿ ಆರಂಭವಾಗಿ ಹದಿನೈದು ದಿನಗಳು ಕಳೆದಿದ್ದು, ಪ್ರಸ್ತುತ ಈ ಅಡಕೆ ಕೆಜಿಗೆ 335 ರು. ದರದಲ್ಲಿ ಖರೀದಿ ಆಗುತ್ತಿದೆ. ಇದು ಹೊಸ ಕೊಯ್ಲಿನ ಅಡಕೆಗೆ ಇದುವರೆಗಿನ ಮಾರುಕಟ್ಟೆಯ ಗರಿಷ್ಠ ಧಾರಣೆ. ಖರೀದಿ ಆರಂಭವಾಗುವಾಗ 270 ರಿಂದ 275 ರು. ದರದಲ್ಲಿ ಖರೀದಿ ನಡೆಯುತ್ತಿತ್ತು. ಆದರೆ ಕಳೆದ ಹತ್ತೇ ದಿನದೊಳಗೆ 65 ರು. ಧಾರಣೆ ಏರಿಕೆಯಾಗಿ ಬೆಳೆಗಾರರು ಖುಷ್ ಆಗಿದ್ದಾರೆ.
ಪಾನ್ ಮಸಾಲಾ ಬ್ಯಾನ್ : ಅಡಕೆ ಬೆಳೆಗಾರರಿಗೆ ಕಾದಿದ್ಯಾ ಆಘಾತ ...
ಹಳೆ ಅಡಕೆಗೂ ಕುಗ್ಗಿಲ್ಲ ಡಿಮ್ಯಾಂಡ್: ಅಕ್ಟೋಬರ್ ತಿಂಗಳಿನಿಂದ ಹಳೆ ಅಡಕೆ ಎಂದು ಪರಿಗಣನೆಗೊಂಡಿರುವ ಅಡಕೆಗೆ ಕೆಜಿಗೆ 400 ಹಾಗೂ ಡಬ್ಬಲ್ ಚೋಲ್ ಅಡಕೆ ಕೆಜಿಗೆ 410 ರು. ದರವಿದೆ. ದೀಪಾವಳಿ ವೇಳೆಗೆ ಧಾರಣೆ ಇನ್ನಷ್ಟುಏರಿಕೆಯಾಗಬಹುದು ಎಂಬ ವಿಶ್ವಾಸದಲ್ಲಿ ಬೆಳೆಗಾರರಿದ್ದಾರೆ.
ಕೋವಿಡ್ 19 ಸೋಂಕು ಶುರುವಾದ ಮಾರ್ಚ್ ತಿಂಗಳ ಅಂತ್ಯ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಅಡಕೆ ಮಾರುಕಟ್ಟೆಸಂಪೂರ್ಣ ಬಂದ್ ಆಗಿತ್ತು. ಬಳಿಕ ಸರ್ಕಾರ ಅಡಕೆ ಮಾರುಕಟ್ಟೆತೆರೆಯಲು ಅವಕಾಶ ನೀಡಿದ್ದರೂ ಖರೀದಿಗೆ ವರ್ತಕರು ಮುಂದೆ ಬಂದಿರಲಿಲ್ಲ. ಈ ಹಂತದಲ್ಲಿ ಕ್ಯಾಂಪ್ಕೊ ಹಂತ ಹಂತವಾಗಿ ಅಡಕೆ ಖರೀದಿಗೆ ಮುಂದಾಗಿತ್ತು. ಅದಾದ ಬಳಿಕ ಅಡಕೆ ಮಾರುಕಟ್ಟೆಸಂಚಲನ ಮೂಡಿಸುತ್ತಿದೆ.