ಬೆಳೆಗಾರರನ್ನು ಕಂಗೆಡಿಸಿದ ಅರೇಬಿಕಾ ಕಾಫಿ ಬೆಲೆ ಕುಸಿತ

By Kannadaprabha NewsFirst Published Nov 20, 2023, 9:25 AM IST
Highlights

ಮಾರುಕಟ್ಟೆ ಆರಂಭವಾಗುವ ಹೊತ್ತಿನಲ್ಲಿ ಅರೇಬಿಕ ಕಾಫಿ ಧಾರಣೆಯಲ್ಲಿನ ತಲೆದೋರಿರುವ ಕುಸಿತ ಬೆಳೆಗಾರರ ಬೇಸರಕ್ಕೆ ಕಾರಣವಾಗಿದೆ.

  ಸಕಲೇಶಪುರ :  ಮಾರುಕಟ್ಟೆ ಆರಂಭವಾಗುವ ಹೊತ್ತಿನಲ್ಲಿ ಅರೇಬಿಕ ಕಾಫಿ ಧಾರಣೆಯಲ್ಲಿನ ತಲೆದೋರಿರುವ ಕುಸಿತ ಬೆಳೆಗಾರರ ಬೇಸರಕ್ಕೆ ಕಾರಣವಾಗಿದೆ.

ಈಗಾಗಲೇ ತಾಲೂಕಿನ ಹಲವೆಡೆ ಅರೇಬಿಕ ಕೊಯ್ಲು ಆರಂಭವಾಗಿದ್ದು ಮಾರುಕಟ್ಟೆ ಪ್ರವೇಶಿಸಲು ಸನ್ನದ್ಧವಾಗಿದೆ. ಈ ವೇಳೆಯಲ್ಲಿ ಅರೇಬಿಕ ಕಾಫಿ ಧಾರಣೆ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿರುವುದು ಸಹಜವಾಗಿಯೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ. ಸಾಮಾನ್ಯವಾಗಿ ತಾಲೂಕಿನಲ್ಲಿ ಆಗಸ್ಟ್ ಅಂತ್ಯದಿಂದಲೇ ಅರೇಬಿಕ ಕಾಫಿ ಕೊಯ್ಲು ಆರಂಭವಾಗುತ್ತಿದ್ದು ಅಕ್ಟೋಬರ್ ತಿಂಗಳಿನಲ್ಲಿ ವೇಗಪಡೆಯುವ ಕಾಫಿ ಕೊಯ್ಲು ನವಂಬರ್ ತಿಂಗಳ ಮೊದಲ ವಾರದ ಒಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತದೆ ಆದರೆ, ಮಾರುಕಟ್ಟೆ ಪ್ರವೇಶಿಸುವ ಈ ಹೊತ್ತಿನಲ್ಲಿ ಧಾರಣೆ ಕುಸಿದಿರುವುದು ನಿರಾಸೆಗೆ ಕಾರಣವಾಗಿದೆ.

ಭಾರಿ ಕುಸಿತ: ಕಳೆದ ಜೂನ್ ತಿಂಗಳಿನಲ್ಲಿ 50 ಕೆ.ಜಿ ಚರಿ ಧಾರಣೆ ಎಂಟು ಸಾವಿರದಿಂದ ೮೫೦೦ ರು.ಗಳಲ್ಲಿ ಸ್ಥಿರಗೊಂಡಿದ್ದರೆ, ಪಾರ್ಶ್ ಮೆಂಟ್ ಧಾರಣೆ ೧೬೦೦೦ ಸಾವಿರ ತಲುಪಿತ್ತು.

ಸದ್ಯದ ಮಾರುಕಟ್ಟೆಯಲ್ಲಿ ೫೦ ಕೆ.ಜಿ ಅರೇಬಿಕ ಚರಿ ಧಾರಣೆ6500 - 7000  ರು.ಗಳಾಗಿದ್ದರೆ, ಪಾರ್‍ಚುಮೆಂಟ್ ಧಾರಣೆ 10 .500 ರು.ಗಳಿಂದ 11 ಸಾವಿರ ರು.ಗಳಲ್ಲಿ ನೆಲೆಗೊಂಡಿದೆ. ಇದರಿಂದಾಗಿ ಪ್ರತಿ ಮೂಟೆ ಚರಿ ಕಾಫಿ ಬೆಲೆ 150 ರಿಂದ 200 ಸಾವಿರ ಕುಸಿತ ಕಂಡಿದ್ದರೆ ಅರೇಬಿಕ ಪಾರ್‍ಚುಮೆಂಟ್ ದರ ಬರೋಬರಿ 4500 ರು.ಗಳಿಂದ 5000 ಸಾವಿರದವರಗೆ ಪಾತಾಳ ಕಂಡಿದೆ.

ಏರಿಳಿತ ಕಾಣದ ರೋಬಸ್ಟ್: ಅರೇಬಿಕ ಕಾಫಿಗೆ ಹೊಲಿಸಿದರೆ ರೋಬಸ್ಟ್ ಕಾಫಿ ಧಾರಣೆಯಲ್ಲಿ ಹೆಚ್ಚಿನ ಏರಿಳಿತವಾಗದಾಗಿದ್ದು ಕಾಫಿ ಮಾರುಕಟ್ಟೆ ಮುಕ್ತಾಯದ ಹಂತದಲ್ಲಿ ೫೦ ಕೆ.ಜಿ ರೋಬಸ್ಟ್ ಪಾರ್‍ಚುಮೆಂಟ್ ಧಾರಣೆ 6500 ರು.ಗಳಿದ್ದರೆ ಪ್ರಸಕ್ತ ೫೮೦೦ ರೂಗಳಿಂದ ೬೨೦೦ ರು.ಗಳವರಗೆ ದರ ನಿಗದಿಯಾಗಿದೆ. ಸದ್ಯ ರೋಬಸ್ಟ್ ಕಾಫಿ ಮಾರುಕಟ್ಟೆ ಪ್ರವೇಶಕ್ಕೆ ಇನ್ನೂ ಎರಡು ತಿಂಗಳ ಕಾಲ ಅವಕಾಶವಿದ್ದು ಹಳೆಕಾಫಿ ಮಾತ್ರ ಮಾರುಕಟ್ಟೆಗೆ ಅಲ್ಲಲ್ಲಿ ಪ್ರವೇಶಿಸುತ್ತಿದೆ. ಸದ್ಯ ದರ ಕುಸಿತ ಅರೇಬಿಕ ಕಾಫಿ ಬೆಳೆಗಾರರಿಗೆ ಮಾತ್ರ ಯೋಚಿಸುವಂತೆ ಮಾಡಿದೆ.

ಬೆಲೆ ಕುಸಿತಕ್ಕೆ ಕಾರಣ: ಅರೇಬಿಕ ಕಾಫಿ ಅತಿಯಾಗಿ ಬೆಳೆಯುವ ಬ್ರೇಜಿಲ್ ದೇಶದಲ್ಲಿ ಈ ಬಾರಿ ಕಾಫಿ ಫಸಲು ಉತ್ತಮವಾಗಿದ್ದು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಕಾಫಿ ಬೆಲೆ ನಿಗದಿಪಡಿಸುವ ಲಂಡನ್ ಮಾರುಕಟ್ಟೆಯಲ್ಲಿ ಅರೇಬಿಕ ಬೆಲೆ ಕುಸಿದಿದೆ ಎಂಬುದು ಕಾಫಿ ವ್ಯಾಪಾರಿಗಳ ಹೇಳಿಕೆ.

ಅಚ್ಚುಮೆಚ್ಚು: ರೊಬಸ್ಟ್ ಕಾಫಿ ಬೆಳೆಗಿಂತ ಅರೇಭಿಕ ಕಾಫಿ ಬೆಳೆಯುವುದು ಸವಾಲಿನ ಕೆಲಸ. ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಗಳಿಲ್ಲದೆ ನೂರಾರು ವರ್ಷ ಬಧುಕುವ ರೋಬಸ್ಟ್ ಕಾಫಿಗಿಡಗಳನ್ನು ಸುಲಭವಾಗಿ ಬೆಳೆಯ ಬಹುದಾಗಿದೆ. ಆದರೆ, ಅರೇಭಿಕ ಕಾಫಿ ಬೆಳೆಯುವುದು ಸವಾಲಿನ ಕೆಲಸ. ನಿಗದಿತ ಕೆಲಸ ನಿರ್ಲಕ್ಷಿಸಿದರೆ ಮುಂದಿನ ವರ್ಷ ತೋಟಕ್ಕೆ ಕಾಲಿಡುವುದು ಅನವಶ್ಯಕ ಎಂಬಷ್ಟು ಸೂಕ್ಷ್ಮ ಬೆಳೆಯಾಗಿರುವ ಅರೇಬಿಕ ಕೇವಲ ಎರಡು ದಶಕದ ಬೆಳೆ. ಆದರೂ, ಅರೇಭಿಕಕಾಫಿ ಬಗ್ಗೆ ಇದರ ಹೆಚ್ಚಿನ ಧಾರಣೆಯಿಂದಾಗಿ ಕಾಫಿ ಬೆಳೆಗಾರರಿಗೆ ಅಚ್ಚುಮೆಚ್ಚು.

ಹೆಚ್ಚುಮಳೆಗೆ ಒಗ್ಗದು: ಹೆಚ್ಚು ಮಳೆ ಬೀಳುವ ತಾಲೂಕಿನ ಹೆತ್ತೂರು,ಯಸಳೂರು ಹಾಗೂ ಹಾನುಬಾಳ್ ಹೋಬಳಿಯ ಪಶ್ಚಿಮಘಟ್ಟದ ತೋಟಗಳಲ್ಲಿ ಅರೇಬಿಕ ಕಾಫಿ ದುಬಾರಿ. ಇಲ್ಲಿ ಕಾಫಿಗಿಡಗಳ ಬೆಳೆದರು ನಿರೀಕ್ಷಿದಷ್ಟು ಕಾಫಿ ಬಾರದಿರುವುದರಿಂದ ಅರೇಬಿಕ ಕಾಫಿ ಬಗ್ಗೆ ಅಕ್ಕರೆ ಇದ್ದರು ಅನಿವಾರ್ಯವಾಗಿ ಹೆಚ್ಚಿನ ಶೀತಾಂಶ ತಡೆಯುವ ಶಕ್ತಿಹೊಂದಿರುವ ರೊಬಸ್ಟ್ ಕಾಫಿ ಶೇ. ೯೮ರಷ್ಟು ಪ್ರದೇಶವನ್ನು ಅವರಿಸಿದೆ. ತಾಲೂಕಿನಲ್ಲಿ ಕಡಿಮೆ ಮಳೆ ಬೀಳುವ ಬೆಳಗೋಡು ಹೋಬಳಿಯಲ್ಲಿ ಮಾತ್ರ ಅರೇಬಿಕ ಕಾಫಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ದುಪ್ಪಟ್ಟು ದರ: ಕಳೆದ ಎರಡು ವರ್ಷದ ವರಗೆ ರೊಬಸ್ಟ್ ಕಾಫಿಗೆ ಹೋಲಿಸದರೆ ಅರೇಬಿಕ ಕಾಫಿ ಧಾರಣೆ ಎರಡರಷ್ಟು ದುಪ್ಪಟ್ಟಿತ್ತು. ಅರೇಬಿಕ ಪಾರ್‍ಚುಮೆಂಟ ದರ ೧೬೫೦೦ ರೂಗಳನ್ನು ತಲುಪಿ ಇತಿಹಾಸ ನಿರ್ಮಿಸಿದ್ದ ವೇಳೆ ರೊಬಸ್ಟ್ ಪಾರ್‍ಚುಮೆಂಟ ದರ ಎಂಟು ಸಾವಿರದಿಂದ ೯೦೦೦ ಸಾವಿರದ ಆಸುಪಾಸಿನಲ್ಲಿತ್ತು. ಇದರಿಂದಾಗಿ ತಾಲೂಕಿನ ಸಾಕಷ್ಟು ಬೆಳೆಗಾರರು ಅರೇಭಿಕ ಕಾಫಿ ಬೆಲೆಗೆ ಮಾರುಹೋಗಿ, ರೋಬಸ್ಟ್ ಕಾಫಿ ತೋಟ ನಾಶಪಡಿಸಿ ಅರೇಬಿಕ ಕಾಫಿ ತೋಟಗಳನ್ನಾಗಿ ಮಾರ್ಪಡಿಸಿದಂತಹ ಹಲವು ನಿದರ್ಶನಗಳು ತಾಲೂಕಿನಲ್ಲಿ ಕಂಡುಬಂದಿದ್ದವು.

ಮಳೆ ಬೇಡ: ತಾಲೂಕಿನಲ್ಲಿ ಅತಿಕನಿಷ್ಠ ಮಳೆಯಾಗಿದ್ದರು ಸದ್ಯ ಕಾಫಿ ಬೆಳೆ ಉಳಿವಿಗಾಗಿ ಮಳೆ ಬೇಡ ಎಂಬ ಮಾತುಗಳು ಬೆಳೆಗಾರರಿಂದ ಕೇಳಿ ಬರುತ್ತಿವೆ. ಸದ್ಯ ಅರೇಬಿಕ ಕಾಫಿಗಿಡದಲ್ಲಿ ಈಗಾಗಲೇ ಹಣ್ಣುಗಳು ಮೂಡುತ್ತಿದ್ದು ಸದ್ಯ ಮಳೆಯಾದರೆ ಹಣ್ಣುಗಳು ನೆಲ ಸೇರುತ್ತವೆ ಎಂಬ ಭಯ ಬೆಳೆಗಾರರಲಿದ್ದು ನಿರಂತರ ಮಳೆಯಾದರೆ ಕೊಳೆರೋಗ ತೋಟಗಳನ್ನು ಅವರಿಸಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ತಟ್ಟಲಿದೆ ಎಂಬ ಮಾತುಗಳಿದ್ದರೆ ರೋಬಸ್ಟ್ ಕಾಫಿ ಕಾಯಿ ಇನ್ನೂ ಬೀಜಮೂಡುವ ಹಂತದಲ್ಲಿರುವುದರಿಂದ ಅತಿಬೇಗ ಕೊಳೆರೋಗ ಅವರಿಸುತ್ತದೆ. ಆದ್ದರಿಂದ, ಕೆಲದಿನಗಳ ಕಾಲ ಮಳೆಬೇಡ ಎಂಬುದು ಬೆಳೆಗಾರರ ಮಾತುಗಳು.

ಸದ್ಯ ತಾಲೂಕಿನ ಅಲ್ಲಲ್ಲಿ ಅರೇಬಿಕ ಕಾಫಿ ಕೂಯಿಲು ಆರಂಭವಾಗಿದ್ದು ಕಾಫಿ ಮುರುಕಟ್ಟೆ ಪ್ರವೇಶಿಸುವ ವೇಳೆಯಲ್ಲಿ ಬೆಲೆ ಬಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ಸದ್ಯ ಕಾಫಿ ಮಾರಾಟ ಮಾಡಲು ತೊಂದರೆಯಾಗಿದೆ.

-ಕಾರ್ತಿಕ್, ಕಾಫಿ ಬೆಳೆಗಾರ, ಬ್ಯಾಕರವಳ್ಳಿ ಗ್ರಾಮ

ಲಂಡನ್ ಮಾರುಕಟ್ಟೆಯಲ್ಲಿನ ಧರ ಇಳಿಕೆ ಸದ್ಯ ಸ್ಥಳೀಯ ಮಾರುಕಟ್ಟೆಗೂ ತಟ್ಟಿದೆ.

ನಡಹಳ್ಳಿ ಕುಮಾರ್, ಕಾಫಿ ವ್ಯಾಪಾರಿ

click me!