ಕೊಬ್ಬರಿಗೆ 3 ಸಾವಿರ ಪ್ರೋತ್ಸಾಹ ಧನ ಪ್ರಕಟಿಸಿ: ಕೆಟಿಎಸ್‌

By Kannadaprabha News  |  First Published Feb 16, 2024, 10:15 AM IST

ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕೊಬ್ಬರಿಗೆ ಮೂರು ಸಾವಿರ ರು.ಗಳ ಪ್ರೋತ್ಸಾಹ ಧನ ಪ್ರಕಟಿಸುವ ಮೂಲಕ ನಾವು ರೈತರ ಪರ ಎಂಬುದನ್ನು ದಾಖಲೆಗಳ ಸಮೇತ ಸಾಬೀತು ಪಡಿಸುವಂತೆ ರೈತ ಮುಖಂಡ ಕೆ.ಟಿ. ಶಾಂತಕುಮಾರ್‌ ಒತ್ತಾಯಿಸಿದ್ದಾರೆ.


 ತುಮಕೂರು :  ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕೊಬ್ಬರಿಗೆ ಮೂರು ಸಾವಿರ ರು.ಗಳ ಪ್ರೋತ್ಸಾಹ ಧನ ಪ್ರಕಟಿಸುವ ಮೂಲಕ ನಾವು ರೈತರ ಪರ ಎಂಬುದನ್ನು ದಾಖಲೆಗಳ ಸಮೇತ ಸಾಬೀತು ಪಡಿಸುವಂತೆ ರೈತ ಮುಖಂಡ ಕೆ.ಟಿ. ಶಾಂತಕುಮಾರ್‌ ಒತ್ತಾಯಿಸಿದ್ದಾರೆ.

ನಗರದಲ್ಲಿ ಕೊಬ್ಬರಿಗೆ ಕ್ವಿಂಟಲ್‌ಗೆ 15 ಸಾವಿರ ಗೆ ಆಗ್ರಹಿಸಿ ರೈತ ಸಂಘ ಮತ್ತು ಆಯೋಜಿಸಿರುವ ತುಮಕೂರು ಬಂದ್ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಟೌನ್‌ಹಾಲ್ ಬಳಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡುತ್ತಿರುವ 1500 ರು.ಗಳಿಗೆ ಹೆಚ್ಚುವರಿಯಾಗಿ ಅಷ್ಟೇ ಹಣವನ್ನು ಪ್ರೋತ್ಸಾಹಧನವಾಗಿ ಘೋಷಿಸುವ ಮೂಲಕ ಸಂಕಷ್ಟದ ಲ್ಲಿರುವ ಸುಮಾರು 12 ಜಿಲ್ಲೆಗಳ ಕೊಬ್ಬರಿ ಬೆಳೆಗಾರರ ನೆರವಿಗೆ ಬರಬೇಕೆಂದರು.

Latest Videos

undefined

ಕೇಂದ್ರದ ಅನುಮೋದನೆಯಂತೆ ರಾಜ್ಯ ಸರ್ಕಾರ ನಫೆಡ್ ಮೂಲಕ ಖರೀದಿಸಲು ಹೊರಟಿದ್ದ ಕೊಬ್ಬರಿ ನೋಂದಣಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಸರ್ಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಶಾಮೀಲಾಗಿದ್ದಾರೆ. ವರ್ತಕರು, ದಲ್ಲಾಳಿಗಳು, ಸಾಗಾಟಗಾರರಿಂದ ಕೊಬ್ಬರಿ ಖರೀದಿಸಿ, ಕೇವಲ ನಾಲ್ಕು ದಿನದಲ್ಲಿ ನಿಗದಿ ಪಡಿಸಿದ 62500 ಮೆ.ಟ.ಖರೀದಿ ಮುಗಿದಿದೆ ಎಂದು ಹೇಳಿದ್ದಾರೆ. ಇದು ಶುದ್ಧ ಸುಳ್ಳು, ರೈತರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ. ಹಾಗಾಗಿ 62500 ಮೆ.ಟನ್‌ಗೆ ಬದಲಾಗಿದೆ 1.50 ಲಕ್ಷ ಮೆ.ಟ.ಖರೀದಿಗೆ ರಾಜ್ಯ ಸರ್ಕಾರ ಅನುಮೋದನೆ ಪಡೆದುಕೊಳ್ಳಬೇಕು. ಹಾಗೆಯೇ ಎಫ್.ಎ.ಕ್ಯೂನನ್ನು 75 ಎಂ.ಎಂ.ಗೆ ಬದಲಾಗಿ 50 ಎಂ.ಎಂ.ಗೆ ಇಳಿಸಬೇಕು ಎಂದು ಕೆ.ಟಿ. ಶಾಂತಕುಮಾರ್‌ ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಎಂಎಸ್‌ಪಿಗೆ ಕಾಯ್ದೆ ತರಬೇಕೆಂದು ಹೋರಾಟ ನಡೆಸುತ್ತಿರುವ ರೈತರ ಪರವಾಗಿ ಮಾತನಾಡುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ಗಾಂಧಿ ಅವರು, ರಾಜ್ಯದಲ್ಲಿ ಮಾತ್ರ ಅತಿ ಕಡಿಮೆ ಬೆಲೆಗೆ ಕೊಬ್ಬರಿ ಖರೀದಿಸುತ್ತಿದ್ದರೂ ಇದುವರೆಗೂ ಮಾತನಾಡಿಲ್ಲ. ರೈತರ ನಿರಂತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ಆದರೆ ಚುನಾವಣೆ ಪೂರ್ವದಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವ ವಾಗ್ಧಾನ ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದರೂ ಇದುವರೆಗೂ ವಾಪಸ್ ಪಡೆದಿಲ್ಲ. ಇದು ರೈತಪರ ಸರ್ಕಾರವೇ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.

ಫೆ.5 ರಿಂದ ರಾಜ್ಯದಲ್ಲಿ ನಫೆಡ್ ಮೂಲಕ ಖರೀದಿಸಿರುವ ಕೊಬ್ಬರಿಗೆ ರಾಜ್ಯ ಸರ್ಕಾರ ನೀಡುವ ಬೆಂಬಲ ಬೆಲೆ 92ರಿಂದ 105 ಕೋಟಿಯಷ್ಟು ಆಗಬಹುದು. ಆದರೆ ರೈತರ ಬಳಿ ಇನ್ನೂ ಸಾವಿರಾರು ಕ್ವಿಂಟಲ್ ಕೊಬ್ಬರಿ ಇದೆ. ಹಾಗಾಗಿ ಹೆಚ್ಚುವರಿ ಖರೀದಿಗೆ ಸರ್ಕಾರ ಕೇಂದ್ರದೊಂದಿಗೆ ಮಾತುಕತೆ ನಡೆಸಬೇಕು. ಹಾಗೆಯೇ ಕೇರಳ, ತಮಿಳುನಾಡಿನಲ್ಲಿ ಇರುವಂತೆ ರಾಜ್ಯದಲ್ಲಿಯೇ 70 ಎಂ.ಎಂ.ಗಿಂತ ಕಡಿಮೆ ಗಾತ್ರ ಇರುವ ಕೊಬ್ಬರಿಯನ್ನು ಮಿಲ್ಲಿಂಗ್ ಕೊಬ್ಬರಿ ವಿಭಾಗದಲ್ಲಿ ಖರೀದಿಸಲು ಕೇಂದ್ರಕ್ಕೆ ಪತ್ರ ಬರೆದು ಅನುಮತಿ ಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಸಂಘ ಮತ್ತು ಹಸಿರುವ ಸೇನೆಯ ಜಿಲ್ಲಾಧ್ಯಕ್ಷ ಧನಂಜಯಾ ಆರಾಧ್ಯ, ಬಿ.ಎಸ್.ಪಿ.ಯ ರಾಜಸಿಂಹ, ಹನುಮಂತರಾಯಪ್ಪ, ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಎಎಪಿಯ ಕರಿಗೌಡ, ರುಕ್ಸಾನ್‌ಭಾನು, ಮಧುಸೂಧನ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ನಗರದ ಸ್ವಾತಂತ್ರ ಚೌಕದಿಂದ ಹೊರಟ ರೈತರ ಮೆರವಣಿಗೆ ಮಂಡಿಪೇಟೆ ಮುಖ್ಯರಸ್ತೆ ಮೂಲಕ ಕಾಲ್‌ಟ್ಯಾಕ್ಸ್ ಸರ್ಕಲ್, ಬಿ.ಜಿ. ಸರ್ಕಲ್, ಭದ್ರಮ್ಮ ಸರ್ಕಲ್, ಎಂ.ಜಿ. ರಸ್ತೆ ಮೂಲಕ ಟೌನ್ ಹಾಲ್‌ಗೆ ಬಂದು, ಜಿಲ್ಲಾಧಿಕಾರಿಗಳ ಕಚೇರಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಯಿತು.

ತೆಂಗಿನ ನೀರಾದಿಂದ ಸ್ಪಿರಿಟ್‌ ತಯಾರಿಕೆ: ಎಚ್ಚರಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕೊಬ್ಬರಿಗೆ ಸರಿಯಾದ ಬೆಂಬಲ ಬೆಲೆ ನೀಡದಿದ್ದರೆ 2001 ರಲ್ಲಿ ರೈತರು ತೆಂಗಿಗೆ ನೀರಾ ಕಟ್ಟಿದಂತೆ, ಇಂದು ನೀರಾದಿಂದ ಸ್ಪೀರಿಟ್ ಉತ್ಪಾದನೆ ಮಾಡಲು ಮುಂದಾಗಬೇಕಾಗುತ್ತದೆ. ಈಗಾಗಲೇ ಶ್ರೀಲಂಕಾದಲ್ಲಿ ತೆಂಗಿನ ನೀರಾದಿಂದ ಅತ್ಯುತ್ತಮ ಸಾವಯವ ಸ್ಪಿರೀಟ್ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಅಲ್ಲಿನ ಸರ್ಕಾರವೂ ಮಾರಾಟಕ್ಕೆ ಅನುಮೋದನೆ ನೀಡಿದೆ. ಸಕ್ಕರೆಯಿಂದ ತಯಾರಿಸುವ ಸ್ಪಿರೀಟ್‌ಗಿಂತ ತೆಂಗಿನ ನೀರಾದಿಂದ ತಯಾರಿಸುವ ಲಿಕ್ಕರ್‌ ಅತ್ಯುತ್ತಮವಾಗಿದ್ದು, ಸರ್ಕಾರವೇ ಅನಿವಾರ್ಯವಾಗಿ ರೈತರನ್ನು ಲಿಕ್ಕರ್‌ ತಯಾರಿಸಲು ದೂಡಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ಎಚ್ಚರಿಕೆ ನೀಡಿದರು.

 ಕೊಬ್ಬರಿ ನೋಂದಣಿಯಲ್ಲಿ ಅವ್ಯವಹಾರ ಶಂಕೆ

ನಫೆಡ್‌ನ ಮೂಲಕ ಕೊಬ್ಬರಿ ಖರೀದಿಗೆ ನೋಂದಾಯಿಸುವ ವೇಳೆ ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆ ಇದೆ. ಸರ್ಕಾರ ಕೂಡಲೇ ತನಿಖೆ ಕೈಗೊಂಡು, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದರ ಜೊತೆಗೆ, ಮತ್ತಷ್ಟು ಖರೀದಿಗೆ ರೈತರ ಹೆಸರು ನೋಂದಾಯಿಸಲು ಮುಂದಾಗಬೇಕು. ರಾಜ್ಯದಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆ ತುಮಕೂರು. ಆದರೆ ನೋಂದಣಿ ನೋಡಿದರೆ ಕಡಿಮೆ ಇದೆ. ಹಾಸನ, ಮಂಡ್ಯದಲ್ಲಿ ಹೆಚ್ಚಾಗಿದೆ. ಹಾಗಾಗಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಲಿದೆ ಎಂದು ರೈತ ಮುಖಂಡ ಕೆ.ಟಿ. ಶಾಂತಕುಮಾರ್‌ ಆರೋಪಿಸಿದರು.

click me!