ಮರ್ಡರ್ ಆಗಿದೆ ಅಂತಾ ಪೊಲೀಸರಿಗೇ ಟೆನ್ಶನ್ ಕೊಟ್ಟ ಮಾನಸಿಕ‌ ಅಸ್ವಸ್ಥ: ನಂತರ ಆಗಿದ್ದೇನು?

By Govindaraj S  |  First Published Jun 22, 2024, 5:41 PM IST

ವ್ಯಕ್ತಿಯ ಕರೆಯ ಹಿನ್ನೆಲೆ ಪೊಲೀಸರು ತುರ್ತಾಗಿ ಸ್ಥಳಕ್ಕೆ ತೆರಳಿ ಶವದ ಹುಡುಕಾಟ ಕೂಡಾ ನಡೆಸಿದ್ದರು. ಅದರೆ, ಕೊನೆಗೆ ಪೊಲೀಸರಿಗೆ ತಿಳಿದು ಬಂದದ್ದು ದೂರು ನೀಡಿದ ವ್ಯಕ್ತಿ ಮಾನಸಿಕ‌ ಅಸ್ವಸ್ಥನೆಂದು. 


ಉತ್ತರ ಕನ್ನಡ (ಜೂ.22): ತನ್ನ ಪತ್ನಿ ಹಾಗೂ ಮಗಳನ್ನು ಯಾರೋ ಮರ್ಡರ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿ ಕೊಲೆಗಡುಕರನ್ನು ಬಂಧಿಸುವಂತೆ 112 (ಪೊಲೀಸ್ ಸಹಾಯವಾಣಿಗೆ) ಕರೆ ಮಾಡಿ ಗೋಗೆರೆದಿದ್ದ ಮಾನಸಿಕ  ಅಸ್ವಸ್ಥನ ಮಾತು ನಂಬಿ ಪೊಲೀಸರೇ ಪೇಚಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ  ತಾಲೂಕಿನ ಹಿಲ್ಲೂರಿನ ಬಿಲ್ಲನಬೈಲ‌್‌ನಲ್ಲಿ ನಡೆದಿದೆ. ವ್ಯಕ್ತಿಯ ಕರೆಯ ಹಿನ್ನೆಲೆ ಪೊಲೀಸರು ತುರ್ತಾಗಿ ಸ್ಥಳಕ್ಕೆ ತೆರಳಿ ಶವದ ಹುಡುಕಾಟ ಕೂಡಾ ನಡೆಸಿದ್ದರು. ಅದರೆ, ಕೊನೆಗೆ ಪೊಲೀಸರಿಗೆ ತಿಳಿದು ಬಂದದ್ದು ದೂರು ನೀಡಿದ ವ್ಯಕ್ತಿ ಮಾನಸಿಕ‌ ಅಸ್ವಸ್ಥನೆಂದು. 

ಶುಕ್ರವಾರ ಸಂಜೆ 5-30 ರ ಸುಮಾರಿಗೆ 112 ಕರೆ ಮಾಡಿದ ಮಾನಸಿಕ ಅಸ್ವಸ್ಥ, "ನಾನು ಹಿಲ್ಲೂರಿನ ಬಿಲ್ಲನ ಬೈಲನ ಮಂಜುನಾಥ ಬೊಮ್ಮಯ್ಯ ನಾಯಕ ಅಂತಾ. ಇಲ್ಲಿ ನನ್ನ ಪತ್ನಿ ಹಾಗೂ ಮಗಳನ್ನು ಯಾರೋ ಭೀಕರವಾಗಿ ಕೊಲೆ ಮಾಡಿ ತೆರಳಿದ್ದಾರೆ. ನನಗೇಕೋ ಹೆದರಿಕೆ ಆಗ್ತಾ ಇದೆ. ಕೂಡಲೇ ಸ್ಥಳಕ್ಕೆ ಬರುವಂತೆ ಪೊಲೀಸರಲ್ಲಿ ವಿನಂತಿಸಿದ್ದ. ಕೂಡಲೇ  ಕಾರವಾರದಿಂದ ವೈಯರ್ ಲೆಸ್ ಮೂಲಕ ಕೂಡಲೇ ಹಿಲ್ಲೂರಿಗೆ ತೆರಳಿ ತನಿಖೆ ನಡೆಸುವಂತೆ ಆದೇಶ ಬಂದಿತ್ತು. ಮಾಹಿತಿ ಸ್ವೀಕರಿಸಿದ ಪಿಎಸೈ ಉದ್ಧಪ್ಪ ಧರೆಪ್ಪನವರ್, ಎಎಸೈ ಲಲಿತಾ ರಜಪೂತ್ ಹಾಗೂ ಸಿಬ್ಬಂದಿ ಪ್ರವೀಣ ಪೂಜಾರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ, ಜೀಪನ್ನೇರಿ ತಾಲೂಕು ಕೇಂದ್ರದಿಂದ 37 ಕಿ.ಮೀ. ಅಂತರವಿರುವ ಹಿಲ್ಲೂರಿಗೆ ತೆರಳಿದ್ದರು. 

Latest Videos

undefined

ಕರೆ ಬಂದ 25 ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಮಂಜುನಾಥ ಬೊಮ್ಮಯ್ಯ ನಾಯಕ ಅವರ ಮನೆಯ ಸುತ್ತಮುತ್ತ ಶವದ ಹುಡುಕಾಟ ನಡೆಸಿದ್ದರು. ಆದರೆ, 15 ನಿಮಿಷ ಕಳೆದರೂ ಶವ ಪತ್ತೆ ಆಗದೆ ಹೋದಾಗ ಅಲ್ಲಿ ಮುಗುಳು ನಗುತ್ತಲೇ ಬಂದ ಮಂಜುನಾಥ ನಾಯಕ, ನಿಮಗೆ ನನ್ನ ಪತ್ನಿ ಹಾಗೂ ಮಗಳ ಶವ ಸಿಕ್ಕಿತೆ..? ಎಂದು ಪೊಲೀಸರಲ್ಲಿ ಪ್ರಶ್ನಿಸಿದ್ದಾನೆ. ಅದು ಸಿಗಲ್ಲಾ ಬಿಡಿ ಅವರು ಮುಂದೆ ಕೊಲೆ ಆದರೂ ಆಗಬಹುದು. ನಾನೇ ಮುನ್ನೆಚ್ಚರಿಕೆಯಾಗಿ ಕರೆ ಮಾಡಿದ್ದೆ. ಅವರು ಮನೆಯಲ್ಲಿ ಕಾಣ್ತಾ ಇಲ್ಲಾ. ಹಾಗಾಗಿ ಸುಳ್ಳು ಕರೆ ಮಾಡಿದ್ದೆ ಎಂದು ಪೊಲೀಸರ ಮುಂದೆ ಹಲ್ಲು ಕಿರಿದು ನಕ್ಕಿದ್ದಾನೆ. ಈತನ ಮಾತು ಕೇಳಿ ಪಿತ್ತ ನೆತ್ತಿಗೆ ಏರಿದ ಪೊಲೀಸರು ಈತನಿಗೆ ಎರಡು ಬಿಗಿಯುವ ಮೂಲಕ ಸರಿಯಾಗಿ ಲಾಠಿಯ ರುಚಿ ತೋರಿಸಿದ್ದಾರೆ. 

'ನಾಡಪ್ರಭು ಕೆಂಪೇಗೌಡ' ಚಿತ್ರದಿಂದ ದರ್ಶನ್ ಔಟ್: ನಟ ರಾಕ್ಷಸನಿಗೆ ಚಾನ್ಸ್ ಕೊಟ್ಟ ನಾಗಾಭರಣ!

ಡಬಲ್ ಮರ್ಡರ್ ಪ್ರಕರಣವೆಂದು ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಕೂಡಾ ಅಂಕೋಲಾಕ್ಕೆ ವಾಹನದಲ್ಲಿ ಆಗಮಿಸುತ್ತಿತ್ತು. ಆದರೆ, ಇಂತಹ ಪ್ರಕರಣ ನಡೆದಿಲ್ಲ ಎಂದು ಮರು ಮಾಹಿತಿ ಅಂಕೋಲಾ ಪೊಲೀಸರಿಂದಲೇ ಬಂದ ಹಿನ್ನೆಲೆ ಬಿಣಗಾದಿಂದಲೇ ಶ್ವಾನದಳ, ಬೆರಳಚ್ಚು ತಜ್ಞರ ತಂಡ ವಾಪಸ್ ತೆರಳಿತ್ತು. ಅಂದಹಾಗೆ, ಹಿಲ್ಲೂರು ಗ್ರಾಮದಲ್ಲಿ ಕೊಲೆಯಾಗಿದೆ ಎಂಬ ವಿಷಯ ತಿಳಿದ ಕೂಡಲೇ ಸ್ಥಳೀಯ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ, ಈತನ ಮನೆಯವರು ಆತ ಮಾನಸಿಕ ಅಸ್ವಸ್ಥನಾಗಿ ಕಳೆದೊಂದು ವರ್ಷದಿಂದ ಹೀಗೆ ಮಾಡುತ್ತಿದ್ದಾನೆ. ಈತನ ಕಿರುಕುಳದಿಂದ ಬೇಸತ್ತು ಪತ್ನಿ– ಮಕ್ಕಳು ಬೇರೆ ಮನೆಯಲ್ಲಿ ವಾಸ ಮಾಡ್ತಾ ಇದ್ದಾರೆ ಎಂದು ತಿಳಿಸಿದ್ದಾರೆ. ಈತ ಮಾನಸಿಕ ಅಸ್ವಸ್ಥ ಎಂದು ತಿಳಿದ ಪೊಲೀಸರು ಉಸ್ಸಪ್ಪಾ... ಎಂದು ಅಂಕೋಲಾ ಠಾಣೆಯತ್ತ ಮುಖ ಮಾಡಿದ್ದಾರೆ.

click me!