ಬೆಂಗಳೂರು: 2ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ಕಾರ್ಯಕರ್ತೆಯರ ಧರಣಿ

By Kannadaprabha NewsFirst Published Jan 25, 2023, 8:22 AM IST
Highlights

ಸಿಐಟಿಯು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರಿ ಆದೇಶ ಹೊರಬೀಳುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು(ಜ.25):  ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಎರಡನೇ ದಿನವೂ ಅನಿರ್ಧಿಷ್ಟಾವಧಿ ಬೃಹತ್‌ ಧರಣಿ ಮುಂದುವರೆಸಿರುವ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಫ್ರೀಡಂ ಪಾರ್ಕ್‌ನಲ್ಲೇ ಗಣರಾಜ್ಯೋತ್ಸವ ಆಚರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಫ್ರೀಡಂ ಪಾರ್ಕ್‌ನಲ್ಲಿ ಸಿಐಟಿಯು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿರುವ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆ ಬಗ್ಗೆ ಸರ್ಕಾರಿ ಆದೇಶ ಹೊರಬೀಳುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷೆ ಎಸ್‌.ವರಲಕ್ಷ್ಮಿ, ‘ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಆದೇಶ ಹೊರಬೀಳುವವರೆಗೂ ಹೋರಾಟ ನಿಲ್ಲುವುದಿಲ್ಲ. ನಾವು ತೀವ್ರ ಹೋರಾಟಕ್ಕೆ ಸಿದ್ಧವಾಗಿಯೇ ಆಗಮಿಸಿದ್ದೇವೆ. ಡಿ.25 ರೊಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಫ್ರೀಡಂ ಪಾರ್ಕ್‌ನಲ್ಲೇ ಸಮವಸ್ತ್ರ ಧರಿಸಿ ಸಾವಿರಾರು ಕಾರ್ಯಕರ್ತೆಯರು ಗಣರಾಜ್ಯೋತ್ಸವ ಆಚರಿಸಲಿದ್ದಾರೆ’ ಎಂದು ಖಚಿತಪಡಿಸಿದರು.

ಬೆಂಗ್ಳೂರಲ್ಲಿ ಮತ್ತೆ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ: ಮೈ ಕೊರೆಯುವ ಚಳಿಯಲ್ಲಿ ಅಹೋರಾತ್ರಿ ಧರಣಿ

ಏಕಾಏಕಿ ಪ್ರತಿಭಟನೆ ಮಾಡುತ್ತಿಲ್ಲ: 

ನಾವು ಏಕಾಏಕಿ ಪ್ರತಿಭಟನೆ ನಡೆಸುತ್ತಿಲ್ಲ. ಡಿ.17 ರಂದೇ ಪೊಲೀಸ್‌ ಇಲಾಖೆಯಿಂದ ಪ್ರತಿಭಟನೆಗೆ ಅನುಮತಿ ಪಡೆದಿದ್ದೇವೆ. ಜ.3 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರತಿಭಟನೆ ನಡೆಸುವ ಬಗ್ಗೆ ನೋಟಿಸ್‌ ನೀಡಿದ್ದೇವೆ. ಆದ್ದರಿಂದ ಸರ್ಕಾರ ತಕ್ಷಣ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ ಆದೇಶದಂತೆ ಗ್ರಾಚ್ಯುಟಿ ನೀಡಬೇಕು. ಎಲ್ಲ ಇಲಾಖೆಗಳ ಕೆಲಸಗಳಿಗೆ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು. ಕಾರ್ಯಕರ್ತೆಯರನ್ನು ಶಿಕ್ಷಕರಿಯರು ಎಂದು ಕರೆಯಬೇಕು. ಸಮಯಕ್ಕೆ ಸರಿಯಾಗಿ ವೇತನ ನೀಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.

ಕುಡಿವ ನೀರು, ಶೌಚಕ್ಕೂ ತೊಂದರೆ

ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಗಮಿಸಿ ಫ್ರೀಡಂ ಪಾರ್ಕ್ನಲ್ಲಿ ಕೊರೆವ ಚಳಿಯಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದು ಮಹಿಳೆಯರು ಸಮರ್ಪಕ ಶೌಚಾಲಯ ವ್ಯವಸ್ಥೆಯಿಲ್ಲದೇ ಸಂಕಷ್ಟಅನುಭವಿಸುತ್ತಿದ್ದಾರೆ. ಫ್ರೀಡಂ ಪಾರ್ಕ್‌ನ ಒಳಗೆ ಬಹಳ ಕಡಿಮೆ ಸಂಖ್ಯೆಯಲ್ಲಿ ಶೌಚಾಲಯಗಳಿದ್ದು ಶುಚಿತ್ವವೇ ಇಲ್ಲವಾಗಿದೆ. ಇದರ ನಡುವೆಯೂ ಮಹಿಳೆಯರು ಮೂಗು ಮುಚ್ಚಿಕೊಂಡು ಶೌಚಾಲಯದತ್ತ ತೆರಳಬೇಕಾಗಿದೆ. ಚಿಕ್ಕ ಮಕ್ಕಳನ್ನೂ ಜೊತೆಯಲ್ಲಿಯೇ ಕರೆದುಕೊಂಡು ಬಂದವರ ಸ್ಥಿತಿಯಂತೂ ಹೇಳತೀರದಾಗಿದೆ. ಕುಡಿಯುವ ನೀರು, ಊಟ-ತಿಂಡಿಗೂ ಕಾರ್ಯಕರ್ತೆಯರು ಪರದಾಡುತ್ತಿದ್ದುದು ಕಂಡು ಬಂತು.

click me!