ನಕ್ಸಲ್‌ ನಿಗ್ರಹ ಪಡೆಯಿಂದ ಉದ್ಯೋಗ ಮಾಹಿತಿ

By Kannadaprabha NewsFirst Published Jun 30, 2020, 3:23 PM IST
Highlights

ಚಿಕ್ಕಮಗಳೂರು ನಕ್ಸಲ್‌ ನಿಗ್ರಹ ಪಡೆಯು ಮಕ್ಕಿಕೊಪ್ಪ, ಅಗಳಗಂಡಿ, ಗಡಿಕಲ್‌, ಹೆಗ್ಗಾರುಕುಡಿಗೆ, ಮೇಗೂರು, ಕಾರೆಮನೆ, ಕಲ್ಲುಗುಡ್ಡೆ, ಕೊಗ್ರೆ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ನಿರುದ್ಯೋಗಿ ಯುವಕರನ್ನು ಭೇಟಿ ಮಾಡಿ, ಅಗ್ನಿಶಾಮಕ ಇಲಾಖೆಯ ವಿವಿಧ ಹುದ್ದೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕೊಪ್ಪ(ಜೂ.30): ನಕ್ಸಲ್‌ ನಿಗ್ರಹ ಪಡೆ ಕ್ಯಾಂಪ್‌ ವತಿಯಿಂದ ಇತ್ತೀಚೆಗೆ ತಾಲೂಕಿನ ಮೇಗುಂದಾ ಹೋಬಳಿಯ ವಿವಿಧ ಸ್ಥಳಗಳಲ್ಲಿ ಉದ್ಯೋಗ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದಲ್ಲಿ ನಕ್ಸಲ್‌ ನಿಗ್ರಹ ಪಡೆಯು ಮಕ್ಕಿಕೊಪ್ಪ, ಅಗಳಗಂಡಿ, ಗಡಿಕಲ್‌, ಹೆಗ್ಗಾರುಕುಡಿಗೆ, ಮೇಗೂರು, ಕಾರೆಮನೆ, ಕಲ್ಲುಗುಡ್ಡೆ, ಕೊಗ್ರೆ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ನಿರುದ್ಯೋಗಿ ಯುವಕರನ್ನು ಭೇಟಿ ಮಾಡಿ, ಅಗ್ನಿಶಾಮಕ ಇಲಾಖೆಯ ವಿವಿಧ ಹುದ್ದೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಪ್ರಸ್ತುತ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಸುಮಾರು 36 ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ, ಸುಮಾರು 1222 ಅಗ್ನಿಶಾಮಕರು, ಸುಮಾರು 227 ಚಾಲಕ ಹುದ್ದೆಗಳು, ಸುಮಾರು 82 ಚಾಲಕ ತಂತ್ರಜ್ಞರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳಿಗೆ ಇದೇ ಜೂನ್‌ 22ರಿಂದ ಜುಲೈ 20 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಗ್ನಿಶಾಮಕ ಠಾಣಾಧಿಕಾರಿಗಳಿಗೆ ವಿಜ್ಞಾನ ವಿಷಯದಲ್ಲಿ ಪದವಿ ಆಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ ವಯರ್ಷ 26 ವರ್ಷವಿದ್ದು, ಉಳಿದ ಹುದ್ದೆಗಳಿಗೆ 18ರಿಂದ 26 ವರ್ಷ ವಯಸ್ಸು ಹಾಗೂ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು.

ಕ್ವಾರಂಟೈನ್ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ ಸರ್ಕಾರ..!

ಯುವಕರಿಗೆ ಅಗ್ನಿಶಾಮಕ ಹುದ್ದೆಗೆ ಕರಪತ್ರಗಳನ್ನು ವಿತರಿಸಿದ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ಮಾತನಾಡಿ, ಪೊಲೀಸ್‌ ಹಾಗೂ ಅಗ್ನಿಶಾಮಕ ಇಲಾಖೆಯಲ್ಲಿ ಪ್ರಸ್ತುತ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ನಿರುದ್ಯೋಗಿ ಯುವಕರಿಗೆ ಇದು ಸದವಕಾಶವಾಗಿದೆ. ಯುವಕರು ಇದನ್ನು ಸದುಪಯೋಗಪಡಿಸಿಕೊಂಡು, ದೇಶ ಸೇವೆಯಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಈ ಹುದ್ದೆಗಳಿಗೆ ಅರ್ಜಿ ಹಾಕುವ ಬಗ್ಗೆ ಎಎನ್‌ಎಫ್‌ ಸಿಬ್ಬಂದಿ ಸಂಪೂರ್ಣ ಮಾಹಿತಿ ನೀಡಿ, ಪ್ರತಿ ಹಂತದಲ್ಲಿಯೂ ಸಹಕರಿಸಲಿದ್ದಾರೆ. ಸಾರ್ವಜನಿಕರು ಸಹ ಉದ್ಯೋಗವಕಾಶದ ಬಗ್ಗೆ ವ್ಯಾಪಕ ಸ್ಥಳೀಯವಾಗಿ ಪ್ರಚುರಪಡಿಸಿ, ಯುವಕರಿಗೆ ಮಾರ್ಗದರ್ಶನ ನೀಡಬೇಕು. ಅರ್ಜಿ ಸಲ್ಲಿಸಲು ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಪಡೆಯಬಹುದು ಎಂದರು.

ಎಎನ್‌ಎಫ್‌ ಪಿಎಸ್‌ಐ ಅಹಮದ್‌ ಸಂಗಾಪುರ್‌ ಮಾತನಾಡಿ, ನಕ್ಸಲ್‌ ನಿಗ್ರಹ ಪಡೆ ವತಿಯಿಂದ ವಿವಿಧ ಸರ್ಕಾರಿ ಉದ್ಯೋಗಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ನೀಡುತ್ತಿದ್ದು, ಈವರೆಗೆ ಹಲವು ಹುದ್ದೆಗೆ ಯುವಕರಿಂದ ಅರ್ಜಿ ಸಲ್ಲಿಸಲಾಗಿದೆ. ಯುವಕರಿಗೆ ಲಿಖಿತ ಪರೀಕ್ಷೆ ಬರೆಯಲು ಕಾರ್ಯಾಗಾರ ಸಹಾ ಈ ಹಿಂದೆ ಯಶಸ್ವಿಯಾಗಿ ನಡೆಸಲಾಗಿದೆ ಎಂದರು. ಯುವಕರು ಯಾವುದೇ ಉದ್ಯೋಗವಕಾಶದ ಬಗ್ಗೆ ಹೆಚ್ಚಿನ ಮಾಹಿತಿಗೆ ಎಎನ್‌ಎಫ್‌ ಸಿಬ್ಬಂದಿ ಅಶೋಕ್‌, ರವಿ, ಗಿರೀಶ್‌ ಅವರನ್ನು ದೂ: 94492 06774 ಇಲ್ಲಿಗೆ ಸಂಪರ್ಕಿಸಬಹುದು ಎಂದರು.
 

click me!