
ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯದಲ್ಲಿ ಮೂರನೇ ದಿನ ಅಪರೂಪದ ಹಾಗೂ ಐತಿಹಾಸಿಕ ಮಹತ್ವದ ಕಲ್ಲಿನ ಕಲಾಕೃತಿ ಪತ್ತೆಯಾಗಿದೆ. ಈ ಹಿಂದೆ ಎರಡನೇ ದಿನ ಶಿವಲಿಂಗದ ಪೀಠ ಮತ್ತೆಯಾಗಿತ್ತು. ಇದೀಗ ಮೂರನೇ ದಿನ ಪುಟ್ಟ ಶಿವಲಿಂಗ ಮತ್ತು ಉತ್ಖನನ ಜಾಗದಲ್ಲಿ ನಾಗರ ಹಾವಿನ ಹೆಡೆ ಹಾಗೂ ನಾಗ ಮಣಿಯೊಂದಿಗೆ ಕೆತ್ತಿದ ಶಿಲಾಕೃತಿ ಪತ್ತೆಯಾಗಿದ್ದು, ಇದು ಪ್ರಾಚೀನ ಕಾಲದ ನಾಗರ ಕಲ್ಲಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಗದಗ ತಾಲೂಕಿನ ಲಕ್ಕುಂಡಿಯಲ್ಲಿರುವ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಈ ಉತ್ಖನನ ಕಾರ್ಯ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಪುರಾತತ್ವ ಕುರುಹುಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಪತ್ತೆಯಾದ ಈ ನಾಗರ ಆಕೃತಿ ಕಲ್ಲು, ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲ ಉತ್ಖನನ ಕಾರ್ಯದ ವೇಳೆ ಕಾರ್ಮಿಕರಿಗೆ ದೊಡ್ಡ ನಾಗರಹಾವು ಕಾಣಿಸಿಕೊಂಡಿದೆಯಂತೆ. ಹೀಗಾಗಿ ಬೃಹತ್ ಮಟ್ಟದಲ್ಲಿ ನಿಧಿ ಇರಬಹುದು ಎಂದು ಊರವರು ಮಾತನಾಡಿಕೊಳ್ಳುತ್ತಿದ್ದಾರೆ. ನಿಧಿಯನ್ನು ಕಾಯೋ ಹಾವು ತನ್ನ ಗುರುತನ್ನು ತೋರಿಸಿರಬಹುದು ಎಂದು ಹೇಳುತ್ತಿದ್ದಾರೆ.
ಇನ್ನು ಕೆಲವರು ಉತ್ಖನನ ಕಾರ್ಯ ನಡೆಯಬೇಕು ಎಂಬ ಉದ್ದೇಶದಿಂದ ಹಾವು ಇರುವಿಕೆಯನ್ನು ತೋರಿಸುತ್ತಿದೆ. ದೇಗುಲದ ಅವಶೇಷ ಇರಬಹುದು ಹೀಗಾಗಿ ಹಾವು ಕಾಣಿಸಿಕೊಳ್ಳಬಹುದು ಎಂಬ ಮಾತುಗಳನ್ನು ಕೂಡ ಹೇಳುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುರಾತತ್ವ ಇಲಾಖೆ ಮೈಸೂರು ವಲಯದ ಆಯುಕ್ತ ಎ. ದೇವರಾಜು, ಉತ್ಖನನ ವೇಳೆ ಸಿಕ್ಕಿರುವ ಎಲ್ಲಾ ಪ್ರಮುಖ ಕುರುಹುಗಳು ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಉತ್ಖನನ ಜಾಗದಲ್ಲಿ ಈಗಾಗಲೇ ಶಿವಲಿಂಗ ಪೀಠ, ನಾಗ ಮುದ್ರೆ ಇರುವ ಕಲ್ಲುಗಳು ಪತ್ತೆಯಾಗಿದ್ದು, ಅವುಗಳ ಶೈಲಿ, ಕೆತ್ತನೆ ಹಾಗೂ ವಿನ್ಯಾಸಗಳು ಕಲ್ಯಾಣಿ ಚಾಲುಕ್ಯರ ಕಾಲದ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದ್ದಾರೆ.
ಈ ಉತ್ಖನನ ಕಾರ್ಯಕ್ಕೆ ಮೇ 15ರಂದು ಅಧಿಕೃತ ಅನುಮತಿ ದೊರೆತಿತ್ತು. ಜೂನ್ 3ರಂದು ಮುಖ್ಯಮಂತ್ರಿ ಭೂಮಿ ಪೂಜೆ ನೆರವೇರಿಸಿದ್ದರು. ಮಳೆಗಾಲದ ಕಾರಣದಿಂದ ಉತ್ಖನನ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಕಳೆದ ಮೂರು ದಿನಗಳಿಂದ ಪುನಃ ಉತ್ಖನನ ಕಾರ್ಯ ಚುರುಕುಗೊಂಡಿದೆ.
ನಮಗೆ ಚಿನ್ನ-ಬೆಳ್ಳಿ ಅಥವಾ ನಿಧಿ ಅನ್ವೇಷಣೆ ಮುಖ್ಯವಲ್ಲ. ಈ ಉತ್ಖನನದ ಉದ್ದೇಶ ಇತಿಹಾಸದ ಅಮೂಲ್ಯ ಕುರುಹುಗಳನ್ನು ಪತ್ತೆಹಚ್ಚುವುದು ಮಾತ್ರ. ಈ ವೇಳೆ ಏನಾದರೂ ಮೌಲ್ಯಯುತ ವಸ್ತುಗಳು ಸಿಕ್ಕಿದ್ದರೆ, ಅದು ಕೇವಲ ಆಕಸ್ಮಿಕ ಎಂದು ಆಯುಕ್ತ ಎ. ದೇವರಾಜು ಸ್ಪಷ್ಟಪಡಿಸಿದ್ದಾರೆ.
ಉತ್ಖನನದಲ್ಲಿ ಸಿಕ್ಕಿರುವ ಮಹತ್ವದ ಶಿಲಾಕೃತಿಗಳನ್ನು ಪರಿಶೀಲಿಸಲು ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳ ತಂಡ ಉತ್ಖನನ ಸ್ಥಳಕ್ಕೆ ಭೇಟಿ ನೀಡಿದೆ. ಎ. ದೇವರಾಜು – ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ, ಸ್ಮಿತಾ ರೆಡ್ಡಿ – ಪುರಾತತ್ವ ಇಲಾಖೆ ಹಂಪಿ ವಲಯದ ಉಪನಿರ್ದೇಶಕಿ, ಮೈಸೂರು, ಹಂಪಿ ಹಾಗೂ ಧಾರವಾಡ ವಲಯದ ಪುರಾತತ್ವ ಅಧಿಕಾರಿಗಳು, ಶರಣು ಗೊಗೇರಿ – ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ. ಈ ತಂಡವು ನಿನ್ನೆ ಪತ್ತೆಯಾದ ಶಿವಲಿಂಗ ಪೀಠ ಶಿಲೆಯನ್ನು ವೀಕ್ಷಿಸಿದ್ದು, ಉತ್ಖನನ ವೇಳೆ ನಾಗರ ಹೆಡೆ ಕೆತ್ತನೆಯ ಮತ್ತೊಂದು ಅಪರೂಪದ ಶಿಲಾಕೃತಿಯೂ ಪತ್ತೆಯಾಗಿದೆ.
ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಾಸ್ತುಶಿಲ್ಪದ ಪ್ರಮುಖ ಕೇಂದ್ರವಾಗಿದ್ದ ಲಕ್ಕುಂಡಿ, ಈಗಲೂ ಪುರಾತತ್ವ ಸಂಶೋಧಕರ ಗಮನ ಸೆಳೆಯುತ್ತಿದೆ. ಇತ್ತೀಚಿನ ಈ ಪತ್ತೆಗಳು ಲಕ್ಕುಂಡಿಯ ಇತಿಹಾಸವನ್ನು ಇನ್ನಷ್ಟು ಆಳವಾಗಿ ತಿಳಿಯಲು ನೆರವಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.